“ವೀಕೆಂಡ್ ವಿಥ್ ರಮೆಶ್’ನ ಮೂರನೆಯ ಆವೃತ್ತಿ ಶುರುವಾಗುವುದಕ್ಕೆ ವೇದಿಕೆ ಸಜ್ಜಾಗಿದೆ. ಇದೇ ತಿಂಗಳ 25ರಂದು ಪ್ರತಿ ಶನಿವಾರ ಮತ್ತು ಭಾನುವಾರ “ವೀಕೆಂಡ್ ವಿಥ್ ರಮೇಶ್’ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಈಗಾಗಲೇ ಪ್ರಕಾಶ್ ರೈ, ಜಗ್ಗೇಶ್ ಮತ್ತು ಅರ್ಜುನ್ ಜನ್ಯ ಅವರ ಎಪಿಸೋಡುಗಳ ಚಿತ್ರೀಕರಣ ಮುಗಿದಿದೆ.
ಎಲ್ಲಾ ಸರಿ, ಈ “ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮದಲ್ಲಿ ಹಾಲಿವುಡ್‌ನ ಜನಪ್ರಿಯ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಸಹ ಭಾಗಿಯಾಗುತ್ತಿದ್ದಾರೆ ಎನ್ನುವುದು ಈ ಸೀಸನ್‌ನ ಸ್ಪೆಷಾಲಿಟಿ. ಕಾರ್ಯಕ್ರಮಕ್ಕೆ ಸ್ಟೀವನ್ ಸ್ಪೀಲ್‌ಬರ್ಗ್ ಬರುತ್ತಾರಾ ಎಂಬ ಪ್ರಶ್ನೆ ಬೇಡ. ಆದರೆ, ಅವರ ಧ್ವನಿ ಖಂಡಿತಾ ಈ ಕಾರ್ಯಕ್ರಮದಲ್ಲಿ ಕೇಳುತ್ತದೆ.
ಹೇಗಂತೀರಾ? ಪ್ರಕಾಶ್ ರೈ ಅವರಿಗೆ ಶುಭ ಕೋರಿ ಸ್ಪೀಲ್‌ಬರ್ಗ್ ಒಂದು ಆಡಿಯೋ ಬೈಟ್ ಕಳಿಸಿದ್ದಾರಂತೆ. ಆ ಆಡಿಯೋ ಬೈಟ್‌ನ್ನು ಕಾರ್ಯಕ್ರಮದಲ್ಲಿ ಕೇಳಿಸಲಾಗುತ್ತದಂತೆ. ಅದೇ ಆ ಎಪಿಸೋಡ್‌ನ ಹೈಲೈಟ್ ಆಗಲಿದೆ ಎನ್ನುತ್ತಾರೆ ಜೀ ಕನ್ನಡದ ರಾಘವೇಂದ್ರ ಹುಣಸೂರು.
“ಇವೆಲ್ಲಾ ನಮ್ಮ ರೀಸರ್ಚ್ ತಂಡದಿಂದ ಸಾಧ್ಯವಾಗಿದೆ. ನಮ್ಮ ನಿರ್ದೇಶಕ ಪ್ರಕಾಶ್ ಅವರು ಯಾವುದೋ ಲಿಂಕ್ ಹಿಡಿದು ಹೋದರು. ಕೊನೆಗೆ ಪ್ರಕಾಶ್ ರೈ ಮತ್ತು ಸ್ಟೀವನ್ ಸ್ಪೀಲ್‌ಬರ್ಗ್ ಅವರ ಗೆಳತನದ ಬಗ್ಗೆ ಗೊತ್ತಾಯಿತು. ಏನೋ ಮಾಡಿ ಸ್ಪೀಲ್‌ಬರ್ಗ್ ಅವರಿಂದ ಬೈಟ್ ತರಿಸಿದ್ದಾರೆ. ಈ ರೀತಿ ಸ್ಪೀಲ್‌ಬರ್ಗ್ ಅವರ ಧ್ವನಿ ಲಾಸ್ ಆ್ಯಂಜಲೀಸ್‌ನಿಂದ ಅಬ್ಬಯ್ಯ ನಾಯ್ಡು ಸ್ಟುಡಿಯೋವರೆಗೂ ಬಂದಿದೆ.
ನಮ್ಮ ಜೀ ಟಿವಿಯದ್ದು ಹಾಲಿವುಡ್‌ನಲ್ಲೂ ನೆಟ್‌ವರ್ಕ್ ಇದೆ. ಆದರೆ, ಅದನ್ನೆಲ್ಲಾ ರೀಸರ್ಚ್ ಮಾಡಿ, ತರಿಸುವುದು ಅಷ್ಟು ಸುಲಭದ ವಿಚಾರವಲ್ಲ’ ಎನ್ನುತ್ತಾರೆ ರಾಘವೇಂದ್ರ ಹುಣಸೂರು. ಇನ್ನು ಈ ಬಾರಿ ಸಿನಿಮಾದೆವರ ಜೊತೆಗೆ ಇತರೆ ಕ್ಷೇತ್ರದ ಗಣ್ಯರು ಸಹ ಭಾಗವಹಿಸುವ ಸಾಧ್ಯತೆ ಇದೆತಂತೆ.
ಮೈಸೂರಿನ ಎಸ್‌ಪಿಯಾಗಿರುವ ರವಿ, ಗಂಗಾವತಿ ಪ್ರಾಣೇಶ್, ಸಂತೋಷ್ ಹೆಗ್ಡೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಅನಿಲ್ ಕುಂಬ್ಳೆ ಜೊತೆಗೆ ಚಿತ್ರರಂಗದಿಂದ ವಿ. ಹರಿಕೃಷ್ಣ, ಜಯಂತ್ ಕಾಯ್ಕಿಣಿ, ರಮ್ಯಾ ಮುಂತಾದವರು ಈ ಮೂರನೆಯ ಸೀಸನ್‌ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ.