Advertisement

ಹೆಜ್ಜೆಗಳು ಮುಂದೆ ಮುಂದೆ ಮನಸ್ಸು ಹಿಂದೆ ಹಿಂದೆ!

07:30 AM Apr 25, 2018 | |

ನೆಲದ ಋಣ, ಸಂಸ್ಕೃತಿ, ಮಣ್ಣಿನ ವಾಸನೆ ಎಂದು ಹೇಳಿದಾಗಲೆಲ್ಲ ನನ್ನವರು ನನ್ನನ್ನು ತಮಾಷೆ ಮಾಡುತ್ತಿದ್ದರು. ನೀನು ಮಣ್ಣಿನ ಮಗಳಲ್ಲವೇ ಅದಕ್ಕೇ ಮಣ್ಣೆಂದರೆ ಭಾವುಕಳಾಗ್ತಿಯ ಎನ್ನುತ್ತಿದ್ದರು…

Advertisement

ಕಾಡಿನಲ್ಲಿ ನನಗೊಂದು ಅಚ್ಚರಿ ಕಾದಿತ್ತು. ರಾಮನಿಗೆ ನಾಡಿನಲ್ಲಿ ಗೌರವವಾಯಿತಲ್ಲ; ಕಾಡಿಗೆ ಹೋದರೂ ಅದೇ ಗೌರವ-ಪ್ರೀತಿ. ಅರೆ ಹೇಗೆ ಸಾಧ್ಯ? ಈ ಕಾಡಜನರು ರಾಮನಿಗೆ ಹೇಗೆ, ಯಾವಾಗ ಪರಿಚಯವಾದರು? ಬೇಡಜನಾಂಗ, ಆದಿವಾಸಿ ಪಂಗಡಗಳು ಬಂದು ರಾಮನನ್ನು ಮುತ್ತಿಕೊಳ್ಳುತ್ತಿದ್ದರು. ರಾಮ ಎಲ್ಲರನ್ನೂ ಪ್ರೀತಿಯಿಂದ ಮಾತಾಡಿಸುತ್ತಿದ್ದ. ರಾಮನ ಪ್ರಭಾವಳಿ ನನ್ನನ್ನೂ ಬೆಳಗಿಸಿತ್ತು. ಗೌರವ ನನಗೂ ವರ್ಗಾವಣೆಯಾಗಿತ್ತು. ಹೂವಿನಿಂದಾಗಿ ನಾರೂ ಮುಡಿಗೆ. 

ಗುಹ ಅಂತ ಒಬ್ಬ ಕಾಡಿನ ರಾಜ, ಶೃಂಗಿಬೇರಿಪುರದವನು. ಒಮ್ಮೆ ರಾಮನ ಬೇಟೆಗೆಂದು ಕಾಡಿಗೆ ಹೋದಾಗ ಪರಿಚಿತನಾದನು. ಮೊದಲ ಪರಿಚಯದಲ್ಲೇ ಆತ್ಮೀಯರಾಗಿಬಿಟ್ಟಿದ್ದರು. ಎಷ್ಟೆಂದರೆ- ರಾಮನೊಳಗೆ ಗುಹ, ಗುಹನೊಳಗೆ ರಾಮ ಶಾಶ್ವತವಾಗಿ ನೆಲೆಸಿಬಿಟ್ಟಿದ್ದರು. ಅವರಿಬ್ಬರ ನಂಟು, ನಾಡು- ಕಾಡು ಒಟ್ಟಾದಂತೆ, ಸ್ನೇಹಭಾವಗಳೆರಡು (ರಾಮ- ಗುಹ) ಜೀವ ತಳೆದು ಪರಸ್ಪರ ಆಲಿಂಗಿಸಿಕೊಂಡಂತೆ ಕಂಡಿತು. “ನೀನು ಸಿಕ್ಕಿದ್ದು ನನ್ನ ಭಾಗ್ಯ’ ಎಂದ ರಾಮ, “ನೀನು ನನ್ನ ಪಾಲಿನ ದೇವರು’ ಎಂದ ಗುಹ.

ಬೇಟೆಯ ವಿಷಯ ಬಂದಿದ್ದರಿಂದ ಇಲ್ಲಿ ಅನಿವಾರ್ಯವಾಗಿ ಮಾತಾಡುತ್ತಿದ್ದೇನೆ… ಈ ರಾಜರ ಪ್ರತಿಷ್ಠೆಯ ಬೇಟೆ-ಗೀಟೆ, ಮೋಜು -ಜೂಜು, ಬಹುಪತ್ನಿತ್ವದಂಥ ವಿಷಯಗಳು ನನಗೆ ಹುಚ್ಚಾಟದಂತೆ ಕಾಣಿಸುತ್ತವೆ. ಇವು ರಾಜರ ಹಕ್ಕೆಂಬಂತೆ, ಇಲ್ಲವೇ ಕ್ಷತ್ರಿಯ ಧರ್ಮದ ಅವಿಭಾಜ್ಯ ಅಂಗವೆಂಬಂತೆ ಬಿಂಬಿಸುವುದನ್ನು ಕಂಡರೆ ಮೈಯೆಲ್ಲ ಉರಿದು ಹೋಗುತ್ತೆ. ಆಡಂಬರ, ಪ್ರತಿಷ್ಠೆ, ಹಣದ ಹಮ್ಮುಗಳಿಗೆ ಮೌಲ್ಯದ ಲೇಪ. ನಾಡಿನಲ್ಲಿ ಕಾಡುಪ್ರಾಣಿಗಳಿಂದ ಉಪಟಳವಾದಾಗ ಪ್ರತಿರೋಧ ಸರಿ. ಆದರೆ, ಕಾಡಿಗೇ ಹೋಗಿ ಅವುಗಳನ್ನು ಕೊಲ್ಲುವುದೆಂದರೆ ಅವುಗಳ ಬದುಕುವ ಹಕ್ಕನ್ನೇ ಕೊಂದಂತೆ. ಇವರ ನೀಚ ಹವ್ಯಾಸಕ್ಕೆ ಅವುಗಳ ಬಲಿ? ಇವರು ರಕ್ಷಕರೋ, ಭಕ್ಷಕರೋ? ನನ್ನ ಮಟ್ಟಿಗೆ ಹೇಳುವುದಾದರೆ, ಇದು ದುರಂತ. 

ಹಿಂದೊಮ್ಮೆ ದಶರಥ ರಾಜರು ತಮ್ಮ ಯೌವನ ಕಾಲದಲ್ಲಿ ಬೇಟೆಗೆ ಹೋಗಿದ್ದಾಗ ತಮ್ಮ ಶಬ್ದವೇಧಿ ವಿದ್ಯೆಯ ಪಾಂಡಿತ್ಯಕ್ಕೆ ಅನ್ಯಾಯವಾಗಿ ಮೂವರನ್ನು ಬಲಿತೆಗೆದುಕೊಂಡಿದ್ದನ್ನು ಕೇಳಿ ಮೂರುದಿನ ನಾನು ನಿದ್ದೆ ಮಾಡಿರಲಿಲ್ಲ. ತಮ್ಮ ಕೃತ್ಯಕ್ಕೆ ಅವರು ಪಶ್ಚಾತ್ತಾಪ ಪಡಲಿಲ್ಲ ಅಂತ ಅಲ್ಲ, ಪಾಂಡಿತ್ಯವಿದ್ದರೆ ಸಾಲದು, ಸೂಕ್ಷ್ಮತೆಯೂ ಬೇಕು. ಆನೆ ನೀರು ಕುಡಿಯುವುದಕ್ಕೂ (ಅದೇನು ಬೆಕ್ಕಿನಂತೆ ಕಳ್ಳಹೆಜ್ಜೆಯಿಟ್ಟುಕೊಂಡು ಬರುತ್ತದೆಯೇ?) ಪಾಪ, ಶ್ರವಣಕುಮಾರ ಕೊಡದಲ್ಲಿ ನೀರು ತುಂಬುವಾಗಿನ ಶಬ್ದಕ್ಕೂ ವ್ಯತ್ಯಾಸ ಗೊತ್ತಾಗಲಿಲ್ವ? ಮಗನನ್ನು ಕಳಕೊಂಡ ಅಂಧರೂ, ವೃದ್ಧರೂ, ತಪಸ್ವಿಗಳೂ ಆಗಿದ್ದ ಶ್ರವಣನ ತಂದೆ- ತಾಯಿಯ ಒಡಲ ಬೆಂಕಿ ಶಾಪವಾಗಿ ದಶರಥ ರಾಜರನ್ನು ಸುಟ್ಟಿತ್ತು. ಅವರ ಬಾಣದ ಮೊನೆ ಅವರಿಗೇ ಚುಚ್ಚಿತ್ತು. ಆದರೂ ಅದು ಸಂತಾನಪ್ರಾಪ್ತಿಯ ಶುಭಸೂಚನೆ ತಂದಿದ್ದು ದಶರಥ ರಾಜರಿಗೆ ಸಂತಸ ತಂದಿರಬಹುದು!

Advertisement

  ಓಹ್‌, ಎಲ್ಲಿಂದ ಎಲ್ಲಿಗೋ ಹೋಗಿಬಿಟ್ಟೆ. ಎಲ್ಲಿದ್ದೆ ನಾನು? ಗುಹನ ವಿಚಾರ ಹೇಳುತ್ತಿದ್ದೆನಲ್ಲವಾ, ಕೇಳಿ: ಮುಂದಿನ ವನವಾಸದಲ್ಲಿ ನಮಗೆ ಅನುಕೂಲವಾಗಲೆಂದು ರಾಮನ ವಿರೋಧದ ನಡುವೆಯೂ ಕೆಲ ಪಾತ್ರೆಗಳು, ಚಾಪೆ- ಹೊದಿಕೆಗಳನ್ನು ಗುಹ ಕೊಟ್ಟ. ನಿನ್ನ ಮುಖ ನೋಡಿಕೊಂಡು ಕೊಡುತ್ತಿಲ್ಲ, ಅತ್ತಿಗೆಯ ಮುಖ ನೋಡಿಕೊಂಡು ಕೊಡುತ್ತಿದ್ದೇನೆ ಎಂದು ರಾಮನಿಗೆ ಪ್ರೀತಿಯಿಂದ ತಿವಿದಿದ್ದ (ಈ ಅತ್ತಿಗೆ ಕಾಡಿನಲ್ಲಿ ಅಡುಗೆ, ತಿಂಡಿ ಅಂತ ಕಷ್ಟಪಡುವುದು ಅಷ್ಟರಲ್ಲೇ ಇದೆಯೆಂದು ಪಾಪ ಅವನಿಗೇನು ಗೊತ್ತು?) ಗಂಗೆಯನ್ನು ದಾಟಿಸಿ ಬೀಳ್ಕೊಟ್ಟ. ರಾಮಲಕ್ಷ್ಮಣರು ಗಂಗೆಗೆ ನಮಸ್ಕರಿಸಿದರು. ಪಾವನ ಗಂಗೆ, ಆಶೀರ್ವದಿಸು ತಾಯಿ, ವನವಾಸ ಮುಗಿಸಿ ಸಾಧ್ಯವಾದರೆ ಮತ್ತೆ ಇದೇ ದಾರಿಯಲ್ಲಿ ಬರುತ್ತೇವೆ ಎಂದು ಹೇಳಿ ನಾನೂ ನಮಿಸಿದೆ. 

  ಹೆಜ್ಜೆಗಳು ಮುಂದೆ ಮುಂದೆ, ಮನಸ್ಸು ಹಿಂದೆ ಹಿಂದೆ. ಈ ಕಾಡುಜನರ ಅವ್ಯಾಜ ಪ್ರೀತಿ, ಮುಗ್ಧತೆಯ ಬಗ್ಗೆಯೇ ಮನಸ್ಸು ಆಲೋಚಿಸತೊಡಗಿತು. ಚಿನ್ನದರಮನೆ ಕಟ್ಟಿಸಿಕೊಡುತ್ತೇನೆಂದರೂ ಈ ಕಾಡಿನ ಜನ ನಾಡಿಗೆ ಬರಲು ಸಿದ್ಧರಿಲ್ಲ. ಅವರಿಗೆ ಸಿದ್ಧಿ, ಪ್ರಸಿದ್ಧಿ (ಸಿಕ್ಕಿದರೆ) ಎಲ್ಲ ಈ ನೆಲದಲ್ಲೇ. ಅವರನ್ನು ಹಿಡಿದಿಟ್ಟ ನೆಲದ ಶಕ್ತಿ ಯಾವುದು, ಮಣ್ಣಿನ ಋಣವನ್ನು ಎಷ್ಟು ಎತ್ತರದಲ್ಲಿ ಭಾವಿಸಿದ್ದರವರು?! ಇವರೆಲ್ಲ ಜನಪದೀಯ ಸಂಸ್ಕೃತಿಯ ಹರಿಕಾರರೆನಿಸಿತು.

  “ನೆಲದ ಋಣ, ಸಂಸ್ಕೃತಿ, ಮಣ್ಣಿನ ವಾಸನೆ’ ಎಂದು ಹೇಳಿದಾಗಲೆಲ್ಲ ನನ್ನವರು ನನ್ನನ್ನು ತಮಾಷೆ ಮಾಡುತ್ತಿದ್ದರು. “ನೀನು ಮಣ್ಣಿನ ಮಗಳಲ್ಲವೇ, ಅದಕ್ಕೇ ಮಣ್ಣೆಂದರೆ ಭಾವುಕಳಾಗ್ತಿಯ’ ಎನ್ನುತ್ತಿದ್ದರು. ನೀವೂ ಏನೂ ಕಮ್ಮಿಯಿಲ್ಲ ಬಿಡಿ, “ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ನುಡಿಗಟ್ಟನ್ನು ಜಗತ್ತಿಗೆ ಕೊಟ್ಟವರು ನೀವೇ ಅಲ್ವಾ ಎಂದು ಅವರ ಮಾತನ್ನು ಅವರಿಗೇ ತಿರುಗಿಸಿದ್ದೆ.

ಅದಿರಲಿ, ಈ ಕಾಡು ನನ್ನನ್ನು ಇನ್ನೊಂದು ಆಲೋಚನೆಗೆ ಹಚ್ಚಿತು… 
(ಮುಂದುವರಿಯುತ್ತದೆ)

ಸಿ.ಎ. ಭಾಸ್ಕರ ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next