Advertisement
ಇತ್ತ ಕಳೆದ ನಾಲ್ಕೈದು ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ಮಾಸಿಕ ಗೌರವ ಧನ ಸಿಕ್ಕಿಲ್ಲ, ಅತ್ತ ಕೇಂದ್ರ ಸರ್ಕಾರದಿಂದ ನೀಡಲಾಗುವ ಪ್ರೋತ್ಸಾಹ ಧನ ನಿಯಮಿತವಾಗಿ ಸಿಗುತ್ತಿಲ್ಲ. ಹೀಗೆ ಗೌರವ ಧನವೂ ಇಲ್ಲದೇ ಪ್ರೋತ್ಸಾಹ ಧನವೂ ಸಿಗದೇ ಆಶಾ ಕಾರ್ಯಕರ್ತೆಯರು ಕಂಗಾಲಾಗಿದ್ದಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್‌ಎಚ್‌ಎಂ) ಆಶಾ ಕಾರ್ಯಕರ್ತೆಯವರಿಗೆ ಒಟ್ಟು 34 ಕೆಲಸಗಳನ್ನು ಗುರುತಿಸಲಾಗಿದೆ. ಇದರ ಜೊತೆಗೆ ಪ್ರತಿ ತಿಂಗಳು ಒಂದಲ್ಲಾ ಒಂದು ಸಮೀಕ್ಷೆ ಮಾಡಬೇಕಾಗಿ ಬರುತ್ತದೆ.
Related Articles
Advertisement
ಅದೇ ರೀತಿ ಕೇಂದ್ರ ಸರ್ಕಾರದಿಂದ ನೀಡಲಾಗುವ ಪ್ರೋತ್ಸಾಹಧನವನ್ನು “ಆಶಾ ಸಾಫ್ಟ್’ ಎಂಬ ಸಾಫ್ಟ್ವೇರ್ ಮೂಲಕ ಪಾವತಿಸಲಾಗುತ್ತದೆ. ಕೇಂದ್ರದ ಪ್ರೋತ್ಸಾಹಧನ ನಿರ್ದಿಷ್ಟವಾಗಿಲ್ಲ. ಆಯಾ ತಿಂಗಳ ಕಾರ್ಯಸಾಧನೆ (ಪರ್ಫಾರೆ¾ನ್ಸ್) ಆಧರಿಸಿ ಕೊಡಲಾಗುತ್ತಿದೆ. ಎಷ್ಟು ಕೆಲಸ ಅಥವಾ ಕೇಸ್‌ಗಳನ್ನು ನಿರ್ವಹಿಸುತ್ತಾರೆ ಅದಕ್ಕೆ ತಕ್ಕಂತೆ ಪ್ರೋತ್ಸಾಹಧನ ಸಿಗುತ್ತದೆ. ಅದಕ್ಕಾಗಿ ಪ್ರತಿ ತಿಂಗಳ ಕೆಲಸಗಳನ್ನು ಸಾಫ್ಟ್ವೇರ್‌ನಲ್ಲಿ ಅಳವಡಿಸಬೇಕು. ಅಳವಡಿಸಿದ ಎಲ್ಲ ಕೆಲಸಗಳಿಗೂ ಅದೇ ತಿಂಗಳು ಪ್ರೋತ್ಸಾಹಧನ ಸಿಗುವುದಿಲ್ಲ. ಒಂದಿಷ್ಟು ಕೆಲಸಗಳನ್ನು ಬಾಕಿ ಉಳಿಸಿಕೊಳ್ಳಲಾಗುತ್ತದೆ. ಮುಂದಿನ ತಿಂಗಳು ಆ ಕೆಲಸಗಳು ಬೇರೆಯವರ ಹೆಸರಿಗೆ ಹೋಗಿರುತ್ತದೆ. ಇದರ ಜೊತೆಗೆ ಒಬ್ಬರು ಅಳವಡಿಸಿದ (ಫೀಡ್) ಕೆಲಸಗಳು ಮತ್ತೂಬ್ಬ ಆಶಾ ಕಾರ್ಯಕರ್ತೆಯ ಲೆಕ್ಕಕ್ಕೆ ಹೋಗಿರುತ್ತದೆ. ಈ ರೀತಿ ಆಶಾ ಸಾಫ್ಟ್ನಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳಿದ್ದು, ಇದರಿಂದಾಗಿ ಕೇಂದ್ರ ಪ್ರೋತ್ಸಾಹಧನ ನಿಯಮಿತವಾಗಿ ಸಿಗುತ್ತಿಲ್ಲ ಅನ್ನುವುದು ಆಶಾ ಕಾರ್ಯಕರ್ತೆಯರ ಆರೋಪವಾಗಿದೆ.
“ಖಜಾನೆ-2 ಮೂಲಕ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಪಾವತಿಸುವ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಈಗಾಗಲೇ ಎಲ್ಲ ಆಶಾ ಕಾರ್ಯಕರ್ತೆಯರ ಮಾಹಿತಿಗಳನ್ನು ಸಾಫ್ಟ್ವೇರ್‌ನಲ್ಲಿ ಅಳವಡಿಸಲಾಗಿದೆ. ಮುಂದಿನ ಒಂದು ವಾರದಲ್ಲಿ ಗೌರವಧನ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು’– ಪಂಕಜ್‌ಕುಮಾರ್ ಪಾಂಡೆ, ಆಯುಕ್ತರು, ಆರೋಗ್ಯ ಇಲಾಖೆ. “ಖಜಾನೆ-2 ಇದರ ತಾಂತ್ರಿಕ ಸಮಸ್ಯೆಗಳಿಂದಾಗಿ ಕಳೆದ ನಾಲ್ಕೈದು ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವ ಧನ ಸಿಕ್ಕಿಲ್ಲ. ಅದೇ ರೀತಿ ಆಶಾ ಸಾಫ್ಟ್ನಲ್ಲಿನ ಗೊಂದಲಗಳಿಂದಾಗಿ ಕೇಂದ್ರ ಸರ್ಕಾರದ ಪ್ರೋತ್ಸಾಹಧನವೂ ನಿಯಮಿತವಾಗಿ ಸಿಗುತ್ತಿಲ್ಲ. ಈ ಬಗ್ಗೆ ಕೇಳಿದರೆ, ಇನ್ನೊಂದು ವಾರ, ಮುಂದಿನ ವಾರ ಎಂದು ಅಧಿಕಾರಿಗಳು ಕಾಲ ಸಾಗ ಹಾಕುತ್ತಿದ್ದಾರೆ’.
– ಡಿ. ನಾಗಲಕ್ಷ್ಮೀ, ಕಾರ್ಯದರ್ಶಿ, ರಾಜ್ಯ ಆಶಾ ಕಾರ್ಯಕರ್ತೆಯರ ಸಂಘ. ಕೇಂದ್ರದ ಗೌರವಧನ ಏರಿಕೆ, ಗೊಂದಲ
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ (ಐಸಿಡಿಸಿ) ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ(ಎನ್‌ಎಚ್‌ಎಂ) ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಇದರ ಬೆನ್ನಲ್ಲೇ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸಂಘಟನೆಗಳಿಂದ ಅಪಸ್ವರ ಕೇಳಿಬಂದಿದೆ. ಕೇಂದ್ರ ಸರ್ಕಾರದ ಈ ತೀರ್ಮಾನದಿಂದ ರಾಜ್ಯದ 1.25 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಅದೇ ರೀತಿ 40 ಸಾವಿರ ಆಶಾ ಕಾರ್ಯಕರ್ತರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕೇಂದ್ರ ಪ್ರಾಯೋಜಕತ್ವ ಯೋಜನೆ. ಮೊದಲು ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಹಂಚಿಕೆ ಅನುಪಾತ ಶೇ 90:10ರಷ್ಟು ಇತ್ತು. ಆದರೆ, ಈಗ ಬದಲಾಗಿದ್ದು ಪ್ರಸ್ತುತ ಕೇಂದ್ರದ ಪಾಲು ಶೇ.25 ಮತ್ತು ರಾಜ್ಯ ಸರ್ಕಾರದ ಪಾಲು ಶೇ.75 ಇದೆ. ಅದರಂತೆ, ಕೇಂದ್ರದ 1,800 ರೂ. ಮತ್ತು ರಾಜ್ಯದ 6,200 ರೂ. ಸೇರಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 8 ಸಾವಿರ ಗೌರವಧನ ಸಿಗುತ್ತಿದೆ. ಅದೇ ರೀತಿ ಸಹಾಯಕಿಯರಿಗೆ ಕೇಂದ್ರದ 900 ರೂ. ಮತ್ತು ರಾಜ್ಯದ 3,100 ಸೇರಿ 4 ಸಾವಿರ ರೂ. ಗೌರವಧನ ಸಿಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿರುವ ಪರಿಷ್ಕೃತ ಗೌರವಧನದ ಬಗ್ಗೆ ಸಾಕಷ್ಟು ಗೊಂದಲಗಳು ಇವೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಗಳು ಹೇಳುತ್ತಿವೆ. ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ಸಂಪೂರ್ಣ ಕೇಂದ್ರ ಅನುದಾನಿತ ಯೋಜನೆ. ಅದಾಗ್ಯೂ ಈ ಯೋಜನೆಯಡಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ 3,500 ರೂ. ಮಾಸಿಕ ಗೌರವ ಧನ ನಿಗದಿಪಡಿಸಿದೆ. ಆದರೆ, ಕೇಂದ್ರ ಸರ್ಕಾರ ಗೌರವ ಧನ ನಿಗದಿಪಡಿಸಿಲ್ಲ. ಆಶಾ ಕಾರ್ಯಕರ್ತೆಯರ ಕಾರ್ಯಕ್ಷಮತೆ ಆಧರಿಸಿ ಗೌರವ ಧನ ನೀಡುತ್ತಿತ್ತು. ಅದರಂತೆ ಕೇಂದ್ರದಿಂದ ಪಡೆಯುವ ಗೌರವಧನ ಏಕ ಪ್ರಕಾರವಾಗಿರಲಿಲ್ಲ. ಈಗ ಗೌರವ ಧನ ದುಪ್ಪಟ್ಟು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಅದಕ್ಕೆ ಮಾನದಂಡಗಳೇನು ಅನ್ನುವುದು ಸ್ಪಷ್ಟವಾಗಿಲ್ಲ ಎಂದು ಆಶಾ ಕಾರ್ಯಕರ್ತರ ಸಂಘಟನೆಯ ವಾದವಾಗಿದೆ. – ರಫೀಕ್ ಅಹ್ಮದ್