Advertisement

Ivan D’Souza”ನೀಟ್‌’ನಿಂದ ರಾಜ್ಯ ಹೊರಗೆ ಬರಲು ನಿಲುವಳಿ ಸೂಚನೆ

01:10 AM Jun 30, 2024 | Team Udayavani |

ಮಂಗಳೂರು: “ನೀಟ್‌’ ಪರೀಕ್ಷೆಯಿಂದ ರಾಜ್ಯ ಕೂಡ ಹೊರಬರಬೇಕು. ಇದಕ್ಕಾಗಿ ಮುಂದಿನ ರಾಜ್ಯವಿಧಾನ ಮಂಡಲದ ಅಧಿವೇಶನದಲ್ಲಿ ನಿಲುವಳಿ ಸೂಚನೆ ಮಂಡಿಸುತ್ತೇನೆ ಎಂದು ವಿಧಾನಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ತಿಳಿಸಿದ್ದಾರೆ.

Advertisement

ನೀಟ್‌ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಲು, ಅಕ್ರಮ ಎಸಗಿದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಸಂಪೂರ್ಣ ವಿಫ‌ಲವಾಗಿದೆ. ಹಾಗಾಗಿ ಕೇಂದ್ರ ಸರಕಾರದ ಮೇಲೆ ನಂಬಿಕೆ ಇಲ್ಲವಾಗಿದೆ. ರಾಜ್ಯದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ತಮಿಳುನಾಡು ಮಾದರಿಯಲ್ಲೇ ಕರ್ನಾಟಕ ಕೂಡ ನೀಟ್‌ ಪರೀಕ್ಷೆಯ ಬದಲು ತನ್ನದೇ ಸಿಇಟಿ ಪರೀಕ್ಷೆಯ ವ್ಯವಸ್ಥೆ ಮಾಡಿಕೊಳ್ಳಬೇಕು ಹಾಗೂ ಮೆರಿಟ್‌ ಆಧಾರದಲ್ಲಿ ಸೀಟು ನೀಡಬೇಕು. ಹಿಂದೆ ಅಂತಹ ವ್ಯವಸ್ಥೆ ಇತ್ತು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೂಡ ಒತ್ತಾಯಿಸುತ್ತೇನೆ ಎಂದು ಐವನ್‌ ಡಿ’ಸೋಜಾ ಮಂಗಳೂರಿನಲ್ಲಿ ಶನಿವಾರದಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಸರಕಾರ ವಿದ್ಯಾರ್ಥಿಗಳ ಭವಿಷ್ಯದ ಜತೆ ಆಟವಾಡುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ಅಸಹಾಯಕತೆ ವ್ಯಕ್ತಪಡಿಸುತ್ತಿದೆ. ಸದನದಲ್ಲಿ ಈ ಬಗ್ಗೆ ಚರ್ಚೆಗೂ ಅವಕಾಶ ನೀಡುತ್ತಿಲ್ಲ. ಪ್ರಧಾನಮಂತ್ರಿಯವರು ಈ ಬಗ್ಗೆ ಹೇಳಿಕೆಯನ್ನೂ ನೀಡಿಲ್ಲ. ಸಂಯುಕ್ತ ವ್ಯವಸ್ಥೆಯಲ್ಲಿ ಶಿಕ್ಷಣದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ರಾಜ್ಯ ಸರಕಾರಕ್ಕೂ ಇದೆ. ಹಾಗಾಗಿ ರಾಜ್ಯ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ ಎಂದು ಐವನ್‌ ಡಿ’ಸೋಜಾ ಹೇಳಿದರು.

ಪ್ರಾಕೃತಿಕ ವಿಕೋಪ: ಮುಂಜಾಗ್ರತೆಗೆ ಕ್ರಮ
ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳ ಲಾಗುತ್ತಿದೆ. ಜಿಲ್ಲೆ, ತಾಲೂಕು ಮಟ್ಟದಲ್ಲಿ ಇದಕ್ಕೆ ಅಗತ್ಯವಾದ ಹಣಕಾಸಿನ ವ್ಯವಸ್ಥೆಯೂ ಇದೆ. ಗ್ರಾಮ ಮಟ್ಟದಲ್ಲೂ ವಿಪತ್ತು ನಿರ್ವಹಣ ತಂಡಗಳನ್ನು ರಚಿಸಲು ಸೂಚನೆ ನೀಡಲಾಗಿದೆ. ಅಪಾಯದಲ್ಲಿರುವ ಮನೆಗಳನ್ನು ಗುರುತಿಸಿ ಸ್ಥಳಾಂತರಕ್ಕೂ ವ್ಯವಸ್ಥೆ ಮಾಡಲಾಗಿದೆ.

ವಿದ್ಯುತ್‌ ತಂತಿ ಸ್ಪರ್ಶಿಸಿ ಉಂಟಾದ ಅವಘಡಗಳ ಹಿನ್ನೆಲೆಯಲ್ಲಿ ಮೆಸ್ಕಾಂ ನಿರ್ಲಕ್ಷ್ಯದ ಬಗ್ಗೆ ಜಿಲ್ಲಾಧಿಕಾರಿಯವರಿಂದ ವಿವರಣೆ ಕೇಳಲಾಗಿದೆ ಎಂದು ಐವನ್‌ ಡಿ’ಸೋಜಾ ತಿಳಿಸಿದರು.

Advertisement

ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ವಿಕಾಸ್‌ ಶೆಟ್ಟಿ, ಮಾಜಿ ಕಾರ್ಪೊರೇಟರ್‌ ಭಾಸ್ಕರ್‌ ರಾವ್‌, ಅಲ್ವಿಸ್ಟರ್‌ ಡಿ’ ಕುನ್ಹಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next