ಬಾಗಲಕೋಟೆ: ನಗರದ ಬಿವಿವಿ ಸಂಘದ ಬಸವೇಶ್ವರ ವಿಜ್ಞಾನ ಕಾಲೇಜಿನಲ್ಲಿ 17 ಕಿಲೋ ವ್ಯಾಟ್ ಸಾಮರ್ಥ್ಯದ ಸೌರವಿದ್ಯುತ್ ಫಲಕಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಶಾಸಕ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ|ವೀರಣ್ಣ ಚರಂತಿಮಠ, ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಮೇಲ್ಮಾಳಿಗೆಯ ಮೇಲೆ ಸ್ಥಾಪಿಸಿದ 12 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಸೌರ ವಿದ್ಯುತ್‌ಶಕ್ತಿ ಉತ್ಪಾದನೆ ಕಾರ್ಯಕ್ಕೆ ಚಾಲನೆ ನೀಡಿದರು.
ಇದೇ ವೇಳೆ, 20ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನವೀಕೃತಗೊಂಡ ಗಣಕಯಂತ್ರ ಪ್ರಯೋಗಾಲಯ ಉದ್ಘಾಟಿಸಿದರು.
17ಕಿಲೋ ವ್ಯಾಟ್ ಸೌರಫಲಕ ವಿದ್ಯುತ್ ಘಟಕದಿಂದ ಭಾಗಶಃ ವಿದ್ಯುತ್ ಮಹಾವಿದ್ಯಾಲಯಕ್ಕೆ ಉಪಯೋಗವಾಗಲಿದ್ದು ಉಳಿದ ವಿದ್ಯುತ್ ಹೆಸ್ಕಾಂಗೆ ರವಾನಿಸಿ, ವಿದ್ಯುತ್ ಉತ್ಪಾದಿಸುವಲ್ಲಿ ಮಹಾವಿದ್ಯಾಲಯ ಸ್ವಾಯತ್ತತೆ ಸ್ಥಾಪಿಸಿದೆ ಎಂದು ತಿಳಿಸಿದರು. ಬಿ.ಸಿ.ಎ. ಮತ್ತು ಬಿ.ಎಸ್.ಸಿ.(ಸಿ.ಎಸ್) ವಿಭಾಗದ ನೂತನ ಪಠ್ಯಕ್ರಮಕ್ಕೆ ಅನುಗುಣವಾಗಿ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನವೀಕೃತ ಗಣಯಂತ್ರ ಪ್ರಯೋಗಾಲದ ಸದುಪಯೋಗವನ್ನು ಮಹಾವಿದ್ಯಾಲಯ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಾರೆ ಎಂದರು.
ಬಿವಿವಿ ಗೌರವ ಕಾರ್ಯದರ್ಶಿ ಮಹೇಶ ಎನ್.ಅಥಣಿ, ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ), ಆಡಳಿತಾಧಿಕಾರಿ ಪ್ರೊ|ಎನ್.ಜಿ.ಕರೂರ, ಉನ್ನತ ಶಿಕ್ಷಣವಿಭಾಗದ ಸಂಯೋಜನಾಧಿಕಾರಿ ಪ್ರೊ| ವ್ಹಿ.ಕೆ.ಮೊರಬದ, ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಎಸ್.ಆರ್.ಕಂದಗಲ್ಲ, ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರು, ಮಹಾವಿದ್ಯಾಲಯದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.