ಶಹಾಪುರ: ಮನುಷ್ಯನಿಗೆ ಅಹಂಕಾರ ಬರಬಾರದು. ಒಂದಿಷ್ಟು ಅಧಿಕಾರ, ಶ್ರೀಮಂತಿಕೆ ಬಂದರೆ ಮನುಷ್ಯನ ನಡೆದುಕೊಳ್ಳುವದೇ ಬೇರಾಗುತ್ತದೆ. ಅದಾಗಬಾರದು. ಮೊದಲು ಎಲ್ಲಿಂದ ಬಂದೆ, ಹೇಗಿದ್ದೆ, ಹೇಗಾದೆ ಎಂಬ ಅರಿವು ಇರಬೇಕೆಂದು ಪ್ರವಚನಕಾರ ಅಜೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಬಸವೇಶ್ವರ ಬಡಾವಣೆ (ತಹಸೀಲ್ ಏರಿಯಾ) ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದ 40ನೇ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಅಂಗವಾಗಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನು ಎಂಬುದನ್ನು ತೊರೆದರೆ ಪ್ರಪಂಚ ನಿಮ್ಮನ್ನು ಹಿಂಬಾಲಿಸಲಿದೆ. ಭಕ್ತಿ ಮಾರ್ಗ ಅನುಸರಿಸಬೇಕು. ಸದ್ವಿಚಾರ, ಸದ್ವಿನಯ, ಸದಾಚಾರ ಸಂಸ್ಕಾರದ ಬದುಕು ಕಟ್ಟಿಕೊಂಡು ನಡೆದಲ್ಲಿ ಜೀವನ ಪಾವನವಾಗಲಿದೆ. ಮನುಷ್ಯ ಎಷ್ಟೇ ಆಸ್ತಿ, ಅಂತಸ್ತು ಗಳಿಸಿದರೂ ಕೊನೆಗೆ ಬೇಕಾಗಿರುವುದು ಆರಡಿ, ಮೂರಡಿ ಜಾಗ ಮಾತ್ರ. ಇದನ್ನು ಅರ್ಥೈಸಿಕೊಂಡು ನಡೆಯಬೇಕು ಎಂದರು.
ಶರೀರದಲ್ಲಿ ಆತ್ಮ ಇರುವತನಕ ಮಾತ್ರ ಬೆಲೆ. ಶರೀರದಿಂದ ಆತ್ಮ ಬೇರ್ಪಟ್ಟಾಗ ಅದಕ್ಕೆ ಅಡಿಕೆಯಷ್ಟು ಕಿಮ್ಮತ್ತು ಕಟ್ಟುವದಿಲ್ಲ. ಬಸ್ಸೊಂದರಲ್ಲಿ ಪ್ರಯಾಣ ಮಾಡುವಾಗ ಆಗತಾನೇ ಪರಿಚಯ ಮಾಡಿಕೊಂಡವರು ತಮ್ಮೂರು ಬಂದ ಕೂಡಲೇ ನಾನು ಹೋಗಿ ಬರುವೆ ಎಂದು ಹೇಳುತ್ತಾರೆ. ಆದರೆ, ಜನ್ಮದೊಂದಿಗೆ ಶರೀರದಲ್ಲಿ ಸೇರಿಕೊಂಡ ಆತ್ಮ ತಾನೂ ಬಿಟ್ಟು ಹೋಗುವಾಗ ಒಂದ್ ಮಾತು ಹೇಳಿ ಹೋಗುವದಿಲ್ಲ. ಇದು ಚಿಂತನೆ ಮಾಡುವ ವಿಷಯ ಎಂದರು.
ಸಾನ್ನಿಧ್ಯ ವಹಿಸಿದ್ದ ಕುಂಬಾರಗೇರಿ ಹಿರೇಮಠದ ಸೂಗೂರೇಶ್ವರ ಶಿವಾಚಾರ್ಯರು, ಗುಂಬಳಾಪುರಮಠದ ಸಿದ್ಧೇಶ್ವರ ಶಿವಾಚಾರ್ಯರು, ದೋರನಹಳ್ಳಿ ಚಿಕ್ಕಮಠದ ಶಿವಲಿಂಗರಾಜೇಂದ್ರ ಶಿವಾಚಾರ್ಯರು ಆಶೀವರ್ಚನ ನೀಡಿದರು.
ಲೋಕಾಪುರದ ಶ್ರೀಗಳು ಮತ್ತು ಶ್ರೀಮಠದ ವಿಶ್ವರಾಧ್ಯ ದೇವರು ಉಪಸ್ಥಿತರಿದ್ದರು. ಕೊಳಲು ವಾದಕ ಚಂದ್ರು ಗೋಗಿ, ತಬಲಾ ವಾದಕ ಮಹಾಂತೇಶ, ಹಾಡುಗಾರ ರಾಜಕುಮಾರ ತಂಡ ಸಂಗೀತದ ಮೂಲಕ ಸಾಥ್ ನೀಡಿದರು. ವಕೀಲ, ಪತ್ರಕರ್ತ ಮಲ್ಲಿಕಾರ್ಜುನ ಮುದನೂರ ಅವರಿಗೆ ಶ್ರೀಮಠದಿಂದ ಗುರು ರಕ್ಷೆ ನೀಡಿ ಸನ್ಮಾನಿಸಲಾಯಿತು.