Advertisement

ರಾಜ್ಯದಲ್ಲಿ ಹಂತ ಹಂತವಾಗಿ ಅನ್‌ಲಾಕ್‌ ಮಾಡಿ

03:44 AM Jun 10, 2021 | Team Udayavani |

ದೇಶಾದ್ಯಂತ ತೀವ್ರಗತಿಯಲ್ಲಿ ಕೊರೊನಾ ಏರಿಕೆಯಾಗುತ್ತಿದ್ದ ಸಮಯದಲ್ಲಿ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳು ಸೋಂಕಿನ ಪ್ರಸರಣವನ್ನು ಮುರಿಯಲು ಲಾಕ್‌ ಡೌನ್‌ ಅನ್ನು ಹೇರಿಕೆ ಮಾಡಿದ್ದವು. ಇದೊಂದು ರೀತಿಯಲ್ಲಿ ಕ್ಯಾನ್ಸರ್‌ಗೆ ಕಿಮೋಥೆರಪಿ ಇದ್ದ ಹಾಗೆ ಕೊರೊನಾ ಸರಪಳಿಯನ್ನು ಮುರಿಯಲು ಬೇಕಾದ ಕ್ರಮವೇ ಆಗಿತ್ತು.

Advertisement

ಲಾಕ್‌ ಡೌನ್‌ ದೇಶದ ನಾಗರಿಕರಿಗೆ ಒಂದು ರೀತಿಯಲ್ಲಿ ವಿನಾಶಕಾರಿ ಇದ್ದ ಹಾಗೆ. ಅದರಲ್ಲೂ ಅಭಿವೃದ್ಧಿಶೀಲ ದೇಶಗಳ ಮಧ್ಯಮ ವರ್ಗ ಮತ್ತು ಕೆಳ ಸಾಮಾಜಿಕ-ಆರ್ಥಿಕ ವರ್ಗಕ್ಕಂತೂ ಇದು ಉತ್ತಮವಾದ ಕ್ರಮ ಅಲ್ಲವೇ ಅಲ್ಲ. ಈ ವರ್ಗಗಳಿಗಾಗಿ ಲಾಕ್‌ಡೌನ್‌ ಅನ್ನು ತಪ್ಪಿಸಲೇಬೇಕು. ಹಾಗೆಯೇ, ಖಂಡಿತವಾಗಿಯೂ ಇದು ದೀರ್ಘ‌ಕಾಲಿನ ಪರಿಹಾರವೂ ಅಲ್ಲ. ಆದರೂ, ಸುನಾಮಿ ರೀತಿಯಲ್ಲಿ ಕೊರೊನಾ ಹಬ್ಬುತ್ತಿರುವಾಗ ಮತ್ತು ನಾಗರಿಕರ ಆರೋಗ್ಯದ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಮಾಡುತ್ತಿರುವಾಗ, ದೇಶಕ್ಕೆ ಲಾಕ್‌ ಡೌನ್‌ ಎಂಬುದು ಅನಿವಾರ್ಯವಾಗುತ್ತದೆ.

ಲಾಕ್‌ ಡೌನ್‌ ಅನ್ನು ತಪ್ಪಿಸಬಹುದು, ಯಾವಾಗ ಎಂದರೆ, ನಾವು ನಮ್ಮ ಹಳೆಯ ಅನುಭವಗಳಿಂದ ಪಾಠ ಕಲಿತು, ಅಂದರೆ ಕೊರೊನಾದ ಮೊದಲ ಅಲೆಯ ಪಾಠಗಳು ಹಾಗೂ ಬೇರೆ ಬೇರೆ ದೇಶಗಳ ಎರಡನೇ ಮತ್ತು ಮೂರನೇ ಅಲೆಯ ಪರಿಣಾಮಗಳಿಂದ ಪಾಠ ಕಲಿತು ಅದಕ್ಕೆ ತಕ್ಕಂತೆ ನಡೆದುಕೊಂಡರೆ ಮಾತ್ರ ಸಾಧ್ಯ.

ಒಂದು ವೇಳೆ ನಾವು ಕೊರೊನಾ ನಿಯಂತ್ರಣದ ವರ್ತನೆಗಳಾದ ಮಾಸ್ಕ್ ಹಾಕುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಆಗಾಗ ಕೈ ತೊಳೆದುಕೊಳ್ಳುವುದು, ಗುಂಪು ಸೇರುವುದನ್ನು ತಪ್ಪಿಸುವುದು, ಲಸಿಕೆ ಕೊಡುವ ಪ್ರಕ್ರಿಯೆಯನ್ನು ಹೆಚ್ಚಿಸುವುದನ್ನು ಮಾಡಿದರೆ ಲಾಕ್‌ ಡೌನ್‌ ನಂಥ ಕ್ರಮ ತಪ್ಪಿಸಬಹುದು. ಹಾಗೆಯೇ ಮೇಲೆ ಹೇಳಿದ ಈ ಎಲ್ಲ ಕ್ರಮಗಳನ್ನು ಪಾಲನೆ ಮಾಡಿದ್ದರೆ ಕೊರೊನಾದ ಎರಡನೇ ಅಲೆಯೂ ನಮ್ಮನ್ನು ಬಾಧಿಸುತ್ತಿರಲಿಲ್ಲ.

ಈಗ ಲಾಕ್‌ ಡೌನ್‌ ಕೊರೊನಾದ ಪ್ರಸರಣವನ್ನು ಒಂದು ರೀತಿಯಲ್ಲಿ ಮುರಿದಿದೆ. ಹೀಗಾಗಿಯೇ ನಾವು ಈಗ ಕೊರೊನಾ 2ನೇ ಅಲೆ ಕಡಿಮೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಮುಂದೆ ನಾವು ಹಂತ ಹಂತವಾಗಿ ಅನ್‌ಲಾಕ್‌ ಮಾಡುವ ಕ್ರಮಗಳತ್ತ ನೋಡಬೇಕಾಗಿದ್ದು ಮತ್ತು ಮೂರನೇ ಅಲೆಯೂ ಬರದಂತೆ ನೋಡಿಕೊಳ್ಳಬೇಕಾಗಿದೆ.

Advertisement

ಕೊರೊನಾ ಅನ್‌ ಲಾಕ್‌ ಮಾಡುವಾಗ ನಾವು ಒಂದು ವಿಚಾರವನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಕೊರೊನಾ ಇನ್ನೂ ನಮ್ಮನ್ನು ಬಿಟ್ಟು ಹೋಗಿಲ್ಲ, ನಮ್ಮ ನಡುವೆಯೇ ಇದೆ ಮತ್ತು ದೀರ್ಘಾವಧಿವರೆಗೆ ಅದು ನಮ್ಮೊಂದಿಗಿಯೇ ಇರಲಿದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿಯಂತ್ರಣ ಕ್ರಮಗಳನ್ನು ಬಿಡಬಾರದು. ಒಂದು ವೇಳೆ ಇದನ್ನು ಮರೆತೆವು ಎಂದಾದರೆ ಕೊರೊನಾದ ಕೆಟ್ಟ ಕ್ಷಣಗಳು ಮತ್ತೆ ನಮ್ಮನ್ನು ಬಾಧಿಸುತ್ತವೆ. ಹೀಗಾಗಿಯೇ ಕೊರೊನಾ ನಿಯಂತ್ರಣ ವರ್ತನೆಗಳನ್ನು ಪಾಲಿಸುತ್ತೇವೆ ಎಂಬುದನ್ನು ಖಚಿತಪಡಿಸಿಕೊಂಡೇ ಅನ್‌ ಲಾಕ್‌ ಪ್ರಕ್ರಿಯೆಯನ್ನು ಆರಂಭಿಸಬೇಕು.

ನಾವು ಅನ್‌ಲಾಕ್‌ ಮಾಡುವ ಮುನ್ನ ಮತ್ತೂಂದು ಪ್ರಮುಖ ಸಂಗತಿಯತ್ತ ಗಮನಹರಿಸಬೇಕು. ಈ ಮರಣಾಂತಿಕ ವೈರಸ್‌ ಅನ್ನು ನಿಯಂತ್ರಿಸುವಲ್ಲಿ ಅಥವಾ ತಗ್ಗಿಸುವಲ್ಲಿ ಪ್ರಮುಖ ಸಾಧನವಾಗಿರುವ ಲಸಿಕೆ ಪ್ರಮಾಣವನ್ನು ಹೆಚ್ಚಿಸಬೇಕು. ಅಂದರೆ, ಆದಷ್ಟು ಕಡಿಮೆ ಅವಧಿಯಲ್ಲಿ ಆದಷ್ಟು ಹೆಚ್ಚು ಮಂದಿಗೆ ಲಸಿಕೆ ಹಾಕಬೇಕು. ಲಾಕ್‌ ಡೌನ್‌ ಅನ್ನು ಹಂತಹಂತವಾಗಿ ತೆಗೆಯಬೇಕು, ಅನ್‌ ಲಾಕ್‌ ಪ್ರಕ್ರಿಯೆಯಲ್ಲಿ ಈ ರೋಗದ ಮೇಲೆ ಹೆಚ್ಚು ನಿಗಾ ಇಡುವುದು ಅತ್ಯಂತ ಪ್ರಮುಖವಾದದ್ದು. ನಾವು ಯಾವುದೇ ಕಾರಣಕ್ಕೂ ನಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಡಬಾರದು. ಎಲ್ಲ ಅತ್ಯಗತ್ಯ ಸೇವೆಗಳು ಮತ್ತು ಕೆಲಸಗಳು, ಅಂದರೆ, ಜೀವನಕ್ಕೆ ಮುಖ್ಯವಾಗಿ ಬೇಕಾಗಿರುವ ಹಾಗೂ ಸಾಮಾಜಿಕ-ಆರ್ಥಿಕ ವರ್ಗಗಳು ಮತ್ತು ಮಧ್ಯಮ ವರ್ಗಕ್ಕೆ ಸೇರಿದ ಸೇವೆಗಳನ್ನು ಮೊದಲಿಗೆ ತೆರೆಯಬೇಕು.

ಹಾಗೆಯೇ ಶ್ರಮಿಕ ವರ್ಗ ಮತ್ತು ದಿನಗೂಲಿ ಕೆಲಸ ಮಾಡಿ ಬದುಕುತ್ತಿರುವ ಮಂದಿಗಾಗಿಸಾರಿಗೆ ವ್ಯವಸ್ಥೆಯ ಸರಳೀಕರಣ ಅಥವಾ ಸಾರ್ವಜನಿಕ ಸಾರಿಗೆಯಲ್ಲಿ ಕಡಿಮೆ ಸಂಖ್ಯೆಯ ಜನರಿಗೆ (ಶೇ.20ರಿಂದ 25ಸಾಮರ್ಥ್ಯ) ಓಡಾಡಲು ಅವಕಾಶ ಮಾಡಿಕೊಡಬಹುದು. ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಖಾಸಗಿ ಸಾರಿಗೆ ವ್ಯವಸ್ಥೆಯ ಆರಂಭಕ್ಕೂ ಅವಕಾಶ ಮಾಡಿಕೊಡಬಹುದು. ಮಾರ್ಷಲ್‌ ಗಳ ಕಟ್ಟುನಿಟ್ಟಿನ ನಿಗಾದಲ್ಲಿ ಮಾರುಕಟ್ಟೆಗಳ ಆರಂಭಕ್ಕೂ ಒಪ್ಪಿಗೆ ಕೊಡಬಹುದು. ಇಲ್ಲಿ ಜನಸಂದಣಿ ಆಗಬಾರದು. ಒಂದು ವೇಳೆ ಕಡಿಮೆ ಅವಧಿಗೆ ಮಾರುಕಟ್ಟೆ ಓಪನ್‌ ಮಾಡಲು ಅವಕಾಶ ಮಾಡಿಕೊಟ್ಟರೆ ಹೆಚ್ಚು ಜನ ಸೇರಲು ಅವಕಾಶವಾಗುತ್ತದೆ. ಎಲ್ಲಿ ಸಾಧ್ಯವೋ ಅಲ್ಲಿ ಬಯಲು ಮಾರುಕಟ್ಟೆಗಳಿಗೆ ಪ್ರೋತ್ಸಾಹ ನೀಡಬೇಕು. ಅಗತ್ಯ ವಸ್ತುಗಳನ್ನು ಮನೆಗೇ ವಿತರಣೆ ಮಾಡುವ ಮೂಲಕ ಜನರ ಓಡಾಟವನ್ನು ಸಾಧ್ಯವಾದಷ್ಟು ನಿಯಂತ್ರಣ ಮಾಡಬಹುದು. ಉತ್ತಮ ಗಾಳಿ ಬೆಳಕು ಇರುವ, ಬೇರೆ ಬೇರೆ ಸಮಯದಲ್ಲಿ, ಗುಂಪು ಸೇರದಂತೆ ಮತ್ತು ಮಾಸ್ಕ್ ಹಾಗೂ ಸ್ಯಾನಿಟೈಸೇಶನ್‌ ಅನ್ನು ಕಡ್ಡಾಯವಾಗಿ ಜಾರಿ ಮಾಡುವ ಮೂಲಕ ಕಚೇರಿಗಳನ್ನು ತೆಗೆಯಬಹುದು.

ಸಾರ್ವಜನಿಕವಾಗಿ ಜನ ಸೇರದಂತೆ ದೀರ್ಘಾವಧಿವರೆಗೆ ಕಠಿನ ನಿರ್ಬಂಧಗಳನ್ನು ಹಾಕಬೇಕಿದೆ. ಅಂದರೆ ಬೃಹತ್‌ ಕಾರ್ಯಕ್ರಮಗಳು, ರ್ಯಾಲಿಗಳು, ಪ್ರತಿಭಟನೆಗಳು, ರಾಜಕೀಯ ಅಥವಾ ಧಾರ್ಮಿಕ ಸಮಾರಂಭಗಳನ್ನು ನಿರ್ಬಂಧಿಸಬೇಕು. ಮನೋರಂಜನೆ ಅಥವಾ ಜೀವನಶೈಲಿ ವಿಷಯಗಳ ಸಂಬಂಧಿಸಿದ ಚಟುವಟಿಕೆಗಳನ್ನು ಕಟ್ಟಕಡೆಯದಾಗಿ ತೆರೆಯಬೇಕು. ಇದನ್ನೂ ಅತ್ಯಂತ ನಿಯಂತ್ರಿತ ರೀತಿಯಲ್ಲಿ ಓಪನ್‌ ಮಾಡಬೇಕು. ಅಂದರೆ, ಮಾಲ್‌ಗಳು, ಥಿಯೇಟರ್‌ಗಳು, ಸಾರ್ವಜನಿಕ ಈಜುಕೊಳಗಳು, ಜಿಮ್‌ಗಳು, ರೆಸ್ಟೋರೆಂಟ್‌ ಗಳು ಮತ್ತು ಇತರ ರೀತಿಯ ಮನೋರಂಜನೆ ಕೇಂದ್ರಗಳನ್ನು ಕಡೆಯದಾಗಿ ತೆಗೆಯಬೇಕು. ಎಲ್ಲವೂ ಸರಿ ಅನ್ನಿಸಿದಾಗ ಶೇ.50ರ ಸಾಮರ್ಥ್ಯದೊಂದಿಗೆ ಇವುಗಳನ್ನು ಸರಕಾರ ತೆರೆಯಬಹುದು.

ಶಾಲೆಗಳು ಮತ್ತು ಕಾಲೇಜುಗಳನ್ನು ಆನ್‌ ಲೈನ್‌ ಮತ್ತು ಆಫ್ ಲೈನ್‌ ಶಿಕ್ಷಣದ ಸಂಯೋಜನೆಯೊಂದಿಗೆ ನಡೆಸಬಹುದು. ಇಲ್ಲೂ ಬೇರೆ ಬೇರೆ ಸಮಯದಲ್ಲಿ ಮತ್ತು ಇತರ ಕೊರೊನಾ ನಿಯಂತ್ರಣ ವ್ಯವಸ್ಥೆಗಳನ್ನು ಮಾಡಿಕೊಂಡು ಆರಂಭಿಸಬಹುದು.
ಲಾಕ್‌ ಡೌನ್‌ ಅನ್ನು ತೆಗೆಯುವ ಸಂದರ್ಭದಲ್ಲಿ ದೀರ್ಘಾವಧಿವರೆಗೆ ಹೊಸ ಸೋಂಕು ಪ್ರಕರಣಗಳು, ಪರೀಕ್ಷೆ ಪಾಸಿಟಿವಿಟಿ ದರ ಗಳು, ಆರೋಗ್ಯ ಮೂಲ ಸೌಕರ್ಯ ಲಭ್ಯತೆ, ಅದರಲ್ಲೂ ಪ್ರಮುಖವಾಗಿ ಆಸ್ಪತ್ರೆಗಳಲ್ಲಿನ ಆಮ್ಲಜನಕ ಇರುವ ಬೆಡ್‌ಗಳಲ್ಲಿ ಎಷ್ಟು ಮಂದಿ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದನ್ನು ನೋಡಿಕೊಂಡು ಅನ್‌ ಲಾಕ್‌ಗೆ ಮಾರ್ಗ ಸೂಚಿಗಳನ್ನು ನೀಡಬೇಕು.

ಹಾಗೆಯೇ, ಎಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಇಳಿಕೆಯಾಗಿದೆಯೋ ಅಲ್ಲಿ ಅನ್‌ ಲಾಕ್‌ ಮಾಡಬೇಕು ಮತ್ತು ಎಲ್ಲಿ ಸೋಂಕು ಹೆಚ್ಚಿದೆಯೋ ಅಂಥ ಪ್ರದೇಶಗಳಲ್ಲಿ ಕಠಿನ ಕ್ರಮಗಳನ್ನು ಮುಂದುವರಿಸಬೇಕು. ಹೆಚ್ಚು ಸೋಂಕು ಇರುವ ಪ್ರದೇಶಗಳಿಂದ ಕಡಿಮೆ ಸೋಂಕು ಇರುವ ಪ್ರದೇಶಗಳಿಗೆ ಜನ ಓಡಾಡದಂತೆ ನಿಯಂತ್ರಿಸಬೇಕು.
ಈ ಎಲ್ಲ ಸಂಗತಿಗಳನ್ನು ಗಣನೆಗೆ ತೆಗೆದುಕೊಂಡು ಸದ್ಯ ಜಾರಿಯಲ್ಲಿರುವ ಲಾಕ್‌ ಡೌನ್‌ ಅನ್ನು ಹಂತ ಹಂತವಾಗಿ ಅನ್‌  ಲಾಕ್‌ ಮಾಡುತ್ತಾ ಹೋದರೆ, ಮೂರನೇ ಅಲೆ ಬರದಂತೆ ತಡೆಯಬಹುದು.

– ಡಾ| ಸುದರ್ಶನ್‌ ಬಲ್ಲಾಳ್‌, ಮಣಿಪಾಲ್‌ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next