Advertisement

ತಿಪ್ಪೆ ಪಕ್ದಾಗೆ ಇರೋ ಜಾಗ್ಧಾಗೇ ಇದೀವಿ

02:57 PM Dec 04, 2018 | |

ದಾವಣಗೆರೆ: ನೀವಾದ್ರು ಹೊಟ್ಯಾಗೆ ಹಾಕ್ಕೊಂಡು ನಮ್ಮಂತೋರಿಗೊಂದಿಷ್ಟು ನೆರಳು ಮಾಡಿಕೊಡ್ರಿ ಸ್ವಾಮಿ. ನಿಮ್‌ ಹೆಸ್ರು ಹೇಳ್ಕೊಂಡು ಹೆಂಗೋ ಬದ್ಕೊತೀವಿ… ಇದು, ಹರಿಹರ ತಾಲೂಕಿನ ಕೊಂಡಜ್ಜಿಯ ಅಲೆಮಾರಿ ಜನಾಂಗದ ಹಿರಿಯ ಮಹಿಳೆಯರು ಸೋಮವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ಗೆ ಮಾಡಿಕೊಂಡ ಮನವಿಯ ಪರಿ.

Advertisement

ಊರಿಂದ ಊರಿಗೆ ಬಾಚಣಿಕೆ, ಕೂದ್ಲ. ಹೇರ್‌ಪಿನ್‌… ಅದು ಇದು ಮಾರ್ಕೊಂತಾ ಹೋಗ್ತೀವಿ. ತಿಪ್ಪೆ ಪಕಾªಗೇ ಇರೋ ಜಾಗ್ಧಾಗೆ ಇದೀವಿ. ಅಲ್ಲಿನೂ ಬಿಡ್ರಿ ಅಂತಾ ಹೇಳ್ತಾರೆ. ಎಷ್ಟೋ ಜನ ಫುಟ್‌ಪಾತ್‌ ಮ್ಯಾಲೇನೇ ಜೀವ ಮಾಡ್ತಾ ಇದೀವಿ… ಎಂದು ಅನೇಕರು ಅಳಲು ತೋಡಿಕೊಂಡರು.

ಮಳೆಗಾಲ್ದಾಗೆ ನಮ್‌ ಕಸ್ಟ ಹೇಳೊಂಗೇ ಇಲ್ಲ. ಮಳೆ ನೀರು ಗುಡಿಸ್ಲು ಒಳಗೆ ನುಗ್ತಾತೆ. ಮಕ್ಳು-ಮರಿ ಕಟ್ಕೊಂಡು ಎಲ್ಲಿಗೆ ಹೋಗ್ಬೇಕು ಅನ್ನೊದೇ ಗೊತ್ತಾಗಾಂಗಿಲ್ಲ. 60-70 ವರ್ಸದಿಂದ ಇದೇ ಕಸ್ಟ. ಎಲ್ರುನೂ ಮಾಡಿಕೊಡ್ತೀವಿ ಅಂತಾನೇ ಹೇಳ್ತಾರೆ. ನೀವಾದ್ರೂ ಹೊಟ್ಯಾಗೆ ಹಾಕ್ಕೊಂಡು ನಮಗೊಂದಿಷ್ಟು ನೆರಳು ಮಾಡಿಕೊಡ್ರಿ ಸ್ವಾಮಿ…. ಎಂದು ವಿನಂತಿಸಿದರು.

ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ನಾನು ಚಾರ್ಜ್‌ ತೆಗೊಂಡ ಮೇಲೆ ಮಾಡಿರೋ ಮೊದಲನೇ ಮೀಟಿಂಗ್‌ ನಿಮು. ಖಂಡಿತಾ ಮಾಡಿಕೊಡ್ತೀನಿ. ನಿಮ್ಗೆ ಜಾಗ ಕೊಡಬೇಕು ಅಂತಾನೂ ಡಿಸೈಡ್‌ ಮಾಡಿದೀವಿ ಎಂದ ಅವರು, ವಿಶೇಷ ಪ್ರಕರಣ ಎಂಬುದಾಗಿ ಪರಿಗಣಿಸಿ ಜಾಗದ ವ್ಯವಸ್ಥೆ ಮಾಡಿಕೊಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್‌. ವಿಜಯ್‌ಕುಮಾರ್‌ಗೆ ಸೂಚಿಸಿದರು.

ಗಾಣಿಗ ಸಮಾಜದವರಿಗೆ ಪ್ರವರ್ಗ- 2 ಪ್ರಮಾಣ ಪತ್ರ ಎಲ್ಲಾ ಜಿಲ್ಲೆಯಲ್ಲಿ ಕೊಡುತ್ತಾರೆ. ಆದರೆ, ದಾವಣಗೆರೆ ಜಿಲ್ಲೆಯಲ್ಲಿ ಮಾತ್ರ ಸಮಸ್ಯೆ ಆಗಿದೆ. ಸ್ಥಾನಿಕ ಪರಿಶೀಲನೆ ಸಂದರ್ಭದಲ್ಲಿ ಅಧಿಕಾರಿಗಳು, ಎತ್ತು-ಗಾಣ ಎಲ್ಲಿ, ಯಾಕೆ ವಿಭೂತಿ ಹಚ್ಚುತ್ತೀರಿ, ಮಾಂಸ ತಿನ್ನೊಲ್ವೆ… ಎಂಬೆಲ್ಲಾ ಅಸಂಬದ್ಧ ಪ್ರಶ್ನೆ ಕೇಳುತ್ತಾರೆ ಎಂಬುದಾಗಿ ಗಾಣಿಗ ಸಮಾಜದ ಮುಖಂಡರಾದ ಮಲ್ಲೇಶಪ್ಪ, ಲೋಕೇಶ್‌ ಇತರರು ಜಿಲ್ಲಾಧಿಕಾರಿಗೆ ತಿಳಿಸಿದರು.

Advertisement

ದಾವಣಗೆರೆ ಜಿಲ್ಲೆಯಲ್ಲಿ ಮಾತ್ರವೇ ಈ ರೀತಿಯ ತೊಂದರೆ ಇದೆ ಎಂದು ಮಾಹಿತಿ ಆಯೋಗದ ಮಾಜಿ ಅಧ್ಯಕ್ಷ ಡಾ| ಶೇಖರ್‌ ಸಜ್ಜನ್‌ ಧ್ವನಿಗೂಡಿಸಿದರು. ಸ್ಥಾನಿಕ ಪರಿಶೀಲನೆ ಸಂದರ್ಭದಲ್ಲಿ ಜಾತಿಯನ್ನ ದೃಢೀಕರಿಸಲು ಅಧಿಕಾರಿಗಳು ಪ್ರಶ್ನೆ ಕೇಳುತ್ತಾರೆ. 

ಅದು ಅವರ ಕರ್ತವ್ಯ. ಹಾಗಾಗಿ ಅಸಂಬದ್ಧ ಪ್ರಶ್ನೆ ಕೇಳುತ್ತಾರೆ ಎಂದು ತಿಳಿಯುವುದು ಬೇಡ. ಸ್ಥಾನಿಕ ಪರಿಶೀಲನೆ ನಡೆಸಿ, ಅರ್ಹರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕಾಗುತ್ತದೆ. ಸರ್ಕಾರದ ಆದೇಶದನ್ವಯ ಗಾಣಿಗ ಸಮಾಜಕ್ಕೆ ಪ್ರವರ್ಗ-2 ಎ ಪ್ರಮಾಣ ಪತ್ರ ವಿತರಣೆಗೆ ಎಲ್ಲಾ ತಹಶೀಲ್ದಾರ್‌ಗಳಿಗೆ ಲಿಖೀತವಾಗಿ ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಸರ್ವೇ ನಂಬರ್‌ 34 ರಲ್ಲಿ ಸರ್ಕಾರಿ ಶಾಲೆಗೆ ದಾನ ಮಾಡಿದ್ದ ಒಂದು ಎಕರೆ ಜಾಗವನ್ನು ಮತ್ತೆ ತಮಗೆ ವಾಪಸ್‌ ಕೊಡಿಸಬೇಕು ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಣಕಾರ್‌ ವಿರುಪಾಕ್ಷಪ್ಪ ಮನವಿ ಮಾಡಿದರು. ಅರ್ಜಿ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿಗೆ ಸೂಚಿಸಿದರು.

ದಾವಣಗೆರೆ ವಿನೋಬನಗರದ ರಾಘವೇಂದ್ರ ಎಂಬುವರು ಬಿಸಿಎಂ ಇಲಾಖೆಯಲ್ಲಿ ಕಳೆದ ಎರಡು ವರ್ಷದಿಂದ ಆಟೋರಿಕ್ಷಾ ಸಾಲ ಮಂಜೂರಾತಿಗೆ ಅಲೆದಾಡಿಸಲಾಗುತ್ತಿದೆ ಎಂದಾಗ ಆ ಬಗ್ಗೆ ಗಮ ಹರಿಸಲು ಸಂಬಂಧಿತರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ದಾವಣಗೆರೆಯ ಎಸ್‌.ಎಸ್‌. ಮಲ್ಲಿಕಾರ್ಜುನ ನಗರ ಎ ಬ್ಲಾಕ್‌ನ ಯಾಸ್ಮಿನ್‌ ತಾಜ್‌ ಎಂಬುವರ ಪರ, ಒಂದು ವರ್ಷದಿಂದ ಶಾದಿಭಾಗ್ಯ ಯೋಜನೆಯ ಪ್ರೊತ್ಸಾಹಧನ ಬಂದಿಲ್ಲ ಎಂದು ಮನವಿ ಸಲ್ಲಿಸಲಾಯಿತು. ಜೇಷ್ಠತೆ ಆಧಾರದಲ್ಲಿ ಪ್ರೋತ್ಸಾಹಧನ ನೀಡಲಾಗುತ್ತಿದೆ. ಸಾಕಷ್ಟು ಅರ್ಜಿ ಬಾಕಿ ಇವೆ ಎಂದು ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ತಿಳಿಸಿದರು.

ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಸಮೀಪದ ಗ್ರಾಮದ ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನ ಸಮುದಾಯ ಭವನಕ್ಕೆ ಅನುದಾನ, ಮನೆ ಕೋರಿ, ಗಂಗಾ ಕಲ್ಯಾಣ, ಕಳೆದ 4 ತಿಂಗಳನಿಂದ ವೃದ್ಧಾಪ್ಯ ವೇತನ ಬರದೇ ಇರುವುದು.. ಇತರೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳು ಸಲ್ಲಿಕೆಯಾದವು.  ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಮಹಾನಗರ ಪಾಲಿಕೆ ಉಪ ಆಯುಕ್ತ ರವೀಂದ್ರ ಬಿ. ಮಲ್ಲಾಪುರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಬಿ. ಮುದಗಲ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ|ಎಂ.ಎಸ್‌. ತ್ರಿಪುಲಾಂಬ, ತಹಶೀಲ್ದಾರ್‌ ಜಿ. ಸಂತೋಷ್‌ ಕುಮಾರ್‌ ಒಳಗೊಂಡಂತೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. 

ಎಷ್ಟೊಂದು ಹಂದಿ!
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಮಹಾಲಕ್ಷ್ಮಿ ಬಡಾವಣೆಯಲ್ಲಿ ಹಂದಿಗಳ ಹಾವಳಿ ವಿಪರೀತವಾಗಿದೆ. ಹಂದಿಗಳ ನಿರ್ಮೂಲನೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಬಡಾವಣೆ ನಿವಾಸಿಗಳು ಮನವಿ ಸಲ್ಲಿಸಿದಾಗ, ಈ ಊರಲ್ಲಿ ಇಷ್ಟೊಂದು ಹಂದಿಗಳು ಇರುತ್ತವೆ ಅಂದುಕೊಂಡಿರಲೇ ಇಲ್ಲ. ಎಷ್ಟೊಂದು ಹಂದಿಗಳಿವೆ ಅನ್ನೋದೇ ಆಶ್ಚರ್ಯ ಎಂದು ಅಚ್ಚರಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ನಗರಪಾಲಿಕೆಯಿಂದ ಹಂದಿ ಹಿಡಿದು, ಬೇರೆ ಕಡೆ ಸಾಗಿಸಲಾಗುತ್ತಿದೆ. ಹೊಸ ವರ್ಷದ ವೇಳೆಗೆ ಎಲ್ಲಾ ಹಂದಿಗಳ ಹಿಡಿದು, ಬೇರೆ ಕಡೆ ಸಾಗಿಸಲಾಗುವುದು ಎಂದರು.

ತನಿಖೆ ಮಾಡಿಸ್ತೀವಿ
ಮಹಾನಗರ ಪಾಲಿಕೆಯ ದ್ವಿತೀಯ ದರ್ಜೆ ಸಹಾಯಕರೇ ಆಶ್ರಯ ಯೋಜನೆಯ ಹಕ್ಕುಪತ್ರ ಪಡೆದುಕೊಂಡಿದ್ದಾರೆ. ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿ, ಮಾಹಿತಿ ಕೋರಿದ್ದರೂ ಮಾಹಿತಿ ನೀಡುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ್‌ ಮನವಿ ಮಾಡಿಕೊಂಡರು. ನಗರಪಾಲಿಕೆಯವರೇ ಹಕ್ಕುಪತ್ರ ತೆಗೆದುಕೊಂಡಿದ್ದಾರೆ ಎನ್ನುವ ವಿಷಯದ ಬಗ್ಗೆ ತನಿಖೆ ನಡೆಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಆ ರೀತಿ ಪದ ಬಳಕೆ ಬೇಡ
ಹರಿಹರದ ಮೈಸೂರು ಕಿರ್ಲೋಸ್ಕರ್‌ ಕಂಪನಿ ನೌಕರರಿಗೆ 7.45 ಕೋಟಿಯಷ್ಟು ಗ್ರಾಚ್ಯುಟಿ ಕೊಡುವ ಆದೇಶವಾಗಿದ್ದರೂ ಇನ್ನೂ ಬಂದಿಲ್ಲ. ಗ್ರಾಚ್ಯುಟಿ ಹಣ ಬರದೇ ಸಾಯ್ತಾ ಇದೀವಿ…. ಎಂದು ಮಾಜಿ ನೌಕರರೊಬ್ಬರು ಹೇಳಿದಾಗ, ಸಾಯ್ತಾ ಇದೀವಿ.. ಅನ್ನುವ ಪದ ಬಳಸಬೇಡಿ. ಅಷ್ಟೊಂದು ಡಿಪ್ರಸ್‌ ಆದ ಪದ ಬಳಸಬಾರದು. ನೀವು ಅರ್ಜಿ ಕೊಟ್ಟ ಮೇಲೆ ಕಾರ್ಮಿಕ ಅಧಿಕಾರಿಗಳ ಸಭೆ ನಡೆಸಿ, ಫಾಲೋ ಮಾಡ್ತಾ ಇದೀವಿ. ಆದರೂ, ಯಾರೂ ಏನೂ ಮಾಡೇ ಇಲ್ಲ ಅನ್ನುವಂತೆ ಆ ರೀತಿ ಪದ ಬಳಸುತ್ತೀರಿ. ಆ ಪದ ಬಳಸುವ ಅವಶ್ಯಕತೆ ಇದೆಯಾ… ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು.

ಶಾಲೆಗೆ ಕಳಿಸ್ತೀರಿ…
ಅರ್ಜಿ ಸಲ್ಲಿಸಲಿಕ್ಕೆಂದು ಬಂದಿದ್ದ ಹರಿಹರ ತಾಲೂಕಿನ ಕೊಂಡಜ್ಜಿಯ ಅಲೆಮಾರಿ ಜನಾಂಗದ ಕೆಲ ಮಹಿಳೆಯರು ಮಕ್ಕಳನ್ನೂ ಕರೆದುಕೊಂಡು ಬಂದಿದ್ದನ್ನು ಕಂಡ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಅವರನ್ನ ಯಾಕೆ ಕರೆದುಕೊಂಡು ಬಂದೀದಿರಿ. ಅವರನ್ನ ಶಾಲೆಗೆ ಕಳಿಸ್ತೀರಿ….ಎಂದು ಪ್ರಶ್ನಿಸಿದರು. ಅಂಗನವಾಡಿ, ಶಾಲೆಗೆ ಕಳಿಸ್ತೀದಿವಿ. ಬರಿತೀವಿ ಅಂತ ಹಠ ಮಾಡುತ್ತಿದ್ದು ಕರ್ಕೊಂಡು ಬಂದೀವಿ… ಎಂದು ಮಹಿಳೆಯರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next