ಹುಬ್ಬಳ್ಳಿಯ ಉಣಕಲ್ಲ ಕೆರೆಯ ಮಧ್ಯಭಾಗದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ನೋಡುವುದೇ ಒಂದು ಪುಳಕ…
ಸುತ್ತಲೂ ನೀಲಿಸಾಗರ. ಆಳೆತ್ತರದ ಅಲೆಗಳು ಬಂಡೆಗಲ್ಲಿಗೆ ಬಡಿಯುವ ನಿರಂತರ ದೃಶ್ಯ. ಆ ಬಂಡೆಯ ಮೇಲಿನ ದಿವ್ಯಮಂದಿರದ ಒಳಗೆ, ವಿವೇಕಾನಂದರ ಧೀರೋದಾತ್ತ ಮೂರ್ತಿ ತನ್ನ ಧ್ಯಾನಾವಸ್ಥೆಯಿಂದಲೇ ರೋಮಾಂಚನ ಹುಟ್ಟಿಸುತ್ತದೆ… ಇದು ಕನ್ಯಾಕುಮಾರಿಯ ನೋಟ. ಹುಬ್ಬಳ್ಳಿಯಲ್ಲಿನ ವಿವೇಕಾನಂದರ ಮೂರ್ತಿ ಇರುವುದೂ, ನೀರಿನ ನಡುವೆಯೇ. ಇಲ್ಲಿ ಅಲೆಗಳಿಲ್ಲ. ಅಂಥ ದೊಡ್ಡ ಬಂಡೆಗಳೂ ಇಲ್ಲ. ಆದರೆ, ಪ್ರವಾಸಿಗರನ್ನು ಸೆಳೆಯುವಲ್ಲಿ ಈ ನರೇಂದ್ರನೂ ಹಿಂದೆ ಬಿದ್ದಿಲ್ಲ.
ಇಲ್ಲಿನ ಉಣಕಲ್ಲ ಕೆರೆಯ ಮಧ್ಯಭಾಗದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ನೋಡುವುದೇ ಒಂದು ಪುಳಕ. ಸುಮಾರು 213 ಎಕರೆ ವಿಸ್ತೀರ್ಣದಲ್ಲಿರುವ ಕೆರೆಯ ಮಧ್ಯ ಭಾಗದಲ್ಲಿ 16 ವರ್ಷಗಳ ಹಿಂದೆ ಪ್ರತಿಷ್ಠಾಪನೆಗೊಂಡಿರುವ ಸ್ವಾಮಿ ವಿವೇಕಾನಂದರ 14 ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರವಾಸಿಗರಿಗೆ ಆಕರ್ಷಣೀಯ ಸ್ಥಳ.
12ನೇ ಶತಮಾನದಲ್ಲಿ ಉಳವಿ ಚನ್ನಬಸವೇಶ್ವರರು ಪೂಜಿಸಿದ ಸ್ಥಳ ಉಣಕಲ್ಲ ಕೆರೆ. ಅದಾದ ನಂತರ ಸರ್ ಎಂ. ವಿಶ್ವೇಶ್ವರಯ್ಯನವರು ಹುಬ್ಬಳ್ಳಿ ಮಹಾನಗರಕ್ಕೆ ಕುಡಿವ ನೀರು ಸರಬರಾಜು ಮಾಡುವ ಯೋಜನೆಗೆ ಉಣಕಲ್ಲ ಕೆರೆಯನ್ನು ಆಯ್ಕೆ ಮಾಡಿ, ನೀಲನಕ್ಷೆ ತಯಾರಿಸಿದ್ದರು. ಆ ಬಳಿಕ ಹುಬ್ಬಳ್ಳಿಯ ಮನೆಗಳಿಗೆ, ಇಲ್ಲಿಂದಲೇ ಕುಡಿವ ನೀರು ಪೂರೈಕೆ ಆಯಿತು.
ಈ ಕೆರೆಗೆ ವಿವೇಕ ಕಳೆ ಬಂದಿದ್ದು, 2004ರಲ್ಲಿ. ಮುಂಬೈಯಿಂದ ತಂದ 14 ಅಡಿ ಎತ್ತರದ ಕಂಚಿನ ಮೂರ್ತಿ, ಉಣಕಲ್ಲ ಜಲರಾಶಿಯ ರೂಪವನ್ನೇ ಬದಲಿಸಿತು. ಪ್ರತಿವರ್ಷ ವಿವೇಕಾನಂದ ಜಯಂತಿ ಬಂದಾಗಲೆಲ್ಲ, ಇಲ್ಲಿ ವಿದ್ಯುತ್ ದೀಪಾಲಂಕಾರ, ಈ ಮೌನಮೂರ್ತಿಯನ್ನು ಬೆಳಗುತ್ತವೆ. ಧೀರಸನ್ಯಾಸಿಯನ್ನು ಹತ್ತಿರದಿಂದ ದರ್ಶಿಸಿ ಬರಲು, ಬೋಟಿಂಗ್ ವ್ಯವಸ್ಥೆಯೂ ಇಲ್ಲುಂಟು.
– ಬಸವರಾಜ ಹೂಗಾರ