ಬೆಂಗಳೂರು: ಬಿಬಿಎಂಪಿಯ ಪೌರ ಕಾರ್ಮಿಕರು ಎರಡು ಸಾವಿರ ರೂ. ಬೋನಸ್ ನೀಡುವಂತೆ ಮನವಿ ಮಾಡಿದ್ದು ಮೇಯರ್‌ರೊಂದಿಗೆ ಚರ್ಚಿಸಿ, ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಹೇಳಿದರು.
ಬಿಬಿಎಂಪಿಯ ಕೇಂದ್ರ ಕಚೇರಿಯ ಗಾಜಿನ ಮನೆಯಲ್ಲಿ ಬಿಬಿಎಂಪಿ ಬುಧವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
“ನಮ್ಮ ಜನಾಂಗ (ಪರಿಶಿಷ್ಟ ಜಾತಿ ಮತ್ತು ಪಂಗಡ)ದವರು ಇನ್ನೂ ಶೋಷಣೆ ಮಾಡುವವರ ವಿರುದ್ಧ ಹೋರಾಡುತ್ತಿಲ್ಲ. ಡಾ. ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಮೀಸಲಾತಿ ಸೌಲಭ್ಯವನ್ನು ಇಂದಿಗೂ ಸಂರ್ಪೂಣವಾಗಿ ಹಿಂದುಳಿದ ವರ್ಗಗಳು ಬಳಸಿಕೊಳ್ಳುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕೆಲವರು ಮೀಸಲಾತಿಯನ್ನು ತೆಗೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಮೀಸಲಾತಿ ಏಕೆ ಬೇಕು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮೀಸಲಾತಿಯ ಬಗ್ಗೆ ಪ್ರಶ್ನೆ ಮಾಡುವುದಕ್ಕೆ ಇವರು ಯಾರು, ನಮಗೆ ಸಾಕು ಎಂದನಿಸಿದ ದಿನ ನಾವೇ ಮೀಸಲಾತಿ ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತೇವೆ’ಎಂದರು.
“ಹಿಂದುಳಿದ ಸಮುದಾಯವನ್ನು ತುಳಿಯುವ ಶಕ್ತಿಗಳು ಹೆಚ್ಚು ಪ್ರಭಾವಿಗಳು ಅವರನ್ನು ದಾಟಿ ಮುಂದಕ್ಕೆ ಹೋಗುವುದು ಸವಾಲಿನ ಕೆಲಸ. ಅದಕ್ಕೆ ನಾವು ಶಕ್ತರಾಗಬೇಕು. ಸಂವಿಧಾನ ರಚನೆ ವೇಳೆ ಡಾ. ಬಿ.ಆರ್.ಅಂಬೇಡ್ಕರ್ ಅವರು ಹೋರಾಟ, ಶಿಕ್ಷಣ ಮತ್ತು ಸಂಘಟನೆ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ, ಇದನ್ನು ಅಳವಡಿಸಿಕೊಳ್ಳುವಲ್ಲಿ ನಾವು ಹಿಂದುಳಿದಿದ್ದೇವೆ.
ಹಿಂದುಳಿದ ಸಮುದಾಯದಲ್ಲಿ ಇಂದಿಗೂ ಬಹುತೇಕರು ಶಿಕ್ಷಣ ಪಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಉಪ ಮೇಯರ್ ರಾಮ ಮೋಹನ್ ರಾಜ್ ಮಾತನಾಡಿದರು. ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ಹಾಗೂ ಘನ ತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತ ರಂದೀಪ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಪೌರಕಾರ್ಮಿಕರಿಂದ ನಗರ ಸ್ವಚ್ಛ: ಬಿಬಿಎಂಪಿಯ ಎಲ್ಲ 198 ವಾರ್ಡ್‌ಗಳ ಜನಪ್ರತಿನಿಧಿಗಳು ನೆಮ್ಮದಿಯಿಂದ ಇದ್ದಾರೆ ಎಂದರೆ ಅದಕ್ಕೆ ಪೌರ ಕಾರ್ಮಿಕರೇ ಕಾರಣ. ಅವರ ಪರಿಶ್ರಮದಿಂದಲೇ ನಗರ ಇಷ್ಟರ ಮಟ್ಟಿಗೆ ಸ್ವಚ್ಛವಾಗಿದೆ. ಪೌರ ಕಾರ್ಮಿಕರು ಒಂದು ದಿನ ಪ್ರತಿಭಟನೆಗೆ ಇಳಿದರೆ ಅಥವಾ ರಜೆ ತೆಗೆದುಕೊಂಡರೆ ನಗರ ಗಬ್ಬುನಾರುತ್ತದೆ ಎಂದು ಮೇಯರ್ ಎಂ. ಗೌತಮ್ ಕುಮಾರ್ ತಿಳಿಸಿದರು.