Advertisement

ಸ್ಟಟ್ವಾಡಿಯ ದಲಿತರಿಗೆ ಸಿಗದ ಮನೆ ನಿವೇಶನ: ಮತ್ತೆ ಪ್ರತಿಭಟನೆಗೆ ಸಜ್ಜು

07:10 AM Apr 27, 2018 | Team Udayavani |

ಬಸ್ರೂರು: ಕುಂದಾಪುರ ತಾಲೂಕು ಕಂದಾವರ ಗ್ರಾಮದ ಸಟ್ವಾಡಿಯಲ್ಲಿ ದಲಿತರು ಹಾಗೂ ಇತರರು ಸೇರಿ ಒಟ್ಟು 147  ಮಂದಿ ನಿವೇಶನ ರಹಿತರು ತಮಗೆ  ತಹಶೀಲ್ದಾರರು ಈ ಸ್ಥಳವನ್ನು ಮನೆ ನಿವೇಶನಕ್ಕಾಗಿ ನೀಡಿದ್ದಾರೆ ಎಂದು ಮೂರು ತಿಂಗಳ ಹಿಂದೆ ತಾತ್ಕಾಲಿಕ  ಟೆಂಟ್‌ ಹಾಕಿ ಬಿಡಾರ ಹೂಡಿದ್ದರು. ಆದರೆ ತಹಶೀಲ್ದಾರರು ದಲಿತರಿಗಾಗಿ ಮನೆ ನಿವೇಶನವನ್ನು ತಾನು ಮಂಜೂರು ಮಾಡಿಲ್ಲದ ಕಾರಣ ತತ್‌ಕ್ಷಣ ಜಾಗ ತೆರವು ಮಾಡಿ ಎಂದು ನೋಟೀಸ್‌ ಮಾಡಿದ್ದರು.

Advertisement

ಆದರೆ ಇದನ್ನು ಲೆಕ್ಕಿಸದೆ ನಿವೇಶನ ರಹಿತರನ್ನು ಕುಂದಾಪುರ ಗ್ರಾಮಾಂತರ ಪೋಲೀಸ್‌ ಠಾಣೆಯ ಸಿಬ್ಬಂದಿಯ ರಕ್ಷಣೆ  ಪಡೆದ ತಹಶೀಲ್ದಾರರು  ಜೆ.ಸಿ.ಬಿ.ಯಂತ್ರ ಬಳಸಿ ಬಲಾತ್ಕಾರವಾಗಿ ಕಳೆದ ಜ.10 ರಂದು  ಜಾಗ ತೆರವುಗೊಳಿಸಿದ್ದರು. ಪತ್ರಿಕೆ ಇವರನ್ನು ಮಾತನಾಡಿಸಿದಾಗ, ತಹಶೀಲ್ದಾರರು ಸಟ್ವಾಡಿ -ಸಾಂತಾವರದಲ್ಲಿ 4 ಎಕರೆ 65 ಸೆಂಟ್ಸ ಸ್ಥಳವನ್ನು ನಿವೇಶನ ರಹಿತರಾದ 147 ಮಂದಿಗೆ  ನಿವೇಶನಕ್ಕಾಗಿ ಜಾಗ  ಮಂಜೂರು ಮಾಡಿದ್ದು ಆ ಕಡತ ಈಗ ಕುಂದಾಪುರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿದೆ. ಅಲ್ಲಿಂದ  ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಅವರಿಂದ ಮಂಜೂ ರಾಗಬೇಕಿದೆ ,ಇಲ್ಲಿ ಸುಮಾರು 90 ಕ್ಕೂ ಹೆಚ್ಚು  ದಲಿತ ಕುಟುಂಬಗಳು ಅತಂತ್ರವಾಗಿವೆ ಎನ್ನುತ್ತಾರೆ.

ಈ ನಿವೇಶನ ರಹಿತರಲ್ಲಿ ನಾಲ್ಕು ಮಂದಿ ದಲಿತರು ನಾಲ್ಕು ದಿನಗಳ ಹಿಂದೆ  ಕುಂದಾಪುರ ಉಪವಿಭಾಗಾಧಿಕಾರಿಗಳನ್ನು ಖುದ್ದು ಭೇಟಿ ಮಾಡಿದ್ದು ಮನೆ  ನಿವೇಶನದ ಕುರಿತು ಮಾತನಾಡಿದ್ದಾರೆ. ಜತೆಗೆ ತಹಶೀಲ್ದಾರರೂ ಇದ್ದಾರೆ ಎನ್ನಲಾಗಿದೆ.ಆದಷ್ಟು ಶೀಘ್ರ ಸಟ್ವಾಡಿ-ಸಾಂತಾವರದ ದಲಿತ ಮತ್ತಿತರ ಕುಟುಂಬಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನೆ ನಿವೇಶನವನ್ನು ಮಂಜೂರು ಮಾಡ ಲಾಗುತ್ತದೆ. ಸದ್ಯ ನಿವೇಶನಕ್ಕಾಗಿ ನಿರಶನ ಹೂಡುವುದು ಬೇಡ ಎಂದರೆಂದು ಹೇಳಲಾಗಿದೆ.

ಅಧಿಕಾರ ಇಲ್ಲ
ಕಂದಾವರ ಗ್ರಾಮದ 147 ಮಂದಿ ನಿವೇಶನ ರಹಿತರ ಪರವಾಗಿ ತಹಶೀಲ್ದಾರರಿಗೆ ಮನವಿ ನೀಡಲಾಗಿದೆ. ಅಲ್ಲದೆ ಕುಂದಾಪುರ ಉಪವಿಭಾಗಾಧಿಕಾರಿಗಳನ್ನು ಖುದ್ದು ಭೇಟಿ ಮಾಡಿದ್ದು ವಿಷಯವನ್ನು ಹೇಳಲಾಗಿದೆ. ಉಪವಿಭಾಗಾಧಿಕಾರಿಗಳಿಂದ ನಿವೇಶನ ರಹಿರ ಮನವಿ ಜಿಲ್ಲಾಧಿಕಾರಿಗಳಿಗೆ  ಹೋಗಿ ಅವರಿಂದ ಮಂಜೂರಾದ ಮೇಲೆ ಮಾತ್ರ ಅವರಿಗೆ ನಿವೇಶನಕ್ಕೆ ಜಾಗ ಸಿಗಬಹುದು ಹೊರತು ಗ್ರಾ.ಪಂ.ವತಿಯಿಂದ ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡುವ ಅಧಿಕಾರ ಇರುವುದಿಲ್ಲ.
– ಧೀರಜ್‌, ಗ್ರಾಮ ಕರಣಿಕ,ಕಂದಾವರ ಗ್ರಾ.ಪಂ.

ಮತ್ತೆ ಧರಣಿ
ಮೇ 15ರ ವರೆಗೆ ಮನೆ ನಿವೇಶನಕ್ಕಾಗಿ ಕಾಯುತ್ತೇವೆ.ಆಗಲೂ ಮನೆ ನಿವೇಶನ ಸಿಗದಿದ್ದರೆ ಅದೇ ಸ್ಥಳದಲ್ಲಿ ಮತ್ತೆ ಟೆಂಟ್‌ ಹಾಕಿ ವಾಸಿಸುತ್ತೇವೆ.ಪ್ರಸ್ತುತ ನಾವು ಬೇರೆ ಭೂಮಾಲಿಕರ ಜಾಗದಲ್ಲಿದ್ದೇವೆ.ತಹಶೀಲ್ದಾರರಾಗಲೀ, ಉಪ ವಿಭಾಗಾಧಿಕಾರಿಗಳಾಗಲೀ ಒಂದು ಬಾರಿಯೂ ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ.
– ಕೃಷ್ಣ ಸಟ್ವಾಡಿ, 
ನಿವೇಶನ ರಹಿತ ದಲಿತ ಮುಖಂಡ

Advertisement
Advertisement

Udayavani is now on Telegram. Click here to join our channel and stay updated with the latest news.

Next