ಸಂತೆಮರಹಳ್ಳಿ: ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದ ಬಳಿ ಇರುವ ಬಿಳಿಗಿರಿ ರಂಗನಬೆಟ್ಟದ ತಪ್ಪಲಿನಲ್ಲಿರುವ ಈರಣ್ಣಯ್ಯನ ಕಟ್ಟೆ ಪೋಡಿನಲ್ಲಿ ಕಾಡಪ್ರಾಣಿಗಳ ಉಪಟಳ ಒಂದು ಕಡೆಯಾದರೆ. ಮತ್ತೂಂಡೆದೆ ಕುಡಿಯುವ ನೀರಿಗೆ ಜನರು ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ.
ಬುಡಕಟ್ಟು ಸೋಲಿಗ ಜನಾಂಗ ವಾಸ ಮಾಡುವ ಈ ಪೋಡಿನಲ್ಲಿ 20 ಕುಟುಂಬಳಿವೆ. ಅಲ್ಲದೆ ಇದರ ಬಳಿಯಲ್ಲೇ ಜಮೀನುಗಳಿದ್ದು ಇಲ್ಲೂ ಕೂಡ ಅನೇಕ ಕುಟುಂಬಗಳು ವಾಸವಾಗಿವೆ. ಇಲ್ಲಿಗೆ ವಿದ್ಯುತ್ ಸಂಪರ್ಕ ಇದ್ದರೂ ವಿದ್ಯುತ್ ಮಾತ್ರ ಇರುವುದಿಲ್ಲ. ಹಾಗಾಗಿ ಇರುವ ಒಂದೇ ಒಂದು ತೊಂಬೆಗೆ ಕೊಳವೆ ಬಾವಿಯಿಂದ ನೀರು ತುಂಬಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇಲ್ಲಿನ ನಾಗರಿಕರು ಸಮೀಪದ ಗೌಡಹಳ್ಳಿ ಡ್ಯಾಂನ ನೀರನ್ನೇ ಆಶ್ರಯಿಸುವ ಸ್ಥಿತಿ ಇದೆ.
ಕಾಡು ಪ್ರಾಣಿಗಳ ಕಾಟ: ಇದು ಕಾಡಿಗೆ ಅಂಟಿ ಕೊಂಡಂತಿರುವ ಗ್ರಾಮವಾಗಿದ್ದು ಸಂಜೆಯಾದರೆ ಆನೆ, ಕರಡಿ, ಚಿರತೆ, ಹುಲಿಗಳು ಇಲ್ಲೇ ಸಂಚರಿಸುತ್ತವೆ. ವಿದ್ಯುತ್ ಇಲ್ಲದ ಕಾರಣದಿಂದ ಇಡೀ ಪೋಡು ಕತ್ತಲಿನಲ್ಲಿ ಮುಳುಗುವುದರಿಂದ ರಾತ್ರಿ ಇಡೀ ಮನೆಯಿಂದ ಯಾರೂ ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಕುಟುಂಬಗಳು ತಮ್ಮ ಮನೆಗಳನ್ನೇ ಬಿಟ್ಟು ಬೆಟ್ಟದ ಪುರಾಣಿ ಪೋಡು, ಯರಕನಗದ್ದೆ ಪೋಡು, ಕಲ್ಯಾಣಿ ಪೋಡು ಸೇರಿ ದಂತೆ ಇತರೆ ಪೋಡುಗಳ ತಮ್ಮ ಸಂಬಂಧಿಕರ ಮನೆ ಯಲ್ಲಿ ವಾಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಇಲ್ಲಿನ ವಾಸಿ ಜಡೇಗೌಡ ಉದಯವಾಣಿಗೆ ತಿಳಿಸಿದರು.
ಜಮೀನುಗಳ ಫಸಲು ರಕ್ಷಣೆಯಾಗುತ್ತಿಲ್ಲ: ಇಲ್ಲಿ ವಾಸಿಸುವ ಕುಟುಂಬಗಳಲ್ಲಿ ಬಹುಪಾಲು ಜನರು ವ್ಯವಸಾಯವನ್ನೇ ಆಶ್ರಯಿಸಿದ್ದಾರೆ. ಆದರೆ ವಿದ್ಯುತ್ ಇಲ್ಲದೆ ಜಮೀನುಗಳಿಗೆ ನೀರುಣಿಸಲೂ ಸಾಧ್ಯವಾಗುತ್ತಿಲ್ಲ. ಈ ಬಾರಿ ಮಳೆಯೂ ಕೈಕೊಟ್ಟಿದೆ. ವಿಪರೀತ ಬಿಸಿಲ ಧಗೆಯಿಂದ ಫಸಲು ಒಣಗುತ್ತಿದೆ. ರಾತ್ರಿ ವೇಳೆ ಫಸಲು ರಕ್ಷಣೆಗೆ ವಿದ್ಯುತ್ ದೀಪ ಹಾಕಿ ಕಾಡು ಪ್ರಾಣಿಗಳ ಮೇಲೆ ಕಣ್ಣಿಡಲು ಸಾಧ್ಯವಾಗುತ್ತಿಲ್ಲ.
ಪ್ರಾಣಿಗಳು ಅರಣ್ಯ ಇಲಾಖೆಯ ಸೋಲಾರ್ ವಿದ್ಯುತ್ ಬೇಲಿ ಕಿತ್ತು ಬಂದಿದೆ. ಇದರಲ್ಲಿ ವಿದ್ಯುತ್ ಪ್ರವಹಿಸುವುದೇ ಇಲ್ಲ. ಇದನ್ನು ಕಾಡು ಪ್ರಾಣಿಗಳು ನಿರಾಯಸವಾಗಿ ದಾಟಿ ಈಚೆ ಬರುತ್ತವೆ. ಅರಣ್ಯ ಇಲಾಖೆ ಸಿಬ್ಬಂದಿ ಇದನ್ನು ಕಾಡಿಗಟ್ಟಲು ಯಾವುದೇ ಕ್ರಮ ವಹಿಸುವುದಿಲ್ಲ. ಇವರ ಬೇಜಬ್ದಾರಿಯಿಂದ ಇಡೀ ಬೆಳೆ ನಾಶವಾಗುತ್ತಿದೆ ಎಂದು ಪೋಡಿನ ವಾಸಿಗಳಾದ ರಂಗಸ್ವಾಮಿ, ಸೋಮೇಶ ದೂರಿದರು.