ಉಡುಪಿ: ಬದಲಾವಣೆ ಅಗತ್ಯವಾದರೂ ಮೂಲ ಸ್ವರೂಪಕ್ಕೆ ಧಕ್ಕೆಯಾಗದೆ ಯಕ್ಷಗಾನ ಉಳಿಸಬೇಕು ಎಂದು ಕಲಾ ವಿಮರ್ಶಕ ಎ. ಈಶ್ವರಯ್ಯ ಹೇಳಿದರು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ, ಮಣಿಪಾಲ ವಿ.ವಿ. ಆಶ್ರಯದಲ್ಲಿ ಎಂಜಿಎಂ ಕಾಲೇಜಿನಲ್ಲಿ ಸೋಮವಾರ ಆರಂಭಗೊಂಡ ನಾಲ್ಕು ದಿನಗಳ ತೆಂಕು-ಬಡಗು ತಿಟ್ಟಿನ ಯಕ್ಷಗಾನ, ಮೂಡಲಪಾಯದ ಭಾಗವತಿಕೆ, ಹೆಜ್ಜೆಗಾರಿಕೆಗಳ ದಾಖಲೀಕರಣ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಬೇರೆ ಬೇರೆ ಕಲಾಪ್ರಕಾರಗಳನ್ನು ಕಂಡಾಗ ಅದು ತತ್‌ಕ್ಷಣ ಮನಸ್ಸಿಗೆ ಗೋಚರಿಸುತ್ತದೆ. ಅದೇ ರೀತಿ ಯಕ್ಷಗಾನ ಕಂಡಾಕ್ಷಣ ಅದು ಯಾವ ಪ್ರಕಾರದ್ದು ಎಂದು ಗೋಚರಿಸುವಂತಾಗಬೇಕು. ಇಂದಿನ ಕಾಲಘಟ್ಟದಲ್ಲಿ ದಾಖಲೀಕರಣದ ಅಗತ್ಯವಿದ್ದು, ಅಕಾಡೆಮಿ ದಾಖಲೀಕರಣ ಮಾಡುತ್ತಿರುವುದು ಸ್ತುತ್ಯರ್ಹ ಎಂದರು.
ಅಕಾಡೆಮಿ ಅಧ್ಯಕ್ಷ ಬೆಳಗಲ್ಲು ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಸದಸ್ಯ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ, ಹಿರಿಯ ಕಲಾವಿದರಾದ ಕೋಳ್ಯೂರು ರಾಮಚಂದ್ರ ರಾವ್, ಜಯಂತ ಕುಮಾರ್, ಪ್ರಾಂಶುಪಾಲೆ ಪ್ರೊ| ಕುಸುಮಾ
ಕಾಮತ್ ಅತಿಥಿಗಳಾಗಿದ್ದರು. ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ಪ್ರೊ| ವರದೇಶ್ ಹಿರೇಗಂಗೆ ಸ್ವಾಗತಿಸಿದರು. ಪ್ರೊ| ಉದಯಕುಮಾರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.