ಬೆಂಗಳೂರು: ತ್ಯಾಜ್ಯ ವಿಲೇವಾರಿ, ಸಂಸ್ಕರಣೆ ಹಾಗೂ ನಗರದ ಸ್ವಚ್ಛತೆಗೆ ಕೈಗೊಂಡ ಕ್ರಮಗಳಿಂದಾಗಿ ಬಿಬಿಎಂಪಿ ಕೇಂದ್ರ ಸರ್ಕಾರದ ಪ್ರಶಂಸೆಗೆ ಪಾತ್ರವಾದರೂ, ಪ್ರತಿ ವರ್ಷದ ಸ್ವಚ್ಛಸರ್ವೇಕ್ಷನ್ ಅಭಿಯಾನದಲ್ಲಿ ಬೆಂಗಳೂರಿಗೆ ಉತ್ತಮ ಸ್ಥಾನ ದೊರೆಯುತ್ತಿಲ್ಲ. ಹೀಗಾಗಿ ಮುಂದಿನ ವರ್ಷದಿಂದ ಅಭಿಯಾನದಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಿದೆ.
ಪಾಲಿಕೆಯಲ್ಲಿ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣೆಗೆ ಕೈಗೊಂಡ ಪರಿಣಾಮಕಾರಿ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರವೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಜತೆಗೆ ಅಂದಿನ ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಬೆಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿಗೆ ಅನುಸರಿಸುತ್ತಿರುವ ಕ್ರಮಗಳನ್ನು ದೇಶದ ಇತರೆ ಸ್ಥಳೀಯ ಸಂಸ್ಥೆಗಳು ಅನುಸರಿಸುವಂತೆ ಪತ್ರ ಬರೆದಿದ್ದರು.
ಇದರೊಂದಿಗೆ ತ್ಯಾಜ್ಯ ವಿಂಗಡಣೆಯಲ್ಲಿ ಶೇ.50ರಷ್ಟು ಸಾಧನೆ ತೋರಿದ ದೇಶದ ಮೊದಲ ನಗರ ಎಂಬ ಹೆಗ್ಗಳಿಕೆಗೂ ಬೆಂಗಳೂರು ಪಾತ್ರವಾಗಿತ್ತು. ಇದರೊಂದಿಗೆ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವಿಕೆ, ತ್ಯಾಜ್ಯ ಘಟಕಗಳ ನಿರ್ವಹಣೆ ಹಾಗೂ ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಘಟಕಗಳ ನಿರ್ಮಾಣ ಹೀಗೆ ಹಲವು ಪರಿಣಾಮಕಾರಿಗಳನ್ನು ಪಾಲಿಕೆ ಕೈಗೊಂಡಿದೆ. ಇವೆಲ್ಲ ಸಾಧನೆ, ಪ್ರಶಂಸೆ, ಮಾದರಿ ಕ್ರಮಗಳ ಹೊರತಾಗ್ಯೂ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಬೆಂಗಳೂರಿಗೆ ಸೂಕ್ತ ಸ್ಥಾನ ಮಾನ ದೊರೆತಿಲ್ಲ.
ಇತ್ತೀಚೆಗೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ಘೋಷಿಸಿರುವ ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಮೊದಲ ಹಂತದ 52 ಪ್ರಶಸ್ತಿಗಳಲ್ಲಿ ಬೆಂಗಳೂರಿಗೆ ಯಾವುದೇ ಸ್ಥಾನ ಸಿಕ್ಕಿಲ್ಲ. ಪಾಲಿಕೆಗೆ ಉತ್ತಮ ಸ್ಥಾನ ದೊರೆಯದಿರಲು ಕಾರಣವೇನು ಎಂಬುದನ್ನು ಸಹ ಲಾಖೆ ತಿಳಿಸಿಲ್ಲ. ಪಾಲಿಕೆ ಅಧಿಕಾರಿಗಳು ಪ್ರತಿ ವರ್ಷ ತ್ಯುತ್ತಮ ಹಾಗೂ ಮಾದರಿ ಕಾರ್ಯಕ್ರಮಗಳನ್ನು ರೂಪಿಸಿದರೂ ಪಾಲಿಕೆಗೆ ಕಳಪೆ ಸ್ಥಾನ ದೊರೆಯುತ್ತಿದೆ. ಹೀಗಾಗಿ ಅಭಿಯಾನದಿಂದಲೇ ದೂರ ಉಳಿಯಲು ಪಾಲಿಕೆ ನಿರ್ಧರಿಸಿದೆ ಎನ್ನಲಾಗಿದೆ.
ಭಾವಚಿತ್ರ ಬಳಸದ್ದಕ್ಕೆ ಹಿನ್ನಡೆ?: ಶಿಷ್ಟಾಚಾರದಂತೆ ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಪ್ರಚಾರ ಜಾಹೀರಾತುಗಳಲ್ಲಿ ಪ್ರಧಾನಮಂತ್ರಿಗಳು ಹಾಗೂ ಅಭಿಯಾನದ ರಾಯಭಾರಿಗಳ ಭಾವಚಿತ್ರ ಬಳಸಬೇಕು. ಆದರೆ, ಅಭಿಯಾನದ ಎಲ್ಲ ಜಾಹೀರಾತುಗಳಿಗೆ ರಾಜ್ಯ ಸರ್ಕಾರ ಅನುದಾನ ನೀಡಿದ್ದರಿಂದ ಜಾಹಿರಾತುಗಳಲ್ಲಿ ಮುಖ್ಯಮಂತ್ರಿಗಳ ಭಾವಚಿತ್ರ ಬಳಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಉತ್ತಮ ಸ್ಥಾನ ಸಿಕ್ಕಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಅಭಿಯಾನದಿಂದ ದೂರ: ಕೇಂದ್ರದಿಂದ ಆಯೋಜಿಸುತ್ತಿರುವ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಪ್ರತಿ ಬಾರಿ ಬೆಂಗಳೂರಿಗೆ ಕಳಪೆ ಸ್ಥಾನ ದೊರೆಯುವುದು ಅನುಮಾನಗಳಿಗೆ ಕಾರಣವಾಗಿದ್ದು, ಮುಂದಿನ ವರ್ಷದಿಂದ ಅಭಿಯಾನದಲ್ಲಿ ಭಾಗವಹಿಸದಿರುವ ಕುರಿತು ಪಾಲಿಕೆ ಹಾಗೂ ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗುತ್ತಿದೆ. ಜತೆಗೆ ಸರ್ವೇಕ್ಷನ್‌ಗೆ ಪರ್ಯಾಯವಾಗಿ ರಾಜ್ಯಮಟ್ಟದಲ್ಲಿಯೇ ಅಭಿಯಾನ ನಡೆಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.