Advertisement
ಮಂಗಳವಾರ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆ ಬಳಿಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್ ರಾಜ್ಯ ಸರಕಾರದ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಒಮಿಕ್ರಾನ್ ಹೆಚ್ಚಾಗಿ ಹರಡುತ್ತಿರುವ ನಿರ್ದಿಷ್ಟ ದೇಶಗಳಿಂದ ಬರುವ ಪ್ರಯಾಣಿಕರಿಗೆ ಕೆಲವು ನಿರ್ಬಂಧ ಹೇರುವಂತೆ ಮುಖ್ಯಮಂತ್ರಿಗಳು ಪ್ರಧಾನಿಗೆ ಪತ್ರ ಬರೆಯಲಿದ್ದಾರೆ. ವೈರಾಣು ಹರಡುವಿಕೆಯನ್ನು ಆರಂಭಿಕ ಹಂತದಲ್ಲೇ ತಡೆಯಲು ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ.
ಪ್ರತೀ ದಿನ ವಿದೇಶಗಳಿಂದ ಸುಮಾರು 2,500 ಪ್ರಯಾಣಿಕರು ರಾಜ್ಯಕ್ಕೆ ಬರುತ್ತಾರೆ. ನೆಗೆಟಿವ್ ಇದ್ದವರಿಗೆ ಏಳು ದಿನಗಳ ಕಾಲ ಮನೆ ಕ್ವಾರಂಟೈನ್ ಮಾಡಲಾಗುತ್ತದೆ. ರೋಗ ಲಕ್ಷಣವಿದ್ದರೂ ನೆಗೆಟಿವ್ ಆದವರಿಗೆ 5ನೇ ದಿನ ಮತ್ತೆ ಮನೆಯಲ್ಲೇ ಪರೀಕ್ಷೆ ಮಾಡಲಾಗುತ್ತದೆ. ಲಕ್ಷಣ ರಹಿತರಿಗೆ 7ನೇ ದಿನ ಪರೀಕ್ಷೆ ಮಾಡಲಾಗುತ್ತದೆ. ಪಾಸಿಟಿವ್ ಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಆದರೆ ಇಂಥವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುವುದು ಎಂದರು.
Related Articles
Advertisement
ಚಿಕಿತ್ಸೆಗೆ ಮಾರ್ಗಸೂಚಿಓಮಿಕ್ರಾನ್ ಸೋಂಕು ಉಂಟಾದರೆ ಯಾವ ರೀತಿ ಎದುರಿಸಬೇಕು, ಹೇಗೆ ನಿಯಂತ್ರಿಸಬೇಕು, ಸಿದ್ಧತೆಗಳು ಹೇಗಿದೆ ಎಂದು ಚರ್ಚಿಸಲಾಗಿದೆ. ಕ್ವಾರಂಟೈನ್ ಆ್ಯಪ್, ಟೆಲಿ ಮೆಡಿಸಿನ್ ಮೊದಲಾದ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಚರ್ಚೆಯಾಗಿದೆ. ಜತೆಗೆ ಚಿಕಿತ್ಸೆಗೆ ಪ್ರತ್ಯೇಕ ಮಾರ್ಗಸೂಚಿ ರೂಪಿಸಲು ತಜ್ಞರ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಚಿಕಿತ್ಸೆ ಸಂಬಂಧಿ ನಿಯಮ ರೂಪಿಸಲಿದೆ ಎಂದರು. ಲಾಕ್‌ಡೌನ್ ಇಲ್ಲ
ಸದ್ಯಕ್ಕೆ ಲಾಕ್‌ಡೌನ್ ಪ್ರಶ್ನೆಯೇ ಇಲ್ಲ. ಯಾವುದೇ ಊಹಾಪೋಹಗಳಿಗೆ ಜನ ಕಿವಿಗೊಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ಸ್ಪಷ್ಟಪಡಿಸಿದ್ದಾರೆ. ಹೆಚ್ಚು ಜನ ಸೇರುವಲ್ಲಿ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಂಘ-ಸಂಸ್ಥೆಗಳು ಕಾರ್ಯಕ್ರಮಗಳಲ್ಲಿ ನಿಯಮಗಳನ್ನು ಪಾಲಿಸಬೇಕು ಎಂದು ಬೆಂಗಳೂರಿನಲ್ಲಿ ಸಿಎಂ ಪುನರುಚ್ಚರಿಸಿದರು. ಒಮಿಕ್ರಾನ್ ಕುರಿತು ನಿಗಾ ಇರಿಸಲಾಗಿದೆ. ಈಗಿರುವ ಡೆಲ್ಟಾ ತಳಿಯಿಂದ ಅಲ್ಲಲ್ಲಿ ಕ್ಲಸ್ಟರ್ ಆಗಿವೆ. ಎರಡು ಹಂತಗಳಲ್ಲಿ ಇದನ್ನು ನಿಭಾಯಿಸುವ ಕೆಲಸವನ್ನು ಸರಕಾರ ಮಾಡುತ್ತಿದ್ದು, ವೈಜ್ಞಾನಿಕವಾಗಿ ಕ್ರಮಗಳನ್ನು ಕೈಗೊಂಡಿದೆ. ಹೆಚ್ಚಿನ ತನಿಖೆಗೆ ಎನ್‌ಸಿಬಿಎಸ್‌ಗೂ ಮಾದರಿಗಳನ್ನು ಕಳುಹಿಸಲಾಗಿದೆ. ವಿದೇಶಗಳಿಂದ ಬಂದಿರುವ ಪ್ರಯಾಣಿಕರ ಬಗ್ಗೆ ವಿಶೇಷ ನಿಗಾ ಇರಿಸಿದ್ದು, ಸಂಪರ್ಕಿತರ ಪತ್ತೆ ಹಾಗೂ ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಎಂದರು. ಲಸಿಕೆ ಪಡೆಯದಿದ್ದರೆ ಸರಕಾರಿ ಸೌಲಭ್ಯವಿಲ್ಲ
ಎರಡು ಡೋಸ್ ಲಸಿಕೆ ಪಡೆಯದೆ ಇರುವವರಿಗೆ ಸರಕಾರಿ ಸವಲತ್ತು ಕಡಿತ ಮಾಡಿ ಎಂದು ತಾಂತ್ರಿಕ ಸಮಿತಿಯ ಸದಸ್ಯರು ಸಲಹೆ ನೀಡಿದ್ದಾರೆ. ಸೋಂಕಿನ ಮೂರನೇ ಅಲೆ ಮತ್ತು ಒಮಿಕ್ರಾನ್ ರೂಪಾಂತರಿ ತಡೆಯಲು ಕೊರೊನಾ ತಾಂತ್ರಿಕ ಸಮಿತಿ ಇನ್ನೂ ಹಲವು ಶಿಫಾರಸುಗಳನ್ನು ಮಾಡಿದೆ. ಪ್ರಮುಖ ಸಲಹೆಗಳು – ಪಡಿತರ, ಗ್ಯಾಸ್, ನೀರು, ಪೆಟ್ರೋಲ್, ಡೀಸೆಲ್, ಸಂಬಳ, ಪಿಂಚಣಿಗೆ 2 ಡೋಸ್ ಲಸಿಕೆ ಕಡ್ಡಾಯ. -ಮೆಟ್ರೋ ರೈಲು, ಸಾರ್ವಜನಿಕ ಸಾರಿಗೆಗಳಲ್ಲಿ ಸಂಚಾರಕ್ಕೆ, ಹೊಟೇಲ್ ,ಮಾಲ್ , ಶಾಂಪಿಂಗ್‌ಗೆ ತೆರಳುವುದಕ್ಕೆ 2 ಡೋಸ್ ಕಡ್ಡಾಯ. – ವಾರಕ್ಕೆ ಕನಿಷ್ಠ ಶೇ. 5 ಮಕ್ಕಳಿಗೆ ರ್‍ಯಾಂಡಮ್ ಕೊರೊನಾ ಪರೀಕ್ಷೆ. -ನಿರಂತರವಾಗಿ ಶಿಕ್ಷಕರು ಮತ್ತು ಮಕ್ಕಳಿಗೆ ರ್‍ಯಾಂಡಮ್ ಸೋಂಕು ಪತ್ತೆ ಪರೀಕ್ಷೆ ನಡೆಸಬೇಕು. – ಶಾಲೆ-ಕಾಲೇಜು ಮುಚ್ಚುವ ಅಗತ್ಯವಿಲ್ಲ; ತರಗತಿ ನಡೆಯಲಿ. ಸಮಿತಿಯ ಶಿಫಾರಸುಗಳು 01 ಜನಸಂದಣಿ ಇರುವ ಪ್ರದೇಶಗಳಲ್ಲಿ ಕಡ್ಡಾಯ ರ್‍ಯಾಂಡಮ್ ಟೆಸ್ಟಿಂಗ್. 02 ಶಾಲಾ-ಕಾಲೇಜು ಮುಚ್ಚುವ ಅಗತ್ಯ ಇಲ್ಲ. ಆಫ್ಲೈನ್, ಆನ್‌ಲೈನ್ ತರಗತಿ ನಡೆಸುವುದು ಸೂಕ್ತ. 03 ಜಾಲತಾಣ, ಮಾಧ್ಯಮಗಳಲ್ಲಿ ಸುಳ್ಳುಸುದ್ದಿ ಹರಡುವುದನ್ನು ತಪ್ಪಿಸಲು ಕ್ರಮ. 04 ಪಡಿತರ, ಗ್ಯಾಸ್, ನೀರು, ಪೆಟ್ರೋಲ್, ಡೀಸೆಲ್, ಸಂಬಳ, ಪಿಂಚಣಿ ಪಡೆದುಕೊಳ್ಳಲು 2 ಡೋಸ್ ಲಸಿಕೆ ಕಡ್ಡಾಯ ಮಾಡಬೇಕು. 05 ವಿದೇಶದಿಂದ ಬರುವ ಪ್ರಯಾಣಿಕರಿಗೆ 7 ದಿನ ಕಡ್ಡಾಯ ಕ್ವಾರಂಟೈನ್. 06 ಒಮಿಕ್ರಾನ್ ಸೋಂಕು ಹರಡಿರುವ ದೇಶಗಳಿಂದ ಬರುವ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್.