Advertisement

ಅನಾರು ಸಂಪರ್ಕಕ್ಕೂ ಸ್ಟೀಲ್‌ ಬ್ರಿಡ್ಜ್ ಯೋಜನೆ

07:32 PM Sep 11, 2019 | mahesh |

ಬೆಳ್ತಂಗಡಿ: ನೆರೆಗೆ ಸಿಲುಕಿ ಆ. 9ರಂದು ಬಾಂಜಾರುಮಲೆ ಮತ್ತು ಅನಾರು ಸೇತುವೆ ಕೊಚ್ಚಿಹೋದ ಪರಿಣಾಮ ತಿಂಗಳೊಳಗೆ ತಾತ್ಕಾಲಿಕ ನೆಲೆಯಲ್ಲಿ ಸುರಕ್ಷಿತ ಹಾಗೂ ಬಲಿಷ್ಠ ಸಂಪರ್ಕ ಸೇತುವೆ ನಿರ್ಮಿಸುವಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಶಕ್ತವಾಗಿದೆ.

Advertisement

ಬಾಂಜಾರುಮಲೆಗೆ ಸ್ಟೀಲ್‌ ಬ್ರಿಡ್ಜ್ ನಿರ್ಮಾಣವಾದ ಬೆನ್ನಲ್ಲೇ ಅನಾರು ಸೇತುವೆಗೂ ಸ್ಟೀಲ್‌ ಬ್ರಿಡ್ಜ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಶಾಸಕ ಹರೀಶ್‌ ಪೂಂಜ ಅವರ ಸೂಚನೆಯಂತೆ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಇಲಾಖೆ ಸ್ಟೀಲ್‌ ಬ್ರಿಡ್ಜ್ ಅಳವಡಿಸಲು ಪೂರ್ವ ತಯಾರಿ ನಡೆಸಿದೆ.

50 ಮೀ. ಉದ್ದ, 4 ಅಡಿ ಅಗಲ
ಸುಮಾರು 50 ಮೀ. ಉದ್ದ, 4 ಅಡಿ ಅಗಲದ ಸ್ಟೀಲ್‌ ಬ್ರಿಡ್ಜ್ ನಿರ್ಮಾಣವಾಗಲಿದ್ದು, ಪಾದಚಾರಿಗಳಿಗೆ, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಕೂಲವಾಗಲಿದೆ. ಮಾಸ್ಟರ್‌ ಪ್ಲಾನರಿಯಿಂದ ಯೋಜನೆ ಸಿದ್ಧಗೊಂಡಿದೆ. 3 ಪಿಲ್ಲರ್‌ ಅಳವಡಿಸಲಿದ್ದು, ಮಧ್ಯ ಭಾಗದಲ್ಲಿ ಬಂಡೆ ಕೊರೆದು ಪಿಲ್ಲರ್‌ ಅಳವಡಿಸಲಾಗುತ್ತದೆ. ಕಾರ್ಯಪಾಲಕ ಅಭಿಯಂತ ಯಶವಂತ್‌, ಶಾಸಕರು, ಸ. ಕಾರ್ಯ ಪಾಲಕ ಅಭಿಯಂತ ಶಿವಪ್ರಸಾದ್‌ ಅಜಿಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನೀರಿನ ಹರಿವು ಕಡಿಮೆಯಾದ ತತ್‌ಕ್ಷಣ ಸ್ಟೀಲ್‌ ಬ್ರಿಡ್ಜ್ ಅಳವಡಿಕೆ ಕಾಮಗಾರಿ ನಡೆಯಲಿದೆ.

ಸೇತುವೆ ಹಾನಿಯಿಂದ ಈ ಭಾಗದ ಸುಮಾರು 75 ಕುಟುಂಬಗಳು ತೊಂದರೆ ಅನುಭವಿಸುತ್ತಿದ್ದಾರೆ. ಸ್ಟೀಲ್‌ ಬ್ರಿಡ್ಜ್ ನಿರ್ಮಾಣದಿಂದ 25 ಕಿ.ಮೀ. ಸುತ್ತುಬಳಸಿ ಬರಬೇಕಾದ ಕತ್ತರಿಗುಡ್ಡೆ, ಅನಾರು, ನಳ್ಳಿಲಿ, ಸಾತಿಲು ನಿವಾಸಿಗಳಿಗೆ ಅನುಕೂಲವಾಗಲಿದೆ. ಮಕ್ಕಳು ಶಾಲೆಗೆ ತೆರಳಲು ಅನುಭವಿಸುತ್ತಿರುವ ಸಮಸ್ಯೆ ಮನಗಂಡು ಶಾಸಕ ಹರೀಶ್‌ ಪೂಂಜ ಎರಡು ಹೊತ್ತು ಬಾಡಿಗೆ ನೆಲೆಯಲ್ಲಿ ಜೀಪ್‌ ವ್ಯವಸ್ಥೆಗೊಳಿಸಿದ್ದು, ಇದರಿಂದ ಮಕ್ಕಳು ಶಾಲೆಗೆ ತೆರಳಲು ಅನುಕೂಲವಾಗಿದೆ.

ಶೀಘ್ರ ಕಾಮಗಾರಿ
ಅನಾರು ಸೇತುವೆ ಹಾನಿಗೊಳಗಾದ ಸ್ಥಳದಲ್ಲಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ 3 ಪಿಲ್ಲರ್‌ ಸಹಿತ ಸ್ಟೀಲ್‌ ಬ್ರಿಡ್ಜ್ ನಿರ್ಮಾಣವಾಗಲಿದೆ. ನೀರು ಕಡಿಮೆಯಾದ ತತ್‌ಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು.
– ಶಿವಪ್ರಸಾದ್‌ ಅಜಿಲ
ಸಹಾಯಕ ಕಾರ್ಯಪಾಲಕ ಅಭಿಯಂತ, ಪಿಡಬ್ಲ್ಯುಡಿ, ಬೆಳ್ತಂಗಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next