ಬೆಂಗಳೂರು: ಕಾರ್ ಸ್ಟೀರಿಯೊ ಕದಿಯುತ್ತಿದ್ದ ನಾಲ್ವರು ಮೆಕ್ಯಾನಿಕ್‌ಗಳಿಗೆ ಪೊಲೀಸರು ಜೈಲಿನ ಹಾದಿ ತೋರಿಸಿದ್ದಾರೆ. ರಾತ್ರಿ ಸಮಯದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಐಶಾರಾಮಿ ಕಾರುಗಳ ಸ್ಟೀರಿಯೋಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು, ಮತ್ತೋರ್ವನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಮೈಸೂರಿನ ಶಾಂತಿನಗರದ ನಿವಾಸಿಗಳಾದ ನಜೀರ್ ಪಾಷಾ, ರಿಯಾಜ್ ಪಾಷಾ, ಅಪ್ರೋಜ್ ಪಾಷಾ, ಗಂಗೊಂಡನಹಳ್ಳಿಯ ಸುಜ್ಜದ್ ಅಹ್ಮದ್ ಬಂಧಿತರು. ಆರೋಪಿಗಳ ಬಂಧನದಿಂದ ಪಶ್ಚಿಮ ವಿಭಾಗದಲ್ಲಿ ನಡೆದ 30 ಕಾರು ಸ್ಟೀರಿಯೊ ಕಳವು ಪ್ರಕರಣಗಳು ಪತ್ತೆಯಾಗಿದ್ದು, 7 ಲಕ್ಷ ರೂ. ಮೌಲ್ಯದ ಸ್ಟೀರಿಯೋಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಈ ಹಿಂದೆ ಮೈಸೂರಿನಲ್ಲಿ ಮೆಕ್ಯಾನಿಕ್‌ಗಳಾಗಿದ್ದ ನಜೀರ್ ಪಾಷಾ ಮತ್ತಿತರರು ಕೆಲ ತಿಂಗಳ ಹಿಂದೆ ಸ್ಟೀರಿಯೊ ಕದಿಯುವ ಕಸುಬಿಗೆ ಇಳಿದಿದ್ದರು. ಇದಕ್ಕಾಗಿ ಮಾರುತಿ 800 ಕಾರಿನಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದ ಆರೋಪಿಗಳು, ವಿಜಯನಗರ, ರಾಜಾಜಿನಗರ ಸೇರಿ ಹಲವು ಪ್ರತಿಷ್ಠಿತ ಬಡಾವಣೆಗಳ ರಸ್ತೆಗಳಲ್ಲಿ ನಿಲ್ಲಿಸುವ ಐಶಾರಾಮಿ ಕಾರುಗಳ ಗ್ಲಾಸ್ ಒಡೆದು ಸ್ಟೀರಿಯೊಗಳನ್ನು ಬಿಚ್ಚಿಕೊಂಡು ಪರಾರಿಯಾಗುತ್ತಿದ್ದರು. ಒಮ್ಮೆಗೆ ಕನಿಷ್ಠ 15 ಕಾರುಗಳ ಸ್ಟೀರಿಯೊ ಕದ್ದು ಹೋಗುತ್ತಿದ್ದರು.
ಸೋನಿ ಸೇರಿ ಪ್ರತಿಷ್ಠಿತ ಬ್ರಾಂಡ್ ಸ್ಟೀರಿಯೋಗಳನ್ನೇ ಕದಿಯುತ್ತಿದ್ದ ಆರೋಪಿಗಳು ಮೈಸೂರು ಹಾಗೂ ಬೆಂಗಳೂರಿನ ಪರಿಚಯದ ಮಳಿಗೆಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಹಣದಿಂದಲೇ ಐಶಾರಾಮಿ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಜೆ.ಸಿ.ನಗರದಲ್ಲಿ ಸ್ಟೀರಿಯೊ ಮಾರಾಟದ ಬಗ್ಗೆ ಬಂದ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದು, ಅವರು ನೀಡಿದ ಮಾಹಿತಿ ಮೇರೆಗೆ ಸ್ಟೀರಿಯೊ ಖರೀದಿಸುತ್ತಿದ್ದ ಸುಜ್ಜದ್ ಅಹ್ಮದ್‌ನನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ಸಲೀಂ ಪಾಷಾ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.