Advertisement

ಲಿಂಗಾಯತ ಮಹಾಸಭಾ ರಚನೆಯತ್ತ ಹೆಜ್ಜೆ

07:15 AM Aug 07, 2017 | |

ಹುಬ್ಬಳ್ಳಿ: ಅಖೀಲ ಭಾರತ ವೀರಶೈವ ಮಹಾಸಭಾ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಒಪ್ಪದಿದ್ದರೆ, ಅದಕ್ಕೆ ಪರ್ಯಾಯವಾಗಿ ಲಿಂಗಾಯತ ಮಹಾಸಭಾ ರಚನೆಗೆ ಗಂಭೀರ ಚಿಂತನೆ ನಡೆದಿದೆ. ಈ ಸಂಬಂಧ ಆ.10ರಂದು ಬೆಂಗಳೂರಿನಲ್ಲಿ ನಡೆಯಲಿರುವ ಲಿಂಗಾಯತ ಮಠಾಧೀಶರು ಹಾಗೂ ಸಮಾಜದ ಮುಖಂಡರ ಸಭೆಯಲ್ಲಿ ಮಹತ್ವರ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

ವೀರಶೈವ-ಲಿಂಗಾಯತ ಸೇರಿ ಸ್ವತಂತ್ರ ಧರ್ಮವಾಗಲಿ ಎಂಬುದು ಅಖೀಲ ಭಾರತ ವೀರಶೈವ ಮಹಾಸಭಾದ ನಿಲುವಾಗಿದ್ದು, ವೀರಶೈವ ಪ್ರತ್ಯೇಕ ಧರ್ಮ ನಿಟ್ಟಿನಲ್ಲಿ ಕೈಗೊಂಡ ನಿರ್ಣಯವನ್ನು ಕೇಂದ್ರ ಸರಕಾರ ಎರಡು ಬಾರಿ ತಿರಸ್ಕರಿಸಿದೆ.

ವೀರಶೈವ ಶಬ್ದ ಸೇರಿಸಿಕೊಂಡು ಪ್ರತ್ಯೇಕ ಧರ್ಮಕ್ಕೆ ಮುಂದಾದರೆ ಇನ್ನು ಒಂದು ಸಾವಿರ ವರ್ಷ ಯತ್ನಿಸಿದರೂ ಸ್ವತಂತ್ರ ಧರ್ಮ ಸಾಧ್ಯವಾಗದು ಎಂಬುದು ಅನೇಕ ಮಠಾಧೀಶರು ಹಾಗೂ ಮುಖಂಡರ ಅನಿಸಿಕೆ.

ಬೆಂಗಳೂರಲ್ಲಿ ಸಭೆ: ಈ ನಿಟ್ಟಿನಲ್ಲಿ, ಆ.10ರಂದು ಬೆಂಗಳೂರಿನ ಸೆಂಟ್ರಲ್‌ ಕಾಲೇಜು ಆವರಣದ ಜ್ಞಾನ ಭಾರತಿ ಸಭಾಭವನದಲ್ಲಿ ಮಹತ್ವದ ಸಭೆ ನಡೆಯಲಿದೆ. ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಕುರಿತು ಕೈಗೊಳ್ಳಬೇಕಾದ ಮುಂದಿನ ಹೆಜ್ಜೆಗಳ ಕುರಿತಾಗಿ ಚರ್ಚೆ ನಡೆಯಲಿದೆ. ಸಭೆಯಲ್ಲಿ ವಿವಿಧ ಮಠಾಧೀಶರು, ಸುಮಾರು 100ಕ್ಕೂ ಅಧಿಕ ರಾಜಕೀಯ ಮುಖಂಡರು, ಅನೇಕ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ.ಜಾಮದಾರ ಅವರು ಲಿಂಗಾಯತ ಧರ್ಮ ವೀರಶೈವದಿಂದ ಹೇಗೆ ಭಿನ್ನ, ಲಿಂಗಾಯತ ಸ್ವತಂತ್ರ ಧರ್ಮದ ಅನಿವಾರ್ಯತೆ, ಸಮಾಜಕ್ಕಾಗುವ ಪ್ರಯೋಜನ ಇನ್ನಿತರ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದು, ಸಂಜೆ ವೇಳೆಗೆ ಮಠಾಧೀಶರನ್ನೊಳಗೊಂಡ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವ ಸಾಧ್ಯತೆ ಇದೆ.

ಸಭೆಯಲ್ಲಿ ಕಾನೂನಾತ್ಮಕ ಹೋರಾಟದ ಚಿಂತನೆಯೂ ನಡೆಯಲಿದೆ. ಅಗತ್ಯ ಬಿದ್ದರೆ ಸುಪ್ರೀಂಕೋರ್ಟ್‌ ಕದ ತಟ್ಟುವ ಕುರಿತಾಗಿಯೂ ಚಿಂತಿಸಲಾಗುತ್ತಿದೆ ಎನ್ನಲಾಗಿದೆ. ಅದೇ ರೀತಿ ಅಖೀಲ ವೀರಶೈವ ಮಹಾಸಭಾಕ್ಕೆ ಪ್ರತಿಯಾಗಿ ಲಿಂಗಾಯತ ಮಹಾಸಭಾ ಘೋಷಣೆ ಮಾಡಿ ಅದರ ಅಡಿಯಲ್ಲಿಯೇ ಹೋರಾಟ, ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲು ಚಿಂತಿಸಲಾಗಿದೆ. 1940ರ ಡಿಸೆಂಬರ್‌ 31ರಂದು ಅಖೀಲ ಭಾರತ ವೀರಶೈವ ಮಹಾಸಭಾದಿಂದ ದಾವಣಗೆರೆಯಲ್ಲಿ ನಡೆದ ಸಮಾವೇಶದಲ್ಲಿ ಲಿಂಗಾಯತ ಸ್ವತಂತ್ರ
ಧರ್ಮವೆಂಬ ನಿರ್ಣಯ ಕೈಗೊಳ್ಳಲಾಗಿದೆ. ಇದೀಗ ಅದೇ ಮಹಾಸಭಾದವರು ವೀರಶೈವ-ಲಿಂಗಾಯತ ಒಂದೇ ಎಂದು ಹೇಳಲು ಮುಂದಾಗಿರುವುದು ಎಷ್ಟು ಸೂಕ್ತ ಎಂಬುದು ಕೆಲವರ ಪ್ರಶ್ನೆ. ಲಿಂಗಾಯತ ಪದ ಬಳಕೆ ಬ್ರಿಟಿಷ್‌ ಕಾಲದಿಂದಲೂ ಅನೇಕ ದಾಖಲೆಗಳಲ್ಲಿ ನಮೂದಾಗಿದೆ. ಬಾಂಬೆ ಪ್ರಸಿಡೆನ್ಸಿಯ ಗೆಜೆಟಿಯರ್‌ನಲ್ಲೂ ಲಿಂಗಾಯತ ಎಂಬ ಶಬ್ದ ಬಳಕೆ ಆಗಿದೆ. ಈ ದಾಖಲೆಗಳಲ್ಲಿ ಲಿಂಗಾಯತ ಸ್ವತಂತ್ರ ಧರ್ಮ, ಹಿಂದೂ ಧರ್ಮಕ್ಕೆ ವಿಭಿನ್ನವಾದದ್ದು ಎಂದಿದೆ.

Advertisement

ಸುಪ್ರೀಂಕೋರ್ಟ್‌ನಲ್ಲಿ 1966ರಲ್ಲಿ ವಿಚಾರಣೆಗೆ ಬಂದ ಪ್ರಕರಣವೊಂದರಲ್ಲಿ ನ್ಯಾಯಮೂರ್ತಿಯವರು ಬುದ್ಧ, ಬೌದ್ಧ ಧರ್ಮ, ಮಹಾವೀರ, ಜೈನ ಧರ್ಮ ಸ್ಥಾಪಿಸಿದಂತೆ ಬಸವಣ್ಣ, ಲಿಂಗಾಯತ ಧರ್ಮದ ಸಂಸ್ಥಾಪಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಷ್ಟೆಲ್ಲ ಗೊತ್ತಿದ್ದರೂ ಅಖೀಲ ಭಾರತ ಮಹಾಸಭಾ ಕೆಲವೇ ಕೆಲವರ ಒತ್ತಡಕ್ಕೆ ಮಣಿದು ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಹಿಂದೇಟು ಹಾಕುವ ಮೂಲಕ ವೀರಶೈವ-ಲಿಂಗಾಯತ ಎಂಬುದನ್ನು ಪುನರುತ್ಛರಿಸುತ್ತಿದೆ ಎಂಬುದು ಅನೇಕರ ಆರೋಪವಾಗಿದೆ.

ರಹಸ್ಯ ಸಭೆ: ಲಿಂಗಾಯತ ಸ್ವತಂತ್ರ ಧರ್ಮದ ವಿಚಾರವಾಗಿ ಕೆಲ ಮಠಾಧೀಶರು, ಸಂಘಟಕರು, ಸಮಾಜದ ಮುಖಂಡರ ರಹಸ್ಯ ಸಭೆಯೊಂದು ಹುಬ್ಬಳ್ಳಿಯಲ್ಲಿ ಆಗಿದ್ದು, ಸಭೆಯಲ್ಲಿ ಲಿಂಗಾಯತ ಧರ್ಮದೊಂದಿಗೆ ಗುರುತಿಸಿಕೊಂಡಿರುವ ವಿವಿಧ ಸಮಾಜಗಳಿಗೆ ಮಠಾಧಿಪತಿಗಳನ್ನು ಆಯಾ ಸಮಾಜದವರನ್ನೇ ನೇಮಕ ಮಾಡಬೇಕು ಎಂಬುದರ ಬಗ್ಗೆಯೂ ಗಂಭೀರವಾಗಿ ಚರ್ಚಿಸಲಾಗಿದೆ. ಈ ಹಿಂದೆ ಬಸವಾನುಯಾಯಿ ಮಠಗಳಲ್ಲಿ ಆಯಾ ಸಮಾಜದವರೇ ಮಠಾಧೀಶರಾಗುತ್ತಿದ್ದು, ಇದೀಗ ಕೆಲವೇ ಮಠಗಳಲ್ಲಿ ಮಾತ್ರ ಇಂತಹ ಪರಂಪರೆ ಉಳಿದು ಕೊಂಡಿದೆ. ಯಾರನ್ನೋ ತಂದು ಸಮಾಜದ ಮಠಕ್ಕೆ ಸ್ವಾಮೀಜಿ ಮಾಡುವ ಬದಲು ಉತ್ತಮರನ್ನು ಆಯಾ ಸಮಾಜದಲ್ಲಿಯೇ ಗುರುತಿಸಿ ಅವರನ್ನೇ ಸ್ವಾಮೀಜಿಯಾಗಿಸುವುದನ್ನು ಲಿಂಗಾಯತ ಪರಂಪರೆಯ ಮೂಲಕ ಪುನರಾರಂಭಿಸುವ ಬಗ್ಗೆ
ನಿರ್ಣಯಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಅಖೀಲ ಭಾರತ ವೀರಶೈವ ಮಹಾಸಭಾ ದವರು ವೀರಶೈವ-ಲಿಂಗಾಯತ ಸ್ವತಂತ್ರ ಧರ್ಮವಾಗಲಿ ಎಂಬ ಮೊಂಡುತನದಿಂದ ಹೊರ ಬಂದು ಲಿಂಗಾಯತ ಸ್ವತಂತ್ರ ಧರ್ಮವಾಗಲಿ ಎಂಬ ನಿಲುವಿಗೆ ಬರದಿದ್ದರೆ, ಲಿಂಗಾಯತ ಮಹಾಸಭಾದ ಘೋಷಣೆ ಅನಿವಾರ್ಯವಾಗಲಿದೆ. ವೀರಶೈವ ಹೆಸರಲ್ಲಿ ಸ್ವತಂತ್ರ ಧರ್ಮಕ್ಕೆ ಹೋದ ಪ್ರಸ್ತಾಪ ಎರಡು ಬಾರಿ ತಿರಸ್ಕೃತಗೊಂಡಿದ್ದು, ಮತ್ತೂಮ್ಮೆ ಅಂತಹುದೆ ಪ್ರಸ್ತಾಪ ಕಳುಹಿಸಿ ತಿರಸ್ಕಾರದ ಉತ್ತರ ಪಡೆಯಲು ಲಿಂಗಾಯತ ಸಮಾಜ ಸಿದ್ಧವಿಲ್ಲ. ಇದು ಲಿಂಗಾಯತರ ಬದುಕಿನ ಪ್ರಶ್ನೆಯಾಗಿದೆ.
– ಬಸವರಾಜ ಹೊರಟ್ಟಿ,
ವಿಧಾನ ಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next