Advertisement

Statebank: ನಿಲ್ದಾಣ ಪ್ರವೇಶವೇ ಸವಾಲು

03:19 PM Aug 07, 2024 | Team Udayavani |

 

Advertisement

ಸ್ಟೇಟ್‌ಬ್ಯಾಂಕ್‌: ಸ್ಟೇಟ್‌ಬ್ಯಾಂಕ್‌ನ ಸರ್ವಿಸ್‌ ಬಸ್‌ ನಿಲ್ದಾಣದೊಳಗೆ ಪೊಲೀಸ್‌ ಆಯುಕ್ತರ ಕಚೇರಿ ಮುಂಭಾಗದಿಂದ ಬಸ್‌ಗಳು, ಪ್ರಯಾಣಿಕರು ಪ್ರವೇಶಿಸುವ ಪ್ರದೇಶ ದಿನದಿಂದ ದಿನಕ್ಕೆ ಅವ್ಯವಸ್ಥೆಯ ಆಗರವಾಗುತ್ತಿದೆ.

ನಿಲ್ದಾಣದೊಳಗೆ ಸ್ಥಳಾವಕಾಶದ ಕೊರತೆ ಯಿಂದಾಗಿ ಅನೇಕ ಬಸ್‌ಗಳು ಪ್ರವೇಶ ಸ್ಥಳದಲ್ಲಿಯೇ ನಿಲ್ಲುತ್ತಿವೆ. ಈ ರಸ್ತೆ ಮತ್ತು ನಿಲ್ದಾಣಕ್ಕೆ ಬಸ್‌ಗಳನ್ನು ಹೊರತುಪಡಿಸಿ ಇತರ ವಾಹನಗಳ ಪ್ರವೇಶ ನಿಷೇಧಿಸಿದ್ದರೂ ಆಟೋರಿಕ್ಷಾ, ದ್ವಿಚಕ್ರ ವಾಹನಗಳು ಸಂಚರಿ ಸುತ್ತಿವೆ. ಇನ್ನೊಂದೆಡೆ ಫ‌ುಟ್‌ಪಾತ್‌ನ ಮೇಲೆ ಮಣ್ಣು, ಕಲ್ಲು, ಮರಳು, ಹಳೆಯ ವಿದ್ಯುತ್‌ ಕಂಬಗಳ ರಾಶಿ ಇದೆ. ಇವೆಲ್ಲವುಗಳ ಪರಿಣಾಮವಾಗಿ ಬಸ್‌ ನಿಲ್ದಾಣದೊಳಗೆ ಪ್ರವೇಶಿಸುವ ಪ್ರಯಾಣಿಕರು ಹೈರಾಣಾಗುತ್ತಿದ್ದಾರೆ.

ಅಪಾಯಕಾರಿ ನಡಿಗೆ

ಕೆಲವು ಬಸ್‌ಗಳು ಪ್ರಯಾಣಿಕರನ್ನು ಬಸ್‌ ನಿಲ್ದಾಣದೊಳಗೆ ಕೊಂಡೊಯ್ಯುವುದಿಲ್ಲ. ನಿಲ್ದಾಣದೊಳಗೆ ಜಾಗವಿಲ್ಲವೆಂದು ರಸ್ತೆ ಯಲ್ಲೇ ಇಳಿಸಿ ಅಲ್ಲಿಯೇ ನಿಲ್ಲುತ್ತವೆ. ಪ್ರಯಾಣಿಕರು ಅಲ್ಲಿಂದ ನಿಲ್ದಾಣದೊಳಗೆ ನಡೆದುಕೊಂಡು ಹೋಗಬೇಕು. ಆದರೆ ಇಲ್ಲಿ ಸುರಕ್ಷಿತವಾಗಿ ನಡೆದು ಕೊಂಡು ಹೋಗುವುದೇ ದೊಡ್ಡ ಸವಾಲು. ಬಸ್‌ಗಳ ನಡುವೆ ಇಕ್ಕಟ್ಟಿನ ಜಾಗದಲ್ಲಿ ಹೋಗಬೇಕು. ಸಾಲು ಸಾಲು ಬಸ್‌ ಗಳು ವೇಗವಾಗಿ ಧಾವಿಸುತ್ತವೆ. ಯಾವ ಬಸ್‌, ವಾಹನ ಬಂದು ಢಿಕ್ಕಿ ಹೊಡೆಯುತ್ತದೋ ಎಂಬ ಜೀವಭಯ ಕಾಡುತ್ತದೆ. ಮಕ್ಕಳು, ಮಹಿಳೆಯರ ಪಾಡು ಹೇಳತೀರದು.

Advertisement

ರಸ್ತೆಯನ್ನೇ ಆಕ್ರಮಿಸಿಕೊಂಡ ಕೆಪಿಟಿಸಿಎಲ್‌

ಇಲ್ಲಿ ಕೆಪಿಟಿಸಿಎಲ್‌ನ ಕಟ್ಟಡವೊಂದು ನಿರ್ಮಾಣವಾಗುತ್ತಿದೆ. ಹಲವು ತಿಂಗಳುಗಳಿಂದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅದಕ್ಕಾಗಿ ರಸ್ತೆಯ ಅಂಚಿನಲ್ಲಿ ಇಡೀ ಫ‌ುಟ್‌ಪಾತ್‌ನ ಮೇಲೆ ಮಣ್ಣು, ಮರಳು, ಕಲ್ಲು ಇತ್ಯಾದಿ ಸಾಮಗ್ರಿಗಳನ್ನು ರಾಶಿ ಹಾಕಲಾಗಿದೆ. ಪಾದಚಾರಿಗಳು ರಸ್ತೆಯ ಮಧ್ಯೆ ವಾಹನಗಳ ನಡುವೆ ಸಿಲುಕಿಕೊಂಡು ಹೋಗುತ್ತಿದ್ದರೂ ಇಲ್ಲಿನ ಫ‌ುಟ್‌ಪಾತ್‌ನ ಮೇಲಿರುವ ನಿರ್ಮಾಣ ಸಾಮಗ್ರಿಗಳನ್ನು ತೆಗೆಯುವ ಗೋಜಿಗೆ ಗುತ್ತಿಗೆದಾರರು ಹೋಗಿಲ್ಲ. ಈಗ ಮಳೆ ಸುರಿಯುತ್ತಿರುವುದರಿಂದ ಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಇದೇ ಸ್ಥಳದ ಇನ್ನೊಂದು ಭಾಗದ ಫ‌ುಟ್‌ಪಾತ್‌ನ ಮೇಲೆ ಹಳೆಯ ವಿದ್ಯುತ್‌ ಕಂಬಗಳನ್ನು ರಾಶಿ ಹಾಕಲಾಗಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next