Advertisement

ಪಾಲಿಕೆ ಕಚೇರಿಯಲ್ಲೇ ಕಟ್ಟಿ ತೆರಿಗೆ 

12:00 PM Apr 26, 2017 | |

ಬೆಂಗಳೂರು: ತೆರಿಗೆ ಪಾವತಿ ವೇಳೆ ಉಂಟಾಗುವ ಗೊಂದಲಗಳ ನಿವಾರಣೆಗೆ ನಗರದ ಹತ್ತು ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗಳಲ್ಲಿ ಬ್ಯಾಂಕ್‌ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ಗುಣಶೇಖರ್‌ ತಿಳಿಸಿದರು. 

Advertisement

ಪ್ರಸ್ತುತ ಆಸ್ತಿದಾರರು ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಕಚೇರಿಗಳಲ್ಲಿ ತೆರಿಗೆ ಪಾವತಿಸುವ ವ್ಯವಸ್ಥೆ ಇಲ್ಲ. ಆನ್‌ಲೈನ್‌ ಅಥವಾ ಅಧಿಕಾರಿಗಳು ನೀಡುವ ಚಲನ್‌ಗಳನ್ನು ತೆಗೆದುಕೊಂಡು ಬ್ಯಾಂಕ್‌ಗಳಲ್ಲಿ ಪಾವತಿಸಬೇಕು. ತೆರಿಗೆ ಪಾವತಿದಾರರ ಅನುಕೂಲಕ್ಕಾಗಿ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗಳಲ್ಲಿ ಕೆನರಾ ಬ್ಯಾಂಕ್‌ ಸಿಬ್ಬಂದಿಯನ್ನು ನಿಯೋಜಿಸಲು ಉದ್ದೇಶಿಸಲಾಗಿದೆ.

ಈ ಸಂಬಂಧ ಬ್ಯಾಂಕ್‌ಗೆ ಮನವಿ ಮಾಡಲಾಗಿದ್ದು, ಬ್ಯಾಂಕ್‌ನಿಂದಲೂ ಸಹಮತ ವ್ಯಕ್ತವಾಗಿದೆ. ಇದರಿಂದ ಎಆರ್‌ಒಗಳು ನೀಡುವ ಚಲನ್‌ ಆಧರಿಸಿ ಸ್ಥಳದಲ್ಲಿಯೇ ತೆರಿಗೆ ಪಾವತಿಸಬಹುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಎಲ್ಲೆಲ್ಲಿ ಸಿಬ್ಬಂದಿ?: ದಾಸರಹಳ್ಳಿ ಜಂಟಿ ಆಯುಕ್ತರ ಕಚೇರಿ, ಬೊಮ್ಮನಹಳ್ಳಿ ಜಂಟಿ ಆಯುಕ್ತರ ಕಚೇರಿ, ಹೂಡಿ ಎಆರ್‌ಒ ಕಚೇರಿ, ಮಾರತ್‌ಹಳ್ಳಿ ಎಆರ್‌ಒ ಕಚೇರಿ, ರಾಜರಾಜೇಶ್ವರಿನಗರ ಜಂಟಿ ಆಯುಕ್ತರ ಕಚೇರಿ, ವೈಟ್‌ಫೀಲ್ಡ್‌ ಎಆರ್‌ಒ ಕಚೇರಿ, ಮೆಯೋಹಾಲ್‌, ಯಲಹಂಕ ಜಂಟಿ ಆಯುಕ್ತರ ಕಚೇರಿ, ದಕ್ಷಿಣ ವಲಯ ಜಂಟಿ ಆಯುಕ್ತರ ಕಚೇರಿಗಳಲ್ಲಿ ಬ್ಯಾಂಕ್‌ ಸಿಬ್ಬಂದಿ ಇರುತ್ತಾರೆ ಎಂದು ಹೇಳಿದರು. 

ಇದಲ್ಲದೆ, ಆನ್‌ಲೈನ್‌ ಮೂಲಕ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳಿರುವುದು ಗಮನಕ್ಕೆ ಬಂದಿದೆ. ಈ ಗೊಂದಲ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ನಿವೃತ್ತ ಸೇನಾ ಸಿಬ್ಬಂದಿಗೆ ಪ್ರತ್ಯೇಕ ಚಲನ್‌, ವಲಯ ವರ್ಗೀಕರಣ ಸರಿಯಾಗಿ ತೋರಿಸದೆ ಇರುವುದು, ಕಳೆದ ವರ್ಷ ಹೆಚ್ಚಿನ ಮೊತ್ತ ಪಾವತಿಸಿದವರಿಗೆ ಈ ಬಾರಿ ಮರುಪಾವತಿಸುವ ಕುರಿತ ಕ್ರಮಗಳು ಸೇರಿ ವ್ಯವಸ್ಥೆಯಲ್ಲಿ ಸುಮಾರು 20 ಲೋಪಗಳನ್ನು ಗುರುತಿಸಲಾಗಿದೆ. ಅವುಗಳನ್ನು ಹಂತ-ಹಂತವಾಗಿ ಪರಿಹರಿಸಲಾಗುತ್ತಿದ್ದು, ಹದಿನೈದು ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳು ಬಗೆಹರಿಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

Advertisement

ತಿಂಗಳಲ್ಲಿ 250 ಕೋಟಿ ಸಂಗ್ರಹ: ಆರ್ಥಿಕ ವರ್ಷದ ಮೊದಲ ತಿಂಗಳಲ್ಲಿ ಅಂದರೆ ಏಪ್ರಿಲ್‌ನಲ್ಲಿ 250 ಕೋಟಿ ರೂ. ತೆರಿಗೆ ರೂಪದಲ್ಲಿ ವಸೂಲಿ ಮಾಡಲಾಗಿದೆ. ಅದರಲ್ಲಿ ಚಲನ್‌ ಮೂಲಕ 150.27 ಕೋಟಿ ರೂ. ಹಾಗೂ 99.89 ಕೋಟಿ ರೂ. ಆನ್‌ಲೈನ್‌ ಮೂಲಕ ತೆರಿಗೆ ಪಾವತಿಯಾಗಿದೆ. ಇದಲ್ಲದೆ, ಇನ್ನೂ ನೂರಾರು ಆಸ್ತಿ ಮಾಲಿಕರು ಚಲನ್‌ ಪಡೆದಿದ್ದು, ಹೀಗೆ ಚಲನ್‌ ಪಡೆದವರ ಆಸ್ತಿ ಮೊತ್ತ 195 ಕೋಟಿ ರೂ.ಗಿಂತ ಅಧಿಕವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ತೆರಿಗೆ ಪಾವತಿಯಾಗಲಿದೆ ಎಂದು ತಿಳಿಸಿದರು.

ತೆರಿಗೆ ವಂಚನೆ ಪತ್ತೆಗೆ ಟೋಟಲ್‌ ಸ್ಟೇಷನ್‌ ಸರ್ವೇ ನಡೆಸಲಿದ್ದು, ಈಗಾಗಲೆ ಟೆಂಡರ್‌ ಕರೆಯಲಾಗಿದೆ. ಎರಡು ತಿಂಗಳಲ್ಲಿ ಸರ್ವೇ ಕಾರ್ಯ ಪೂರ್ಣಗೊಳ್ಳಲಿದೆ. ಅದರಿಂದ ಯಾವ ಕಟ್ಟಡಗಳು ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿ ಅಡಿ ಮೋಸ ಮಾಡಿವೆ ಎಂಬುದು ಗೊತ್ತಾಗಲಿದೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಜಾಹೀರಾತಿನಿಂದ ಬರುವ ಆದಾಯ ಹೆಚ್ಚಿಸಲು ನೂತನ ಜಾಹೀರಾತು ಬೈಲಾ ಇನ್ನೆರಡು ತಿಂಗಳಲ್ಲಿ ಜಾರಿಗೆ ಬರಲಿದೆ ಎಂದು ಹೇಳಿದರು.

ರಿಯಾಯ್ತಿ ಅವಧಿ ವಿಸ್ತರಣೆ?
ಏ. 30ರೊಳಗೆ ತೆರಿಗೆ ಪಾವತಿಸುವವರಿಗೆ ಶೇ. 5 ರಿಯಾಯಿತಿ ನೀಡಲಾಗಿದೆ. ಈ ಸೌಲಭ್ಯವನ್ನು ಮೇ ಅಂತ್ಯದವರೆ ವಿಸ್ತರಿಸಲು ಚಿಂತನೆ ನಡೆದಿದೆ ಎಂದು ಗುಣಶೇಖರ್‌ ತಿಳಿಸಿದರು. ಕೌನ್ಸಿಲ್‌ ಸಭೆಯಲ್ಲಿ ಈ ವಿಷಯವನ್ನು ಮಂಡಿಸಿ ಅನುಮೋದನೆ ಪಡೆಯಲಾಗುವುದು. ನಂತರ ಸೌಲಭ್ಯ ವಿಸ್ತರಣೆ ನಿರ್ಧಾರ ಕೈಗೊಳ್ಳಲಾಗುವುದು. ಇದರಿಂದ ತೆರಿಗೆ ಪಾವತಿದಾರರಿಗೆ ಉತ್ತೇಜನ ಸಿಗಲಿದೆ ಎಂದರು.

ತಿಂಗಳಲ್ಲಿ ಮಾರುಕಟ್ಟೆ ಬೈಲಾ
ಮಾರುಕಟ್ಟೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ನೂತನ ಮಾರುಕಟ್ಟೆ ಬೈಲಾ ರೂಪಿಸಲಾಗುತ್ತಿದ್ದು, ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಗುಣಶೇಖರ್‌ ತಿಳಿಸಿದ್ದಾರೆ. 
ನೂತನ ಮಾರುಕಟ್ಟೆ ಬೈಲಾ ಸಿದ್ಧಗೊಂಡ ನಂತರ ಅದನ್ನು ಕೌನ್ಸಿಲ್‌ ಸಭೆಯಲ್ಲಿ ಮಂಡಿಸಲಾಗುವುದು. ಆಮೇಲೆ ಸರ್ಕಾರಕ್ಕೆ ಕಳುಹಿಸಲಾಗುವುದು. ಪ್ರಸ್ತುತ ಮುನ್ಸಿಪಲ್‌ ಕಾಯ್ದೆ 1949ರ ಬೈಲಾ ಚಾಲ್ತಿಯಲ್ಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next