ಶ್ರೀನಗರ: ಸದಾ ಗದ್ದಲ, ಗಲಭೆ, ಹಿಂಸೆಯಿಂದ ಸುದ್ದಿಯಾಗುವ ಕಾಶ್ಮೀರದಲ್ಲಿ ಗುರುವಾರದ ಬೆಳಗು ಅಪೂರ್ವವಾಗಿತ್ತು. ಇಲ್ಲಿನ ಶೂರ್ಯಾರ್ ಮಂದಿರವು ತನ್ನ ಆವರಣದಲ್ಲಿ ಶ್ರೀ ರಾಮಾನುಜಾಚಾರ್ಯರ ಮುದ್ದಾದ ಪ್ರತಿಮೆಯನ್ನು ಕಾಣುವ ಮೂಲಕ ತನ್ನ ಹಿರಿಮೆಗೆ ಇನ್ನೊಂದು ಗರಿಯನ್ನು ಸಿಕ್ಕಿಸಿ ಕೊಂಡಿತು. ಇದಕ್ಕೆ ಬೆಂಗಳೂರಿನ ಯದುಗಿರಿ ಯತಿರಾಜ ಮಠದ ಶ್ರೀ ಯದುಗಿರಿ ಯತಿರಾಜ ನಾರಾಯಣ ಜೀಯರ್, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮತ್ತು ಸಂಸದ ತೇಜಸ್ವಿ ಸೂರ್ಯ ಸಾಕ್ಷಿಯಾದರು.
ಅಮೃತ ಶಿಲೆಯಲ್ಲಿ ಅರಳಿರುವ ನಾಲ್ಕು ಅಡಿ ಎತ್ತರದ ರಾಮಾನುಜರ ಪ್ರತಿಮೆಯನ್ನು (ಶಾಂತಿ ಪ್ರತಿಮೆ) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವರ್ಚುಯಲ್ ಆಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ ಅವರು, ‘ವಿಶಿಷ್ಟಾದ್ವೈತ ತತ್ವದ ಜನಕರಾದ ರಾಮಾನುಜರು, ಸಮಾನತೆಯ ಸಮಾಜಕ್ಕೆ ತುಡಿದ ಯುಗಪ್ರವರ್ತಕರು’ ಎಂದರು. ರಾಮಾನುಜರು ಉದಾರ ಧರ್ಮದ ಆಚಾರ್ಯರಾಗಿದ್ದು, ತಾರತಮ್ಯದ ವಿರುದ್ಧ ದನಿ ಎತ್ತಿದರು. ಈ ಮೂಲಕ ಅವರು ದೀನರ ಬಾಳಿಗೆ ಬೆಳಕಾದರು ಎಂದು ಅವರು ಬಣ್ಣಿಸಿದರು.
ಸಾವಿರ ವರ್ಷ ಕಳೆದರೂ ಅವರ ವಿಚಾರಗಳು ಪ್ರಸ್ತುತವಾಗಿವೆ. ಇವು ಭಾರತೀಯ ಧರ್ಮ ಮತ್ತು ಸಂಸ್ಕೃತಿಗಳ ಉಳಿವಿಗೆ ಮೌಲಿಕ ಕೊಡುಗೆ ನೀಡಿವೆ. ಈ ಪ್ರತಿಮೆಯು ಭಾರತವನ್ನು ಮತ್ತಷ್ಟು ಗಟ್ಟಿಯಾಗಿ ಬೆಸೆದಯಲಿದೆ ಎಂದು ಶಾ ನುಡಿದರು.
ಸಚಿವ ಅಶ್ವತ್ಥನಾರಾಯಣ ಮಾತನಾಡಿ, ‘ಕರ್ನಾಟಕದಲ್ಲಿ 40 ವರ್ಷಗಳ ಕಾಲ ಇದ್ದ ರಾಮಾನುಜರು ತಮ್ಮ ಮೇರುಕೃತಿ ಶ್ರೀಭಾಷ್ಯದ ರಚನೆಗೆ ಮುನ್ನ ಹೆಚ್ಚಿನ ಅಧ್ಯಯನಕ್ಕೆ ಕಾಶ್ಮೀರಕ್ಕೆ ಬಂದಿದ್ದರು. ಅದಾದ ಬಳಿಕವೂ ಅವರು ಇಲ್ಲಿಗೆ ಭೇಟಿ ನೀಡಿದ್ದರು. ಅವರ ಪರಂಪರೆಯನ್ನು ಜೀಯರ್ ಅವರು ಮುಂದುವರಿಸಿದ್ದಾರೆ. ಇಲ್ಲಿನ ಶೂರ್ಯಾರ್ ಮಂದಿರದ ಜೀರ್ಣೋದ್ಧಾರ ಕಾರ್ಯವನ್ನು ಬೆಂಗಳೂರಿನ ಯದುಗಿರಿ ಯತಿರಾಜ ಮಠವು ಕೈಗೆತ್ತಿಕೊಂಡಿರುವುದು ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು.
ಸಮಾನತೆ, ಶಾಂತಿ, ಸಬಲೀಕರಣ ಇವುಗಳಿಗಾಗಿ ರಾಮಾನುಜರು ಹಂಬಲಿಸುತ್ತಿದ್ದರು. ಕಾಶ್ಮೀರ ಕಣಿವೆಯಲ್ಲಿ ಈ ಪ್ರತಿಮೆಯು ನೆಮ್ಮದಿ ತರಲಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಯದುಗಿರಿ ಯತಿರಾಜ ನಾರಾಯಣ ಜೀಯರ್ ಆಶೀರ್ವಚನ ನೀಡಿ, ರಾಮಾನುಜರ ವಿಚಾರಗಳ ಪ್ರಸ್ತುತತೆಯನ್ನು ತಿಳಿಸಿದರು.