ಮಾಗಡಿ: ಮಹಾತ್ಮ ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ನನಸಾಗಬೇಕಾದರೆ ಪ್ರತಿಯೊಬ್ಬರು ಮದ್ಯಪಾನದಿಂದ ದೂರ ಉಳಿಯಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶಶಿಕಲಾ ಸುವರ್ಣ ತಿಳಿಸಿದರು.
ಪಟ್ಟಣದ ಹೊಸಪೇಟೆ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ನವಜೀವನ ಸಮಿತಿ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಪ್ರಯುಕ್ತ ಹಮ್ಮಿಕೊಂಡ ಗಾಂಧಿ ಸ್ಮತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅವರ ಆಶಯದಂತೆ ಮದ್ಯ ಮುಕ್ತ ಸಮಾಜ ನಿರ್ಮಿಸಲು ಈಗಾಗಲೇ ಹಲವು ಜನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅದರಂತೆ ಪೂಜ್ಯರ ಕನಸು ನನಸು ಮಾಡಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ಮಾರಣ್ಣ ಮಾತನಾಡಿ, ಪರಕೀಯರ ದಾಸ್ಯದಲ್ಲಿ ನೊಂದ ಭಾರತೀಯರ ಸ್ವಾತಂತ್ರ್ಯಕ್ಕಾಗಿ ಅಹಿಂಸೆಯ ಮೂಲಕ ಹೋರಾಡಿದ ಗಾಂಧೀಜಿ ಅವರ ಆದರ್ಶಗಳನ್ನು ಪಾಲಿಸೋಣ ಎಂದರು.
ತಿರುಮಲೆ ಕನ್ನಡ ಕೂಟದ ಸಂಚಾಲಕ ಟಿ.ಎಂ.ಶ್ರೀನಿವಾಸ್ ಮಾತನಾಡಿ, ಸತ್ಯಾಗ್ರಹ, ವಿದೇಶಿ ವಸ್ತುಗಳ ಬಹಿಷ್ಕಾರ, ಗ್ರಾಮೀಣ ಸ್ವಾವಲಂಬನೆ, ಅಸ್ಪ್ರಶ್ಯತೆ ನಿವಾರಣೆ,ಮದ್ಯಪಾನ ನಿಷೇಧದ ಮೂಲಕ ಸಮಾಜ ವನ್ನು ಎಚ್ಚರಿಸಿದ ಗಾಂಧೀ ಅವರ ತತ್ವಗಳನ್ನು ಅನುಸರಿಸೋಣ ಎಂದು ಹೇಳಿದರು. ನವ ಕರ್ನಾಟದ ಅಧ್ಯಕ್ಷೆ ಗೋದಾವರಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಮೇಲ್ವಿಚಾರಕರಾದ ಮನೋಜ್, ಸಿದ್ದಯ್ಯ, ನವ ಜೀವನ ಸಮಿತಿಯ ಯೋಗೇಶ್, ನಾಗವೇಣಿ ಮಾತನಾಡಿದರು. ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು ಹಾಗೂ ನವ ಜೀವನ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.