ಹುನಗುಂದ: ಸಂಸ್ಕೃತಿ ಮತ್ತು ಸಂಸ್ಕಾರ ಮಾಯವಾಗಿ ಸದ್ಯ ಜಾತಿ ಪ್ರಭಾವ ಹೆಚ್ಚಾಗಿದೆ. ಈ ಜಾತಿಯಿಂದಲೇ ದೇಶ ವಿನಾಶವಾಗುವ ಲಕ್ಷಣಗಳು ಕಂಡು ಬರುತ್ತಿವೆ ಎಂದು ಸಿದ್ಧನಕೊಳ್ಳದ ಧರ್ಮಾಧಿ ಕಾರಿ ಡಾ| ಶಿವಕುಮಾರ ಸ್ವಾಮೀಜಿ ಹೇಳಿದರು. ಪಟ್ಟಣದ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಪಿಗ್ಮಿ ಸಂಗ್ರಹಕಾರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಭಯೋತ್ಪಾದನೆಗಿಂತಲೂ ಭೀಕರವಾಗಿ ಜಾತಿ ಬೆಳೆಯುತ್ತಿದೆ.ಅದರ ಜತೆಗೆ ಮೂಢನಂಬಿಕೆ ಪ್ರಭಾವ ಬೀರುತ್ತಿದೆ.
ಜಾತಿ ಮತ್ತು ಮೂಢನಂಬಿಕೆಗಳಿಂದ ದೂರವಾಗಿ ಶ್ರದ್ಧೆ ಮತ್ತು ಶ್ರಮ ವಹಿಸಿ ಕಾಯಕದಲ್ಲಿ ತೊಡಗಿಕೊಳ್ಳಿ ಎಂದರು. ಹಣ ಸಂಗ್ರಹ ಮಾಡಿ ಆರ್ಥಿಕವಾಗಿ ಅಭದ್ರತೆಯಲ್ಲಿ ಇರುವ ಜನರಿಗೆ ಸಾಲವನ್ನು ನೀಡಿ ಅವರ ಬದುಕನ್ನು ಹಸನಗೊಳಿಸುವ ಕಾರ್ಯ ಮಾತ್ರ ಸಾಧ್ಯ. ಸಂಘದಲ್ಲಿ ಒಗ್ಗಟ್ಟು ಬೆಳೆಸಿಕೊಂಡು ಮುನ್ನೆಡೆಯಬೇಕು.
ಕಟ್ಟಿಕೊಂಡ ಸಂಘ ಮುಂದಿನ ದಿನಗಳಲ್ಲಿ ಬೃಹದಾಕಾರದಲ್ಲಿ ಬೆಳೆದು ಸಾಕಷ್ಟು ನೊಂದ ಜನರಿಗೆ ಆಶ್ರಯವಾಗಲಿ ಎಂದು ಶುಭ ಹಾರೈಸಿದರು. ಮಹಾಂತಯ್ಯ ಗಚ್ಚಿನಮಠ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯನ ಜೀವನದಲ್ಲಿ ಅಧಿಕಾರ ಮತ್ತು ಅಂತಸ್ತು ಶಾಶ್ವತವಲ್ಲ.ಜನ ಸೇವೆ ಬಹಳ ಮುಖ್ಯ.
ಆರ್ಥಿಕ ಅಭದ್ರತೆಯಲ್ಲಿರುವರನ್ನು ರಕ್ಷಣೆ ಮಾಡುತ್ತಿರುವ ಪಿಗ್ಮಿ ಸಂಗ್ರಹಕಾರರು ನಿಜವಾದ ಜನ ಸೇವಕರಾಗಿದ್ದಾರೆ. ಹುಟ್ಟು ಸಾವಿನ ಮಧ್ಯೆ ಉತ್ತಮ ಕಾರ್ಯ ಮುಖ್ಯ ಎಂದರು. ವಿ.ಮ ಬ್ಯಾಂಕ್‌ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಅಂಜನೇಯ್ಯ ನಿಂಬಲಗುಂದಿ, ಪಿಕೆಪಿಎಸ್ ನಿವೃತ್ತ ವ್ಯವಸ್ಥಾಪಕ ಕೂಡ್ಲೆಪ್ಪ ಅಗಸಿಬಾಗಿಲ ಉಪನ್ಯಾಸ ನೀಡಿದರು. ಸಂಘ ಅಧ್ಯಕ್ಷ ಬಸವರಾಜ ಕೆಸರಭಾವಿ ಅಧ್ಯಕ್ಷತೆ ವಹಿಸಿದ್ದರು.
ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ವಿನೋದ ಗಂಜೀಹಾಳ, ಸುರೇಶ ಹಳಪೇಟಿ, ಮಲ್ಲಿಕಾರ್ಜುನ ಹೂಗಾರ, ದೇವು ಡಂಬಳ, ರಾಮನಗೌಡ ಬೆಳ್ಳಿಹಾಳ, ಅಶೋಕ ಹಂದ್ರಾಳ, ಶರಣು ಹಳಪೇಟಿ ಇದ್ದರು. ಮಹಾಂತೇಶ ಬಾದವಾಡಗಿ ನಿರೂಪಿಸಿದರು.