Advertisement

ಛಲದಂಕಮಲ್ಲ ಸ್ಟೀವ್‌ ಸ್ಮಿತ್‌

08:52 PM Aug 09, 2019 | mahesh |

ಆ್ಯಷಸ್‌ನ ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಶತಕ
ನಿಷೇಧ ಮುಗಿಸಿದ ಆಟಗಾರನ ಅಸಾಮಾನ್ಯ ಪುನರಾಗಮನ

Advertisement

ಆಸ್ಟ್ರೇಲಿಯದ ಈ ಹುಡುಗ ವಿಶ್ವಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲೊಬ್ಬ ಎಂದು ನಿರ್ದಾಕ್ಷಿಣ್ಯವಾಗಿ ಹೇಳಬಹುದು. ತನ್ನ ಆಟದ ಮೂಲಕ, ಹಠದ ಮೂಲಕ, ಬದ್ಧತೆಯ ಮೂಲಕ ಈ ಕ್ರಿಕೆಟಿಗ ವರ್ತಮಾನದಲ್ಲಿ ಕುಸಿಯುತ್ತಿರುವ ಆಸ್ಟ್ರೇಲಿಯ ಕ್ರಿಕೆಟಿನ ಗುಣಮಟ್ಟವನ್ನು ಎತ್ತಿ ಹಿಡಿದಿದ್ದಾನೆ. ಅಧೋಗತಿಗೆ ಮುಟ್ಟಿದ್ದ ತಂಡದಲ್ಲಿ ಮತ್ತೆ ಭರವಸೆ ಹುಟ್ಟಿಸಿದ್ದಾನೆ. ಈತನ ಬದುಕಿನಲ್ಲಿ ಅದೊಂದು ಕಪ್ಪುಚುಕ್ಕೆ ಇಲ್ಲದೇ ಹೋಗಿದ್ದರೆ, ಬಹುಶಃ ಈತನದ್ದು ಪರಿಪೂರ್ಣ ಕ್ರಿಕೆಟ್‌ ಬದುಕು ಎನ್ನಲು ಸಾಧ್ಯವಿತ್ತು. ಇನ್ನೊಂದು ರೀತಿಯಲ್ಲಿ ನೋಡಿದರೆ, ಈ ಕಪ್ಪುಚುಕ್ಕೆಯ ನಂತರವೂ ಕ್ರಿಕೆಟ್‌ಗೆ ಮರಳಿದ ರೀತಿ, ಅವನ ಕೆಚ್ಚು ಅನನ್ಯ.

ಆತ ಸ್ಟೀವ್‌ ಸ್ಮಿತ್‌!
30 ವರ್ಷದ, ಸಿಡ್ನಿ ಮೂಲದ ಸ್ಟೀವ್‌ ಸ್ಮಿತ್‌ಗೆ ಒಬ್ಬ ಅದ್ಭುತ ಬ್ಯಾಟ್ಸ್‌ಮನ್‌ಗಿರಬೇಕಾದ, ನಾಯಕನಿಗಿರಬೇಕಾದ ಎಲ್ಲ ತಾಕತ್ತೂ ಇದೆ. ಏಕಾಂಗಿಯಾಗಿ ಕಡೆಯತನಕ ಹೋರಾಡಿ ಫ‌ಲಿತಾಂಶ ಬದಲಿಸಿಬಲ್ಲ ಶಕ್ತಿ ಈತನಿಗೆ ಸಿದ್ಧಿಸಿದೆ. ಇವನ ಹೋರಾಟಕಾರಿ ಬ್ಯಾಟಿಂಗ್‌, ಎಲ್ಲ ನೋವು, ಅವಮಾನಗಳ ನಡುವೆ ಸೆಡ್ಡು ಹೊಡೆದು ನಿಲ್ಲಬಲ್ಲ ಮನೋಬಲ, ಜಗತ್ತಿನ ಎಲ್ಲ ಕ್ರಿಕೆಟಿಗರಿಗೆ ಮಾದರಿ. ಹೌದು ಈತ ತಪ್ಪು ಮಾಡಿದ್ದಾನೆ. ತಪ್ಪು ಮಾಡದವರ್ಯಾರು? ತಪ್ಪನ್ನು ತಿದ್ದಿಕೊಂಡು, ಅವಮಾನಗಳನ್ನು ಮರೆತು ಮತ್ತೆ ಯಶಸ್ಸು ಕಾಣುವುದು ಅಸಾಮಾನ್ಯರಿಗೆ ಮಾತ್ರ ಸಾಧ್ಯ. ಅದನ್ನು ಸಾಧಿಸಿದ್ದು ಸ್ಟೀವ್‌ ಸ್ಮಿತ್‌ರ ಹೆಗ್ಗಳಿಕೆ. ಸಾಮಾನ್ಯವಾಗಿ ಆಗುವ ಗಾಯ, ಆಟದಲ್ಲಿನ ಗುಣಮಟ್ಟದ ಕುಸಿತ, ತಂಡದಲ್ಲಿ ಸ್ಥಾನ ಕಳೆದುಕೊಳ್ಳುವುದು, ಇಂತಹ ಅನುಭವಗಳಿಂದಲೇ ಕುಸಿದುಹೋಗಿ ಕ್ರಿಕೆಟ್‌ ಬದುಕು ಮುಗಿಸಿಕೊಳ್ಳುವ ಆಟಗಾರರನ್ನು ನೋಡಿದ್ದೇವೆ. ಆದರೆ ವರ್ತಮಾನ ಕ್ರಿಕೆಟಿನ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರಾಗಿದ್ದುಕೊಂಡು, 1 ವರ್ಷ ನಿಷೇಧಕ್ಕೊಳಗಾದ ನಂತರ ಮೈದಾನಕ್ಕೆ ಮರಳುವುದು, ಎಂದಿನಂತೆ ಆಟ ಮುಂದುವರಿಸುವುದು ಸಾಮಾನ್ಯ ಸಾಧನೆಯಲ್ಲ.

ಮೂಲತಃ ಸ್ಟೀವ್‌ ಸ್ಮಿತ್‌ ಆಕ್ರಮಣ, ತಾಳ್ಮೆ ಮಿಶ್ರಿತ ಸಂತುಲಿತ ಬ್ಯಾಟ್ಸ್‌ಮನ್‌. ಹಾಗೆಯೇ ಬಲಗೈ ಲೆಗ್‌ಸ್ಪಿನ್ನರ್‌ ಕೂಡ ಹೌದು. ಆಸ್ಟ್ರೇಲಿಯ ತಂಡಕ್ಕೆ ಆಯ್ಕೆಯಾಗಿದ್ದೇ ಬಲಗೈ ಲೆಗ್‌ಸ್ಪಿನ್ನರ್‌ ಎಂಬ ಕಾರಣದಿಂದ. ಮುಂದೆ ತನ್ನ ಬ್ಯಾಟಿಂಗ್‌ ಶಕ್ತಿಯನ್ನು ತೋರುತ್ತಾ ತಂಡದ ಅಗ್ರ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. 3,4ನೇ ಕ್ರಮಾಂಕದಲ್ಲಿ ಅಂಟುಹಾಕಿಕೊಂಡರು. ಇನ್ನೂ ಮುಂದೆ ವಿಶ್ವಕ್ರಿಕೆಟ್‌ನ ಸಮರ್ಥ ದಾಂಡಿಗ ಎಂಬ ಗೌರವ ಒಲಿಯಿತು. 2015ರಲ್ಲಿ ತಂಡದ ನಾಯಕತ್ವವೇ ಒಲಿದುಬಂತು. ಐದು ವಿಶ್ವಕಪ್‌ಗ್ಳನ್ನು ಗೆದ್ದಿರುವ ವಿಶ್ವದ ಏಕೈಕ ತಂಡ ಆಸ್ಟ್ರೇಲಿಯವನ್ನು ಮುನ್ನಡೆಸುವುದು ಒಂದು ಮಹಾಗೌರವ. ಹಿಂದಿನ ನಾಯಕರು ಹಾಕಿಕೊಟ್ಟ ಪರಂಪರೆಯನ್ನು ಅಷ್ಟೇ ಗೌರವಯುತವಾಗಿ ಮುನ್ನಡೆಸಿಕೊಂಡು ಹೋಗುವುದು ಇನ್ನೊಂದು ಸವಾಲು. ಸ್ಟೀವ್‌ ಸ್ಮಿತ್‌ ತಾನು ಆಸ್ಟ್ರೇಲಿಯ ಕ್ರಿಕೆಟಿನ ನಾಯಕನಾಗಿರುವರೆಗೆ ಆ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಸದ್ಯ ಅವರು ನಾಯಕತ್ವದಲ್ಲಿಲ್ಲ, ನಿಯಮಗಳ ಪ್ರಕಾರ ಇನ್ನೊಂದು ವರ್ಷ ಅವರು ಆಸೀಸ್‌ ತಂಡದ ನಾಯಕರಾಗುವುದು ಸಾಧ್ಯವೂ ಇಲ್ಲ.

ವಿಶ್ವಕಪ್‌ನಲ್ಲಿ ಮಿನುಗಿದ ತಾರೆ
ಚೆಂಡು ವಿರೂಪ ಮಾಡಿ 1 ವರ್ಷ ನಿಷೇಧಕ್ಕೊಳಗಾಗಿದ್ದ ಸ್ಟೀವ್‌ ಸ್ಮಿತ್‌ ಮಾ.29ರಂದು ಅದರಿಂದ ಹೊರಬಂದರು. ಈ ವರ್ಷದ ಐಪಿಎಲ್‌ನಲ್ಲಿ ರಾಜಸ್ಥಾನ್‌ ಪರ ಆಡಿ, ಉತ್ತಮ ಎನ್ನುವ ಸಾಧನೆಯನ್ನೇ ಮಾಡಿದರು. ಮೇ 30ರಂದು ಆರಂಭವಾದ ಏಕದಿನ ವಿಶ್ವಕಪ್‌ನಲ್ಲಿ ಆಡಲು ಅವಕಾಶ ಪಡೆದರು. ಇಲ್ಲಿ ಅಸಾಮಾನ್ಯ ಎನ್ನುವ, ವಿಶ್ವಕ್ರಿಕೆಟ್‌ನಲ್ಲಿ ಬಹಳ ಚರ್ಚೆಗೊಳಗಾದ ಇನಿಂಗ್ಸ್‌ ಸ್ಮಿತ್‌ಗೆ ಸಾಧ್ಯವಾಗಲಿಲ್ಲ. ಆದರೆ ಅಗತ್ಯವಿದ್ದಾಗಲೆಲ್ಲ ತಂಡದ ನೆರವಿಗೆ ನಿಂತು, ಸೆಮಿಫೈನಲ್‌ ಸೇರಿ ಆಡಿದ 10 ಪಂದ್ಯಗಳಲ್ಲಿ 4 ಅರ್ಧಶತಕ ಬಾರಿಸಿದರು. ಕೂಟದಲ್ಲಿ ಗರಿಷ್ಠ ಅರ್ಧಶತಕ ಗಳಿಸಿದವರ ಪಟ್ಟಿಯಲ್ಲಿ 54ನೇ ಸ್ಥಾನ ಪಡೆದರು. 379 ರನ್‌ ಗಳಿಸಿದ ಅವರು, ಒಟ್ಟು ರನ್‌ಗಳಿಕೆಯಲ್ಲಿ 13ನೇ ಸ್ಥಾನ ಪಡೆದರು. 1 ವರ್ಷ ಅಂತಾರಾಷ್ಟ್ರೀಯ, ದೇಶೀಯ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾದ ಆಟಗಾರನಿಂದ ಇದಕ್ಕಿಂತ ಹೆಚ್ಚು ನಿರೀಕ್ಷೆ ಸಾಧ್ಯವೇ ಇಲ್ಲ. ವಿಶ್ವಕಪ್‌ನಲ್ಲಿ ಹೆಚ್ಚು ಕಡಿಮೆ ತಣ್ಣಗೆ ಆಟ ಮುಗಿಸಿದ ಸ್ಮಿತ್‌, ತನ್ನ ನಿಜವಾದ ತಾಕತ್ತು ತೋರಿದ್ದು ಆ್ಯಷಸ್‌ ಟೆಸ್ಟ್‌ನಲ್ಲಿ.

Advertisement

ಛಲದಂಕಮಲ್ಲನ ಆ್ಯಷಸ್‌ ವಿಕ್ರಮ
ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯ ತಂಡ ಇಂಗ್ಲೆಂಡ್‌ ವಿರುದ್ಧ ಸೋತು ಹೊರಬಿದ್ದಿತ್ತು. ಇದೊಂದು ನೋವು ಅದನ್ನು ಕಾಡುತ್ತಲೇ ಇತ್ತು. ಇನ್ನೊಂದು ಕಡೆ ವಿಶ್ವಕಪ್‌ ಪೂರ್ತಿ ಚೆಂಡು ವಿರೂಪದಲ್ಲಿ ನಿಷೇಧಕ್ಕೊಳಗಾಗಿದ್ದ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ರನ್ನು ಇಂಗ್ಲೆಂಡ್‌ ಪ್ರೇಕ್ಷಕರು ಅಣಕಿಸುತ್ತಲೇ ಇದ್ದರು. ಈ ನೋವಿನಿಂದ ನೊಂದಿದ್ದ ಆಸ್ಟ್ರೇಲಿಯಕ್ಕೆ ಇಂಗ್ಲೆಂಡ್‌ನ‌ಲ್ಲೇ ನಡೆಯುವ ಆ್ಯಷಸ್‌ನಲ್ಲಿ ಅದಕ್ಕೆ ಬಲವಾದ ಉತ್ತರ ಕೊಡುವ ಬಯಕೆಯಿತ್ತು. ಆದರೆ ಈ ಅಣಕ ಆ್ಯಷಸ್‌ನಲ್ಲೂ ಮುಂದುವರಿದಿತ್ತು, ಸ್ಮಿತ್‌ ರೊಚ್ಚಿಗೆದ್ದಿದ್ದರು. ಅದು ಆ.1ರಿಂದ 5ವರೆಗೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲನೇ ಟೆಸ್ಟ್‌ನಲ್ಲಿ ಸಾಬೀತಾಯಿತು.

ಮೊದಲನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯ 284ಕ್ಕೆ ಆಲೌಟಾಯಿತು. ಇದಕ್ಕೂ ಹೀನಾಯವಾಗಿ ಆ ತಂಡ ಕುಸಿಯುವುದನ್ನು ಸ್ಟೀವ್‌ ಸ್ಮಿತ್‌ ತಮ್ಮ ಏಕಾಂಗಿ ಹೋರಾಟದ ಮೂಲಕ ತಡೆದರು. ಅದರಲ್ಲಿ ಅವರ ಗಳಿಕೆ 144 ರನ್‌. ಇಡೀ ಇನಿಂಗ್ಸ್‌ನಲ್ಲಿ ಇನ್ನೊಂದು ಕಡೆ ಬೌಲರ್‌ಗಳನ್ನಿಟ್ಟುಕೊಂಡು ಆಡಿ ಈ ಅದ್ಭುತ ಶತಕ ಗಳಿಸಿದರು. ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 374 ರನ್‌ ಗಳಿಸಿ ಭಾರೀ ಮುನ್ನಡೆಯನ್ನೇ ಪಡೆಯಿತು. ಈಗ ಎದುರಾಗಿದ್ದು ನಿಜವಾದ ಸವಾಲು. ಇಂತಹ ಭಾರೀ ಮುನ್ನಡೆ ಹಿಂದೆ ಹಾಕಿ, ಇಂಗ್ಲೆಂಡ್‌ನ‌ ತೀಕ್ಷ್ಣ ವೇಗಿಗಳಿಗೆ ಉತ್ತರ ಕೊಟ್ಟು, ಗೆಲ್ಲುವಂತಹ ಮೊತ್ತವೊಂದನ್ನು ಗಳಿಸಬೇಕಾಗಿತ್ತು. ಇಲ್ಲೂ ತಂಡದ ನೆರವಿಗೆ ಧಾವಿಸಿದ್ದು ಸ್ಮಿತ್‌. ಅವರು 2ನೇ ಇನಿಂಗ್ಸ್‌ನಲ್ಲಿ 142 ರನ್‌ ಗಳಿಸಿದರು. ಆಸ್ಟ್ರೇಲಿಯ ಇಂಗ್ಲೆಂಡ್‌ಗೆ 398 ರನ್‌ ಗುರಿ ನೀಡಿತು. ಬರೀ 146 ರನ್‌ಗೆ ಇಂಗ್ಲೆಂಡ್‌ ಆಲೌಟಾಯಿತು. ಆಸ್ಟ್ರೇಲಿಯ 251 ರನ್‌ಗಳ ಭಾರೀ ಗೆಲುವು ಪಡೆಯಿತು.

ಒಂದು ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿ ತಾನೇನು ಎಂದು ತೋರಿಸಿದರು. ಸೋಲಿನ ಕಡೆಗೆ ಹೊರಟಿದ್ದ ಆಸ್ಟ್ರೇಲಿಯದ ಹಣೆಬರೆಹವನ್ನೇ ಬದಲಿಸಿದರು. ಕೆಲವು ವರ್ಷಗಳ ಹಿಂದೆ ಕ್ರಿಕೆಟ್‌ನ ಅಘೋಷಿತ ನಾಯಕನಾಗಿದ್ದ ಆಸ್ಟ್ರೇಲಿಯದ ನೈಜಶಕ್ತಿಯನ್ನು ಅನಾವರಣಗೊಳಿಸಿದರು. ಅದೆಲ್ಲಕ್ಕಿಂತ ಹೆಚ್ಚಾಗಿ ಕುಸಿದುಹೋಗಿದ್ದ ಆಸ್ಟ್ರೇಲಿಯದ ಆತ್ಮಶಕ್ತಿಯನ್ನು ಪುನಃಸ್ಥಾಪಿಸಿದರು. ಇದಕ್ಕಿಂತ ಅದ್ಭುತ ಇನ್ನೇನು ಬೇಕು?

ಏನಿದು ಚೆಂಡು ವಿರೂಪ ಪ್ರಕರಣ?
2018 ಮಾರ್ಚ್‌ನಲ್ಲಿ ಆಸ್ಟ್ರೇಲಿಯ, ದ.ಆಫ್ರಿಕಾಕ್ಕೆ ತೆರಳಿತ್ತು. ಮೊದಲೆರಡು ಟೆಸ್ಟ್‌ ಪಂದ್ಯಗಳಲ್ಲಿ ಒಂದನ್ನು ಸೋತು, ಇನ್ನೊಂದನ್ನು ಗೆದ್ದಿತ್ತು. 3ನೇ ಟೆಸ್ಟ್‌ನಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿತ್ತು. ದ.ಆಫ್ರಿಕಾ ಪ್ರೇಕ್ಷಕರ ಅಣಕ, ತಂಡ ಸೋತರೆ ಅದೊಂದು ಅಪರಾಧ ಎಂದು ನೋಡುವ ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿಯ ಒತ್ತಡ, ಇದೆಲ್ಲದರಿಂದಾಗಿ ಗೆಲ್ಲಲೇಬೇಕಾದ ಒತ್ತಡಕ್ಕೊಳಗಾದ ನಾಯಕ ಸ್ಟೀವ್‌ ಸ್ಮಿತ್‌, ಉಪನಾಯಕ ಡೇವಿಡ್‌ ವಾರ್ನರ್‌, ಬ್ಯಾಟ್ಸ್‌ಮನ್‌ ಕ್ಯಾಮರೂನ್‌ ಬ್ಯಾನ್‌ಕ್ರಾಫ್ಟ್ ಚೆಂಡನ್ನು ವಿರೂಪ ಮಾಡಿಬಿಟ್ಟರು. ಅದು ಜಗತ್ತಿಗೆ ಗೊತ್ತಾಯಿತು. ಹೀನಾಯವಾಗಿ ಸರಣಿ ಸೋತು ಸ್ವದೇಶಕ್ಕೆ ಮರಳಿದ ಆಸ್ಟ್ರೇಲಿಯಕ್ಕೆ ಬರಸಿಡಿಲು ಕಾದಿತ್ತು. ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿ ಸ್ಟೀವ್‌ ಸ್ಮಿತ್‌, ಡೇವಿಡ್‌ ವಾರ್ನರ್‌ಗೆ 1 ವರ್ಷ, ಬ್ಯಾನ್‌ಕ್ರಾಫ್ಟ್ಗೆ 9 ತಿಂಗಳು ನಿಷೇಧ ವಿಧಿಸಿತು. ಮೊದಲೇ ಕುಸಿದಿದ್ದ ಆಸ್ಟ್ರೇಲಿಯ ಈ ಏಟಿಗೆ ಸಿಕ್ಕಿ, ಮುಂದೆ ಎಲ್ಲ ತಂಡಗಳ ವಿರುದ್ಧ ಸೋಲಲು ಆರಂಭಿಸಿತು.

ಟೆಸ್ಟ್‌ನಲ್ಲಿ ಸ್ಮಿತ್‌ ವರ್ಸಸ್‌ ಕೊಹ್ಲಿ
ಸ್ಮಿತ್‌                                       ಕೊಹ್ಲಿ
ಪಂದ್ಯ 65                                  77
ರನ್‌ 6485                               6613
ಸರಾಸರಿ 62.96                       53.76
ಗೆಲುವಿನ ಸರಾಸರಿ 84.95      58.68
ಶತಕ 25                                    25
ಜಯ ತಂದ ಶತಕ 17                  11
ದ್ವಿಶತಕ 2                                       6
25 ಶತಕಕ್ಕೆ ಬಳಸಿದ ಇನಿಂಗ್ಸ್‌ 119  127
6000 ರನ್‌ಗೆ ಬಳಿಸಿದ ಇನಿಂಗ್ಸ್‌ 111  119
ಸಿಕ್ಸರ್‌ 38                                             19
ಸರಣಿಯೊಂದರಲ್ಲಿ 600 ಪ್ಲಸ್‌ ರನ್‌ಗಳು 2 3

ನಾಯಕರಾಗಿ ಇಬ್ಬರ ಸಾಧನೆ
ಪಂದ್ಯ 34                                             46
ರನ್‌ 3659                                              4515
ಶತಕ 15                                                    18
ಸರಾಸರಿ 70.36                                      62.70
ಯಶಸ್ಸಿನ ಪ್ರಮಾಣ 52.94(18 ಜಯ) 56.52 (26 ಜಯ)
ವರ್ಷವೊಂದರಲ್ಲಿ 1000 ರನ್‌ 2 (2016, 2017) 3 (2016, 2017, 2018)

ಸ್ಮಿತ್‌ ಅಂಕಿ ಸಂಖ್ಯೆ
ಟೆಸ್ಟ್‌
ಪಂದ್ಯ 65
ಇನಿಂಗ್ಸ್‌ 119
ರನ್‌ 6485
ತಕ 25
ಅರ್ಧಶತಕ 24
ಗರಿಷ್ಠ 239

ಏಕದಿನ
ಪಂದ್ಯ 118
ಇನಿಂಗ್ಸ್‌ 104
ರನ್‌ 3810
ಶತಕ 08
ಅರ್ಧಶತಕ 23
ಗರಿಷ್ಠ 164

ಟಿ20
ಪಂದ್ಯ 30
ಇನಿಂಗ್ಸ್‌ 25
ರನ್‌ 431
ಶತಕ 00
ಅರ್ಧಶತಕ 02
ಗರಿಷ್ಠ 90

Advertisement

Udayavani is now on Telegram. Click here to join our channel and stay updated with the latest news.

Next