Advertisement

ಬೀದಿ ಬದಿ ವ್ಯಾಪಾರಿಗಳಿಗೆ ಶಾಶ್ವತ ನೆಲೆ ಕಲ್ಪಿಸಲು ಕ್ರಮ

11:03 AM Jun 07, 2019 | Team Udayavani |

ಹೊಳೆನರಸೀಪುರ: ಬೀದಿ ಬದಿ ವ್ಯಾಪಾರಿಗಳಿಗೆ ಶಾಶ್ವತ ನೆಲೆ ಕಲ್ಪಿಸುವ ಸಲುವಾಗಿ 14 ಕೋಟಿ ರೂ. ವೆಚ್ಚದಲ್ಲಿ ಎರಡು ಅಂತಸ್ತಿನ ವ್ಯಾಪಾರ ಸಂರ್ಕೀಣವನ್ನು ನಿರ್ಮಿಸಲಾಗುತ್ತಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

Advertisement

ಪಟ್ಟಣದ ರೈಲ್ವೆ ನಿಲ್ದಾಣದ ಎದುರಿನಲ್ಲಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಪಟ್ಟಣದಲ್ಲಿ ಬಹಳಷ್ಟು ಮಂದಿ ತಮ್ಮ ದೈನಂದಿನ ಬದುಕು ಸಾಗಿಸಲು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಮನಗಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ರೇವಣ್ಣ ಅವರು ರೈಲ್ವೆ ನಿಲ್ದಾಣದ ಎದುರಿನ ನಿವೇಶನದಲ್ಲಿ ಎರಡು ಅಂತಸ್ತಿನಲ್ಲಿ ಸಂಕೀರ್ಣ ನಿರ್ಮಿಸಲಾಗುತ್ತಿದ್ದು ನೆಲ ಅಂತಸ್ತಿನಲ್ಲಿ ಐವತ್ತು ಮಳಿಗೆಗಳು 6.25 ಮೀ. ಉದ್ದ 4.5 ಮೀ. ಅಗಲದ ಮಳಿಗಳು ಹಾಗೂ ಮೊದಲ ಅಂತಸ್ತಿನಲ್ಲಿ 17.6 ಮೀ. ಉದ್ದ 8.7 ಮೀ. ಆಗಲ ವಿಸ್ತೀರ್ಣದ 13 ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

14 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ: ಈಗಾಗಲೇ ಈ ಕಟ್ಟಡದ ತಳ ಹದಿಗೆ (ಫೌಂಡೇಷನ್‌ಗೆ) 4 ಕೋಟಿ ರೂ. ವೆಚ್ಚ ಮಾಡಿ ಕಾಮಗಾರಿ ನಡೆದಿದೆ. ನೆಲ ಅಂತಸ್ತು ಮತ್ತು ಮೊದಲ ಅಂತಸ್ತಿನ್ನು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು ಈ ಕಟ್ಟಡ ಕಾಮಗಾರಿಯನ್ನು ಕೇವಲ ಒಂದು ವರ್ಷದೊಳಗೆ ಪೂರ್ಣಗೊಳಿಸಿ ಬೀದಿ ಬದಿ ವ್ಯಾಪಾರಿಗಳಿಗೆ ಶಾಶ್ವತ ನೆಲ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಸರ್ಕಾರಿ ಇಲಾಖೆಗಳಿಗೆ ಆದ್ಯತೆ: ಮೊದಲ ಅಂತಸ್ತಿನಲ್ಲಿ ನಿರ್ಮಿಸುತ್ತಿರುವ ಬೃಹತ್‌ ಕೊಠಡಿಗಳಲ್ಲಿ ಸರ್ಕಾರಿ ಇಲಾಖೆಗಳಿಗೆ ಅನುಕೂಲವಾಗಲೆಂದು ನಿರ್ಮಿಸಲಾಗುತ್ತಿದೆ. ಈ ಹದಿಮೂರು ಕೊಠಡಿಗಳು ಭರ್ತಿ ಆಗದೇ ಹೋದಲ್ಲಿ ಮತ್ತಷ್ಟು ಮಳಿಗೆಗಳನ್ನು ನಿರ್ಮಿಸಿ ವ್ಯಾಪಾರಸ್ಥರಿಗೆ ಅನುವು ಮಾಡಿಕೊಡಲು ಅಗತ್ಯ ಕ್ರಮಕೈಗೊಳ್ಳುತ್ತಿರುವುದಾಗಿ ತಿಳಿಸಿದರು. ಈ ಕಟ್ಟಡ ಪುರಸಭೆಗೆ ಸೇರಿದ್ದಾವಾಗಿದ್ದು ಪುರಸಭೆಗೆ ಶಾಶ್ವತ ಆದಾಯ ದೊರಕಿದಂತಾಗಲಿದೆ. ಪ್ರಸ್ತುತ ಈ ಕಟ್ಟಡದ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಲಾಗುತ್ತಿದ್ದು , ಮುಂದಿನ ದಿನಗಳಲ್ಲಿ ಐದು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲು ಅವಶ್ಯವಾದ ಯೋಜನೆ ರೂಪಿತವಾಗಿದೆ ಎಂದು ಹೇಳಿದರು.

ಪಟ್ಟಣ ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ತಾವು ಮತ್ತಷ್ಟು ಯೋಜನೆಗಳನ್ನು ರೂಪಿಸಲಾಗುತ್ತಿದ್ದು ಅದಕ್ಕೆ ಬೇಕಾದ ಹಣದ ಸಂಪನ್ಮೂಲಗಳನ್ನು ಕೇಂದ್ರ ಸರ್ಕಾರದಿಂದ ಅನುದಾನ ತಂದು ನೇರವೇರಿಸಲಾಗುವುದು ಎಂದು ಹೇಳಿದರು.

Advertisement

ಸಂಸದರಾಗಿ ಆಯ್ಕೆಗೊಂಡ ನಂತರ ಮೊದಲ ಬಾರಿಗೆ ಸಾರ್ವಜನಿಕ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಎಂದರು.

17ರಂದು ಪ್ರಮಾಣ ವಚನ: ನೂತನವಾಗಿ ಆಯ್ಕೆಗೊಂಡಿರುವ ಸಂಸದರಿಗೆ ಜೂನ್‌ 17 ರಂದು ದೆಹಲಿಯಲ್ಲಿ ಪ್ರಮಾಣವಚನ ಸ್ವೀಕಾರಕ್ಕೆ ಕೇಂದ್ರ ಸರ್ಕಾ ನಿಗದಿಗೊಳಿಸಿದೆ. ಸಂಸತ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ತಾವು ಜೂನ್‌ 25 ರ ನಂತರ ಹಾಸನ ನಗರದಲ್ಲಿ ಸಂಸದರ ಕಚೇರಿಯನ್ನು ವಿಧ್ಯುಕ್ತವಾಗಿ ಆರಂಭಿಸುವುದಾಗಿ ತಿಳಿಸಿದರು.

ತಾವು ಪ್ರಮಾಣವಚನ ಸ್ವೀಕರಿಸಿದ ನಂತರ ಜಿಲ್ಲೆಯ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡುವುದಾಗಿ ತಿಳಿಸಿದ ಅವರು, ಜಿಲ್ಲೆಯ ಪ್ರತಿ ತಾಲೂಕುಗಳಿಗೆ ಭೇಟಿ ನೀಡಿ ಆಲ್ಲಿನ ಸಮಸ್ಯೆಗಳನ್ನು ಅರಿತು ಅದಕ್ಕೆ ಬೇಕಾದ ಪರಿಹಾರಗಳನ್ನು ಕಂಡುಕೊಳ್ಳಲು ಮುಂದಾಗುವುದಾಗಿ ತಿಳಿಸಿದರು.

ಪ್ರಸ್ತುತ ಸಕಲೇಶಪುರ ಮತ್ತು ಅಲೂರು ತಾಲೂಕಿನಲ್ಲಿ ಕಾಡಾನೆ ಹಾವಳಿಯಿಂದ ರೈತರುಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಅರಸೀಕೆರೆ ತಾಲೂಕಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಎತ್ತಿನಹೊಳೆ ಯೋಜನೆಯನ್ನು ತ್ವರಿತಗೊಳಿಸಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ತಾವು ಶ್ರಮವಹಿಸುವುದಾಗಿ ಪ್ರಜ್ವಲ್ ತಿಳಿಸಿದರು.

ಲೊಕೋಪಯೋಗಿ ಇಲಾಖೆಯ ಎಂಜಿನಿಯರ್‌ ಮಲ್ಲಿಕಾರ್ಜುನ್‌, ಮಹೇಶ್‌, ನರೇಂದ್ರನಾಝರೇ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ, ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಆರ್‌.ಸುಬ್ರಹ್ಮಣ್ಯ, ಗುತ್ತಿಗೆದಾರ ಡಿಜೆಪಿಆರ್‌ ಕನ್ಸಟ್ರಕ್ಷನ್‌ ನ ಕೃಷ್ಣದೇವ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next