ಬೆಂಗಳೂರು: ಕರಾವಳಿ, ಮಲೆನಾಡು, ಮುಂಬೈ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಮಳೆಯಿಂದಾಗಿ ಪರೀಕ್ಷೆ ವಂಚಿತರಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ, ಸಿಇಒ, ಎಸ್ಪಿ, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಉಪನಿರ್ದೇಶಕರೊಂದಿಗೆ ವಿಡಿಯೋ ಸಂವಾದ ನಡೆಸಿ ಪರೀಕ್ಷೆಗೆ ಕೈಗೊಂಡ ಸಿದ್ಧತೆ ಮಾಹಿತಿ ಪಡೆದರು.
ಮಳೆಗಾಲವಾದ್ದರಿಂದ ಯಾವುದೇ ಮಗುವಿಗೂ ಪರೀಕ್ಷಾ ಕೇಂದ್ರಕ್ಕೆ ಬಂದು ಹೋಗಲು ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಸಾರಿಗೆ ವ್ಯವಸ್ಥೆ ಸೌಲಭ್ಯವಿಲ್ಲದೇ ರಾಜ್ಯದಲ್ಲಿ ಯಾವುದೇ ಒಬ್ಬ ವಿದ್ಯಾರ್ಥಿಯೂ ಪರೀಕ್ಷೆಗೆ ಗೈರುಹಾಜರಾಗದಂತೆ ಗಮನಹರಿಸಬೇಕು. ಕರಾವಳಿ, ಮಲೆನಾಡು, ಮುಂಬೈ ಕರ್ನಾಟಕ ಭಾಗದ ದೂರದ ಸಂಪರ್ಕ ರಹಿತ ಪ್ರದೇಶ, ನೆರೆ ರಾಜ್ಯದ ಗಡಿಭಾಗದ ವಿದ್ಯಾರ್ಥಿ, ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವ ಜನವಸತಿ ಪ್ರದೇಶದ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕೆಂದು ನಿರ್ದೇಶಿಸಿದರು,
ಹೊರ ರಾಜ್ಯಗಳಿಂದ ಬಂದು ಹೋಗಲು ತೊಂದರೆಯಾಗುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಿ, ಪರೀಕ್ಷಾ ಕೇಂದ್ರಕ್ಕೆ ಹೋಗಿ ಬರಲು ಬಸ್ ಅಥವಾ ಜೀಪ್ ವ್ಯವಸ್ಥೆ ಮಾಡಬೇಕು. ಹೊರ ರಾಜ್ಯಗಳಿಂದ ಬರುವ ಪರೀಕ್ಷಾರ್ಥಿಗಳಿಗೆ ಪ್ರತ್ಯೇಕ ಕೊಠಡಿ, ಕಂಟೈನ್ಮೆಂಟ್ ಪ್ರದೇಶದಿಂದ ಬರುವ ಮಕ್ಕಳಿಗೆ, ಶೀತ, ನೆಗಡಿ, ಜ್ವರದಂತಹ ಲಕ್ಷಣವಿರುವ ಮಕ್ಕಳಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆಗೆ ಸೂಚನೆ ನೀಡಿದರು. ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್ ಇದ್ದರು.
ಪ್ರತ್ಯೇಕ ಅಧಿಕಾರಿ ನಿಯೋಜನೆ: ಗೋವಾದಲ್ಲಿ 2 ಪರೀಕ್ಷಾ ಕೇಂದ್ರಗಳಿಗೆ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ತಿಳಿಸಿದರು. ಶಿವಮೊಗ್ಗ ಜಿಲ್ಲೆ ಪರೀಕ್ಷಾ ಕೇಂದ್ರಕ್ಕೆ ಒಬ್ಬ ವಿದ್ಯಾರ್ಥಿ 40 ಕಿ.ಮೀ ದೂರದಿಂದ ಬರುವ ಹಿನ್ನೆಲೆಯಲ್ಲಿ ಅವನಿಗಾಗಿ ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಒಬ್ಬ ಪ್ರತ್ಯೇಕ ಅಧಿಕಾರಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಮಳೆ ಜಾಸ್ತಿಯಾಗಿ ಇಲ್ಲವೇ ನದಿಯಲ್ಲಿ ನೀರು ಭರ್ತಿಯಾಗಿ ಸೇತುವೆ ಮುಳುಗುವ ಭೀತಿಯಿರುವ ಮಕ್ಕಳಿಗೆ ಹಾಸ್ಟೆಲ್‌ಗಳಲ್ಲಿ ಊಟ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ತಿಳಿಸಿದರು. ಪರೀಕ್ಷೆ ಬರೆಯುವ ವಿದ್ಯಾರ್ಥಿ ಮನೆಯವರಿಗೆ ಕೋವಿಡ್ ಪಾಸಿಟಿವ್ ಇರುವುದ ರಿಂದ ಆ ವಿದ್ಯಾರ್ಥಿಗೆ ಪೂರಕ ಪರೀಕ್ಷೆಗೆ ಅವಕಾಶ ಮಾಡಲಾ ಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ತಿಳಿಸಿದರು. ಪರೀಕ್ಷಾ ಕೊಠಡಿಯಲ್ಲಿ ಆಸನದ ವ್ಯವಸ್ಥೆ ಮಾಡಿದಂತೆ ವಾಹನದಲ್ಲಿ ಮಕ್ಕಳನ್ನು ಪಿಕ್‌ಅಪ್, ಡ್ರಾಪ್ ವ್ಯವಸ್ಥೆ ಮಾಡಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಕೋವಿಡ್ ಪಾಸಿಟಿವ್, ಕ್ವಾರಂಟೈನ್‌ನಲ್ಲಿರುವವರ ಮತ್ತು ಸಂಬಂಧಿಕರ ಸಂಪರ್ಕವಿರುವ ಮಕ್ಕಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಜೂ. 24ರ ಬೆಳಗ್ಗೆ 11ರಿಂದ 2 ಗಂಟೆಯವರೆಗೆ ಪರೀಕ್ಷಾ ಕೇಂದ್ರಗಳ ಅಣುಕು ಪ್ರದರ್ಶನ ನಡೆಸಲಾಗುವುದು. ಪೋಷಕರು, ಮಕ್ಕಳು ಭಾಗವಹಿಸಬಹುದು.
-ಸುರೇಶ್ ಕುಮಾರ್, ಶಿಕ್ಷಣ ಸಚಿವ