Advertisement

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಜ್‌ಕುಮಾರ್‌ ಪ್ರತಿಮೆ

12:37 PM Apr 25, 2017 | Team Udayavani |

ಬೆಂಗಳೂರು: ದೆಹಲಿಯ ಕರ್ನಾಟಕ ಸಂಘ ಭವನದ ಆವರಣದಲ್ಲಿ ವರ್ಷದೊಳಗೆ ವರನಟ ಡಾ.ರಾಜ್‌ಕುಮಾರ್‌ ಅವರ ಪ್ರತಿಮೆ ಅನಾವರಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್‌ ತಿಳಿಸಿದರು. 

Advertisement

ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಡಾ.ರಾಜ್‌ಕುಮಾರ್‌ ಅವರ 89ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ದೆಹಲಿಯಲ್ಲಿ ನಿರ್ಮಿಸಲಾದ ಕರ್ನಾಟಕ ಸಂಘದ ಭವನವನ್ನು ಈ ಹಿಂದೆ ಸ್ವತಃ ಡಾ.ರಾಜ್‌ಕುಮಾರ್‌ ಉದ್ಘಾಟಿಸಿದ್ದರು.

ಈಗ ಅದೇ ಭವನದ ಆವರಣದಲ್ಲಿ ರಾಜ್‌ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು ಎಂದು ಹೇಳಿದರು. ರಾಜ್‌ ಪ್ರತಿಮೆ ಅನಾವರಣ ವಿಚಾರದಲ್ಲಿ ರಾಜ್ಯ ಸರ್ಕಾರ ಕೂಡ ಕೈಜೋಡಿಸಬೇಕು. ರಾಜ್‌ಕುಮಾರ್‌ ಅವರ ಮುಂದಿನ ಜನ್ಮದಿನಾಚರಣೆ ಒಳಗೆ ಈ ಪ್ರತಿಮೆ ಅನಾವರಣಗೊಳಿಸಲಾಗುವುದು ಎಂದು ತಿಳಿಸಿದರು.

“ಡಿಜಿಟಲ್‌ ರಾಜ್‌’: ಡಾ.ರಾಜ್‌ ಅವರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಅವ ರೆಲ್ಲ ಚಿತ್ರಗಳು, ಹಾಡುಗಳನ್ನು ವಿಶ್ಲೇಷಿಸಿ, ಬೇರೆ ಬೇರೆ ಭಾಷೆಗಳಿಗೆ ಭಾಷಾಂತರಿಸುವ ಮೂಲಕ ರಾಜ್‌ಕುಮಾರ್‌ ಅವರ ಬದುಕನ್ನು ಪಸರಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ “ಡಿಜಿಟಲ್‌ ರಾಜ್‌’ ಯೋಜನೆಯನ್ನು ಕೈಗೆತ್ತಿಕೊಳ್ಳುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. 

ಈಗಾಗಲೇ ರಾಜ್‌ಕುಮಾರ್‌ ಅವರ ಚಿತ್ರಗಳು ಮತ್ತು ಹಾಡುಗಳು ಡಿಜಿಟಲೀಕರಣಗೊಂಡಿರಬಹುದು. ಆದರೆ, ಅವು ಬರೀ ಡಾಟಾ ಬ್ಯಾಂಕ್‌ಗಳಾಗಿವೆ. ಇದರಿಂದ ಒಂದು ಹೆಜ್ಜೆ ಮುಂದೆಹೋಗಿ, ಅವರ ಚಿತ್ರಗಳನ್ನು ಡಿಜಿಟಲ್‌ ರೂಪದಲ್ಲಿ ವಿಶ್ಲೇಷಣೆ ಮಾಡಿ, ಹಾಡುಗಳ ಅರ್ಥಗಳನ್ನು ಭಾಷಾಂತರ ಮಾಡಬೇಕು. ಈ ಮೂಲಕ ದೇಶ-ವಿದೇಶಗಳಿಗೆ ಅವರನ್ನು ತಲುಪಿಸಬೇಕು ಎಂದು ಹೇಳಿದರು. 

Advertisement

ಕಲಾವಿದರೆಲ್ಲರೂ ಸೇರುವುದು ಕರ್ತವ್ಯ: ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್‌ ಬಾಬು ಮಾತನಾಡಿ, ಡಾ.ರಾಜ್‌ಕುಮಾರ್‌ ಸೇರಿದಂತೆ ಹಿರಿಯ ನಟರ ಶ್ರಮ-ತ್ಯಾಗದಿಂದ ಇಂದು ಕನ್ನಡ ಸಿನಿಮಾ ರಂಗ ಬೆಳೆದುನಿಂತಿದೆ. ಆದ್ದರಿಂದ ರಾಜ್‌ಕುಮಾರ್‌ ಅವರ ಜನ್ಮದಿನಾಚರಣೆಯಲ್ಲಿ ಸಿನಿಮಾ ರಂಗದ ಪ್ರತಿಯೊಬ್ಬ ನಟ-ನಟಿ, ತಂತ್ರಜ್ಞರೆಲ್ಲರೂ ಸೇರಿ ಆಚರಿಸಬೇಕು. ಇದು ಪ್ರತಿಯೊಬ್ಬರ ಕರ್ತವ್ಯ ಕೂಡ. ಸಾಧ್ಯವಾದರೆ ರಾಜ್‌ ಜನ್ಮದಿನಾಚರಣೆಯಂದು ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸಿನಿಮಾ ಚಿತ್ರೀಕರಣಕ್ಕೆ ರಜೆ ಘೋಷಿಸಬೇಕು ಎಂದು ಮನವಿ ಮಾಡಿದರು.

ನಿಜವಾದ ಕನ್ನಡ ಮೇಷ್ಟ್ರು
ಪ್ರಧಾನ ಭಾಷಣದಲ್ಲಿ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ, ಡಾ.ರಾಜ್‌ಕುಮಾರ್‌ ಸಿನಿಮಾ ರಂಗದ ನಿಜವಾದ ಕನ್ನಡ ಮೇಷ್ಟ್ರು. ಕನ್ನಡ ಮತ್ತು ಕುಟುಂಬ ಪ್ರಜ್ಞೆಯನ್ನು ಕಲಿಸಿಕೊಟ್ಟ ಅವರ ಜನ್ಮದಿನವನ್ನು ಚಿತ್ರರಂಗದ ಎಲ್ಲರೂ ಸೇರಿ ಆಚರಿಸಬೇಕು. ಅದು ರಾಜ್‌ಕುಮಾರ್‌ ಅವರಿಗೆ ನಾವು ಕೊಡುವ ಗೌರವ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next