ಕೆ.ಆರ್.ಪುರ: ಪ್ರಸ್ತುತ ಸಂದರ್ಭದಲ್ಲಿ ಮಕ್ಕಳಿಗೆ ಪ್ರೀತಿ, ಸಹಬಾಳ್ವೆ ರೀತಿಯ ಮೌಲ್ಯಗಳನ್ನು ಕಲಿಸಿಕೊಡುವ ಅಗತ್ಯವಿದೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಸಲಹೆ ನೀಡಿದರು.
ಇಲ್ಲಿನ ಅಮರ ಜ್ಯೋತಿ ಇಂಗ್ಲೀಷ್ ಶಾಲೆಯ 34ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಇತ್ತೀಚಿಗೆ ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಯುವಕನೊಬ್ಬ ಆಸ್ತಿ, ಹಣದಾಸೆಗೆ ತನ್ನ ಅಜ್ಜ, ಅಜ್ಜಿಯನ್ನೇ ಕೊಂದಿದ್ದಾನೆ.
ಹಣದಾಸೆ ಬಂದಾಗ ಸಂಬಂಧಿಕರೆಂದೂ ನೋಡದೆ ಕೊಲ್ಲಲು ಮುಂದಾಗುವ ಇಂದಿನ ಯುವ ಪೀಳಿಗೆಯ ಮನಸ್ಥಿತಿ ನೋಡಿದರೆ ಆತಂಕವಾಗುತ್ತದೆ. ಇಂಥ ಪ್ರವೃತ್ತಿ, ದುರ್ನಡತೆಗೆ ಬಾಲ್ಯದಲ್ಲೇ ಕಡಿವಾಣ ಹಾಕುವ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.
ಈ ನಿಟ್ಟಿನಲ್ಲಿ ಪೋಷಕರು ಮಕ್ಕಳ ಜತೆ ಹೆಚ್ಚು ಸಮಯ ಕಳೆಯಬೇಕು. ಅವರು ತಪ್ಪು ಮಾಡಿದಾಗ ಆ ಕ್ಷಣವೇ ತಿದ್ದುವ ಕೆಲಸ ಮಾಡಬೇಕು. ಸಂಬಂಧಗಳ ಬೆಲೆ ತಿಳಿಸುಕೊಡುವ ಜತೆಗೆ ಜೀವನ ಮೌಲ್ಯಗಳನ್ನು ಅವರಲ್ಲಿ ಬೆಳೆಸಬೇಕು. ಒಂದೊಮ್ಮೆ ಪೋಷಕರು ತಮ್ಮ ಮಕ್ಕಳ ತಪ್ಪನ್ನು ಸಮರ್ಥಿಸಿಕೊಂಡರೆ, ಅದೇ ಮಕ್ಕಳು ಮುಂದೆ ಅವರಿಗೇ ವೈರಿಗಳಾಗುತ್ತಾರೆ ಎಂದು ಎಚ್ಚರಿಸಿದರು.
ಶಾಸಕ ಬಿ.ಎ.ಬಸವರಾಜ್ ಮಾತನಾಡಿದರು. ಇದೆ ವೇಳೆ ಶಾಲೆಯ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ಮತ್ತು ಪರೀಕ್ಷೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಾಲಿಕೆ ಸದಸ್ಯ ಶ್ರೀಕಾಂತ್, ಕಾರ್ಯದರ್ಶಿ ಮೋಹನ್, ಪ್ರಿನ್ಸಿಪಾಲ್ ಸಾಯಿ ಕುಮಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.