Advertisement

ಮೊಬೈಲ್‌ ಕದ್ದು ಗೂಗಲ್‌ ಪೇ, ಫೋನ್‌ ಪೇ ಮೂಲಕ ಹಣ ದೋಚುತ್ತಿದ್ದ ಕದೀಮರು

12:15 PM Jul 26, 2022 | Team Udayavani |

ಕಲಬುರಗಿ: ಮೊಬೈಲ್‌ ಕಳ್ಳತನ ಮಾಡಿ ಫೋನ್‌ ಪೇ ಮತ್ತು ಗೂಗಲ್‌ ಪೇ ಮೂಲಕ ಹಣ ದೋಚುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಸೆನ್‌ ಪೊಲೀಸರು ಬಂಧಿಸಿದ್ದಾರೆ.

Advertisement

ಬಂಧಿತರಿಂದ ಒಟ್ಟು 22 ಮೊಬೈಲ್‌ ಗಳು, 3.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ತೆಲಂಗಾಣದ ಕಿರಣ್‌ ರಾಜು ಸಾತಪಾಟಿ ಮತ್ತು ಶಿವಾ ಅಲಿಯಾಸ್‌ ಶಿವಾಜಿ ವೆಂಕಟೇಶ ಉಪ್ಲಾ ಎಂದು ಗುರುತಿಸಲಾಗಿದೆ.

ಇವರು ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ರಾಯಚೂರು ಮತ್ತು ಗದಗ ಜಿಲ್ಲೆಗಳಲ್ಲಿ ಹಲವಾರು ಜನರ ಮೊಬೈಲ್‌ ಕಳ್ಳತನ ಮಾಡಿದ್ದಾರೆ. ಬಳಿಕ ಆ ಮೊಬೈಲ್‌ನಲ್ಲಿರುವ ಗೂಗಲ್‌ ಮತ್ತು ಫೋನ್‌ಪೇಗಳಿಂದ ಹಣವನ್ನು ದೋಚುತ್ತಿದ್ದರು. ಅವರು ಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಕೈ ಚಳಕ ತೋರಿಸಿ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಉಪಟಳ ಉಂಟು ಮಾಡಿದ್ದರು. ಗೂಗಲ್‌ ಮತ್ತು ಫೋನ್‌ ಪೇ ಮೂಲಕ ಎಷ್ಟು ಹಣ ಎಗರಿಸಿದ್ದಾರೆ ಎನ್ನುವುದು ತನಿಖೆಯಿಂದ ಗೊತ್ತಾಗಬೇಕಾಗಿದೆ.

ಬಂಧಿತರಿಂದ ಒಂದು ಕಾರು, 22 ಮೊಬೈಲ್‌ ಜಪ್ತಿ ಮಾಡಿಕೊಳ್ಳಲಾಗಿದೆ. ಮೊಬೈಲ್‌ ಜತೆ ತಮ್ಮ ಖಾತೆಗಳಿಂದ ಹಣ ಕಳೆದುಕೊಂಡವರು ಆಯಾ ಜಿಲ್ಲೆಗಳಲ್ಲಿ ದೂರು ನೀಡಿದ್ದಾರೆ. ಅದನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ವ್ಯಕ್ತಿ ಉತ್ಸವ ಮಾಡುತ್ತಿದೆ, ನಾವು ಜನೋತ್ಸವ ಮಾಡುತ್ತೇವೆ: ಸಚಿವ ಸುನಿಲ್ ಕುಮಾರ್

Advertisement

ತಂಡ ರಚನೆ: ಕದೀಮರ ಬಂಧನದ ಬಳಿಕ ಇದು ಕೇವಲ ಇಬ್ಬರ ಕೆಲಸವಲ್ಲ, ಇವರ ಹಿಂದೆ ದೊಡ್ಡ ತಂಡವೇ ಇದೆ ಎಂದು ಗೊತ್ತಾಗಿದೆ. ಆದ್ದರಿಂದ ವಿಶೇಷ ತಂಡ ರಚನೆ ಮಾಡಲಾಗಿದೆ. ಎಸ್ಪಿ ಇಶಾ ಪಂತ್‌ ಮತ್ತು ಎಎಸ್‌ಪಿ ಪ್ರಸನ್ನ ದೇಸಾಯಿ ಮಾರ್ಗದರ್ಶನದಲ್ಲಿ ಸಿಇಎನ್‌ ಠಾಣೆ ಪಿಐ ಸೋಮಲಿಂಗ ಕಿರೇದಳ್ಳಿ ನೇತೃತ್ವದಲ್ಲಿ ಪಿಎಸ್‌ಐ ಚೇತನ್‌ ಮತ್ತು ಸಿಬ್ಬಂದಿ ಅತ್ಯಂತ ಜಾಗರೂಕತೆಯಿಂದ ಖದೀಮರನ್ನು ಬಂಧಿಸಿದ್ದಾರೆ. ಆದರೆ, ಇವರೊಂದಿಗೆ ಇರುಬಹುದು ಎನ್ನಲಾಗಿರುವ ತಂಡವನ್ನು ಬಲೆಗೆ ಕೆಡವಲು ತಂಡ ರಚನೆ ಮಾಡಲಾಗಿದೆ. ಸೆನ್‌ ಠಾಣೆಯ ಸಿಬ್ಬಂದಿ ಮತ್ತು ಅಧಿಕಾರಿಗಳ ಪರಿಶ್ರಮಕ್ಕೆ ಎಸ್ಪಿ, ಎಎಸ್‌ಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next