ಬೆಂಗಳೂರು: “ರಾಜ್ಯ ಆಡಳಿತದ ಶಕ್ತಿಸೌಧದ ಪಕ್ಕದಲ್ಲೇ ಇರುವ ಬಹುಮಹಡಿ ಕಟ್ಟಡದಲ್ಲಿ ಕೂಡ ಜಾತೀಯತೆ ತಾಂಡವಾಡುತ್ತದೆ,’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಬೇಸರ ವ್ಯಕ್ತಪಡಿಸಿದರು.
ನಗರದ ಪುರಭವನದಲ್ಲಿ ಸೋಮವಾರ ಜಯ ಕರ್ನಾಟಕ ಸಂಘಟನೆ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯ ಕಡತ ಟೇಬಲ್ ಮುಂದೆ ಬಂದರೆ, ಸಂಬಂಧಪಟ್ಟ ಅಧಿಕಾರಿ ಆ ಕಡತವನ್ನು ಸ್ವಲ್ಪ ದೂರ ತಳ್ಳುತ್ತಾರೆ,’ ಎಂದು ಹೇಳಿದರು.
“ನಮ್ಮಲ್ಲಿ ಬೇರೂರಿರುವ ಜಾತಿ ಬಗ್ಗೆ ತಿಳಿಯಲು ದೂರದ ಹಳ್ಳಿಗೆ ಹೋಗಬೇಡಿ, ಬೆಂಗಳೂರಿನಲ್ಲೇ ಇರುವ ಬಹುಮಹಡಿ ಕಟ್ಟಡಕ್ಕೆ ಹೋಗಿ ನೋಡಿ. ಟೇಬಲ್ ಮುಂದೆ ಬಂದ ಕಡತ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯದ್ದು ಎಂದು ಗೊತ್ತಾದರೆ, ಆ ಕಡತವನ್ನು ತುಸು ದೂರ ಸರಿಸುತ್ತಾರೆ. ನಗರದಲ್ಲಿ ದಲಿತರಿಗೆ ಮನೆ ಬಾಡಿಗೆಗೆ ಕೊಡಲು ಹಿಂದೇಟು ಹಾಕುತ್ತಾರೆ. ತುಮಕೂರಿನಂತಹ ತಾಲೂಕಿಗೆ ಹೋದರೆ ದೇವಸ್ಥಾನಗಳೇ ದಲಿತರಿಂದ ದೂರ ಹೋಗುತ್ತವೆ,’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದ್ರೆ ದಲಿತ: “ಅಷ್ಟೇ ಯಾಕೆ, ಡಾ.ಪರಮೇಶ್ವರ ಒಬ್ಬ ಸಜ್ಜನ ರಾಜಕಾರಣಿ. ಆದರೆ, ದಲಿತರಾಗಿ ಹುಟ್ಟಬಾರದಾಗಿತ್ತು ಎನ್ನುತ್ತಾರೆ. ನಾನೇನೂ ದಲಿತನಾಗಿ ಹುಟ್ಟಬೇಕು ಎಂದು ಅರ್ಜಿ ಹಾಕಿರಲಿಲ್ಲ. ಆಕಸ್ಮಿಕವಾಗಿ ದಲಿತನಾಗಿ ಹುಟ್ಟಿದ್ದೇನೆ. ಮೆರಿಟ್ ಲೆಕ್ಕಕ್ಕಿಲ್ಲವಾ? ಜಾತಿ ಮಾತ್ರವೇ ಲೆಕ್ಕಕ್ಕೆ ಬರುವುದೇಕೆ?’ ಎಂದು ಪ್ರಶ್ನಿಸಿದರು.
“ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸಾಕಷ್ಟು ಸವಲತ್ತುಗಳನ್ನು ನೀಡಬಹುದು. ದಲಿತರ ಏಳಿಗೆಗೆ ಕಾನೂನುಗಳನ್ನೂ ಬದಲಾಯಿಸಬಹುದು. ಆದರೆ, ದಲಿತರ ಬಗ್ಗೆ ಜನರ ಮನಃಸ್ಥಿತಿ ಮಾತ್ರ ಬದಲಾಗಿಲ್ಲ. ಸಮಾಜದಲ್ಲಿ ಈ ಬದಲಾವಣೆ ಕೂಗು ಹಿಂದೂ ಧರ್ಮದ ವಕಾಲತ್ತು ವಹಿಸುವ ಧರ್ಮಗುರುಗಳಿಂದ ಆರಂಭವಾಗಬೇಕಾಗಿದೆ,’ ಎಂದು ಪರಮೇಶ್ವರ್ ಸೂಚ್ಯವಾಗಿ ಹೇಳಿದರು.
“ಪ್ರತಿಯೊಂದನ್ನೂ ಜಾತಿಯಿಂದ ನೋಡುವ ನಮ್ಮ ಸಮಾಜ ರೋಗಗ್ರಸ್ತ ಸಮಾಜವಾಗಿದೆ. ಈ ಸಮಾಜಕ್ಕೆ ಮೂರು ಸಾವಿರಕ್ಕೂ ಹೆಚ್ಚು ಜಾತಿ ಮತ್ತು ಉಪಜಾತಿಗಳಿವೆ. ಈ ರೋಗ ಹೋಗಲಾಡಿಸಲು ಡಾ.ಅಂಬೇಡ್ಕರ್ ಚಿಕಿತ್ಸಕರಾಗಿ ಬಂದರು. ಸಂವಿಧಾನ ರಚನೆ ಮೂಲಕ ಪ್ರಜೆಯನ್ನು ಪ್ರಭುವನ್ನಾಗಿ ಮಾಡಿದರು.
ಒಬ್ಬ ವ್ಯಕ್ತಿಗೆ ಒಂದು ವೋಟು ನೀಡುವ ಮೂಲಕ ಪ್ರತಿಯೊಬ್ಬರ ಮನೆ ಬಾಗಿಲಿಗೆ ರಾಜಕಾರಣಿಗಳು ಬರುವಂತೆ ಮಾಡಿದರು,’ ಎಂದರು. ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಎಚ್.ಎನ್. ದೀಪಕ್, ಸೌಮ್ಯ ರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಮತ್ತಿತರರು ಉಪಸ್ಥಿತರಿದ್ದರು.