ಬೀದರ: ಬೆಂಬಲ ಬೆಲೆಯಲ್ಲಿ ತೊಗರಿ ಬೆಳೆ ಖರೀದಿಗಾಗಿ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಜಿಲ್ಲೆಯ ರೈತರು ಇದರ ಲಾಭ ಪಡೆದುಕೊಳ್ಳಲು ಅಧಿಕಾರಿಗಳು ಶ್ರಮಿಸಬೇಕು. ಇದು ರೈತರ ಸೇವೆ ಎಂದು ಭಾವಿಸಿ ನಾವೆಲ್ಲರೂ ಕೈಜೋಡಿಸಿ ಕೆಲಸ ಯಶಸ್ವಿಗೊಳಿಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಕರೆ ನೀಡಿದರು.
ಜಿಲ್ಲಾಡಳಿತ, ರಾಜ್ಯ ಕೃಷಿ ಮಾರಾಟ ಮಂಡಳಿ, ಡಿಸಿಸಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳಿ ಆಶ್ರಯದಲ್ಲಿ ನಗರದ ರೂಡ್‌ಸೆಟ್ ಸಂಸ್ಥೆಯಲ್ಲಿ ತೊಗರಿ ಖರೀದಿ ಕೇಂದ್ರಗಳನ್ನಾಗಿ ಗುರುತಿಸಿದ ಜಿಲ್ಲೆಯ 78 ಪಿಕೆಪಿಎಸ್‌ಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಮತ್ತು ಆಯ್ದ ರೈತರ ಕೃಷಿ ಉತ್ಪನ್ನ ಸಂಸ್ಥೆ ಮುಖ್ಯಸ್ಥರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ತೊಗರಿ ಬೆಳೆ ಇಳುವರಿ ಚೆನ್ನಾಗಿ ಬಂದಿದೆ.
ಅದರಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ರೈತರು ಬೆಳೆದ ತೊಗರಿ ಬೆಳೆಗೆ ಉತ್ತಮ ದರ ಸಿಗಲಿ ಎನ್ನುವ ಹಿನ್ನೆಲೆಯಿಂದ ಬೆಂಬಲ ಬೆಲೆ ನಿಗದಿ ಮಾಡಿವೆ. ರೈತರು ದೇಶದ ಅನ್ನದಾತರು ಮತ್ತು ಬೆನ್ನೆಲುಬು ಎಂದು ಕೇವಲ ಬಾಯಿ ಮಾತನಿಂದ ಮಾತಾಡುತ್ತೇವೆ. ಆದರೆ, ಇದನ್ನು
ನಿಜಗೊಳಿಸಲು ಇದೊಂದು ಒಳ್ಳೆಯ ಅವಕಾಶ. ಸರ್ಕಾರ ನಿಗದಿ ಮಾಡಿರುವ ಬೆಂಬಲ ಬೆಲೆ ಯೋಜನೆಯಡಿ ರೈತರ ಬೆಳೆಯನ್ನು ಖರೀದಿಸಿ ಅವರ ಆರ್ಥಿಕ ಬೆನ್ನಲುಬಿಗೆ ಎಲ್ಲರೂ ಸೇರಿ ನೈತಿಕ ಬೆಂಬಲ ನೀಡಬೇಕಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಮಾರಾಟ ಮಂಡಳಿ ಮುಖ್ಯಸ್ಥ ಚಂದ್ರಕಾಂತ ಪಾಟೀಲ ಸರ್ಕಾರದ ಯೋಜನೆ ಮತ್ತು ತೊಗರಿ ಖರೀದಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ಹಕ್, ಸಹಕಾರ ಸಂಘಗಳ ಉಪ ನಿಬಂಧಕ ವಿಶ್ವನಾಥ ಮಲಕೊಡ, ಪಿಕೆಪಿಎಸ್ ಸಹಾಯಕ ನಿರ್ದೇಶಕ ತುಳಸಿರಾಮ ಲಾಬೆ, ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರಿ ಹತ್ತಿ, ಉಪ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯಸ್ವಾಮಿ, ಮಹಾಮಂಡಳ ಶಾಖೆ ವ್ಯವಸ್ಥಾಪಕ ಪ್ರಭಾಕರ ನಾಗಮಾರಪಳ್ಳಿ ಇದ್ದರು. ಡಿಸಿಸಿ ಬ್ಯಾಂಕ್ ಅಧಿಕಾರಿ ಬಸವರಾಜ ಕಲ್ಯಾಣ ಕಾರ್ಯಕ್ರಮ ನಿರೂಪಿಸಿದರು.