Advertisement

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

12:34 PM Mar 03, 2024 | Team Udayavani |

ಭಾರತೀಯರು ಸಾಮಾನ್ಯವಾಗಿ ವೈದ್ಯರು ಶಿಫಾರಸು ಮಾಡಿರುವ ಸ್ಟಾಟಿನ್‌ ಡೋಸನ್ನು ತಾಳಿಕೊಳ್ಳಬಲ್ಲರು ಮತ್ತು ಅಡ್ಡಪರಿಣಾಮಗಳನ್ನು ಅನುಭವಿಸುವುದಿಲ್ಲ. ಆದರೂ ಕಾಣಿಸಿಕೊಳ್ಳಬಲ್ಲ ಕೆಲವು ಅಪರೂಪದ ಆದರೆ ಸಂಭಾವ್ಯ ಅಡ್ಡ ಪರಿಣಾಮಗಳನ್ನು ಇಲ್ಲಿ ಚರ್ಚಿಸಲಾಗಿದೆ.

Advertisement

ಸ್ಟಾಟಿನ್‌ ಎಂಬುದು ದೇಹದಲ್ಲಿ ಕೊಲೆಸ್ಟರಾಲ್‌ ಕಡಿಮೆಗೊಳಿಸಲು ವೈದ್ಯರು ನೀಡುವ ಔಷಧ. ಇದು ದೇಹದಲ್ಲಿ ಕೊಲೆಸ್ಟರಾಲ್‌ ಉತ್ಪಾದನೆಯಾಗಲು ಅಗತ್ಯವಾದ ಅಂಶಕ್ಕೆ ತಡೆಯೊಡ್ಡುವ ಮೂಲಕ ಕೊಲೆಸ್ಟರಾಲ್‌ ಕಡಿಮೆಯಾಗುವಂತೆ ಮಾಡುತ್ತದೆ.

ಸ್ಟಾಟಿನ್‌ನ ಸಾಮಾನ್ಯ ಅಡ್ಡ ಪರಿಣಾಮಗಳು

ವಿವಿಧ ಸ್ಟಾಟಿನ್‌ಗಳು ವಿಭಿನ್ನ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತವೆ. ವಿವರಣೆ ರಹಿತವಾದ, ಸಕಾರಣವಿಲ್ಲದ ಯಾವುದೇ ನೋವು, ದಣಿವು ಕಂಡುಬಂದರೆ ವೈದ್ಯರ ಜತೆಗೆ ಸಮಾಲೋಚಿಸುವುದು ಉತ್ತಮ. ಸಾಮಾನ್ಯವಾಗಿ ದೈಹಿಕ ಶ್ರಮದಿಂದ ದಣಿವು, ನೋವು ಉಂಟಾಗಬಹುದು; ಈ ಕಾರಣವಿಲ್ಲದ ನೋವು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು. ಈ ಕೆಳಗೆ ಕೆಲವು ಸಾಮಾನ್ಯ ಅಡ್ಡ ಪರಿಣಾಮಗಳನ್ನು ನೀಡಲಾಗಿದೆ:

  1. ಯಕೃತ್ತಿಗೆ ಹಾನಿ
  2. ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಳ/ ಟೈಪ್‌ 2 ಮಧುಮೇಹ
  3. ಸ್ನಾಯು ನೋವು ಮತ್ತು ಹಾನಿ
  4. ಮಲಬದ್ಧತೆ, ಬೇಧಿ, ಅಜೀರ್ಣದಂತಹ ಕರುಳಿನ ತೊಂದರೆಗಳು
  5. ದೈಹಿಕ ದಣಿವು
  6. ಚರ್ಮ ಕೆಂಪಗಾಗುವುದು, ತುರಿಕೆಯುಳ್ಳ ಕೆಂಪನೆಯ ದದ್ದುಗಳಂತಹ ಚರ್ಮದ ತೊಂದರೆಗಳು
  7. ಲೈಂಗಿಕ ಸಮಸ್ಯೆಗಳು
  8. ತಲೆನೋವು

ಕೊಲೆಸ್ಟರಾಲ್‌ ಕಡಿಮೆಗೊಳಿಸುವ ಔಷಧವನ್ನು ಯಾರು ತೆಗೆದುಕೊಳ್ಳಬಾರದು?

Advertisement

ಗರ್ಭಿಣಿಯಾಗಿದ್ದರೆ, ಎದೆಹಾಲು ಉಣಿಸುತ್ತಿದ್ದರೆ, ಯಕೃತ್‌ ಕಾಯಿಲೆ ಇದ್ದರೆ, ಸ್ನಾಯು ಸಂಬಂಧಿ ತೊಂದರೆಗಳಿದ್ದರೆ ಮತ್ತು ಮಧುಮೇಹದ ಅಪಾಯ ಇದ್ದರೆ ಕೊಲೆಸ್ಟರಾಲ್‌ ಕಡಿಮೆಗೊಳಿಸುವ ಔಷಧವನ್ನು ತೆಗೆದುಕೊಳ್ಳಬಾರದು.

ಸ್ಟಾಟಿನ್‌ಗಳು ಯಕೃತ್ತಿಗೆ ಹಾನಿ ಉಂಟುಮಾಡುತ್ತವೆಯೇ?

ಇತ್ತೀಚೆಗಿನ ಅಧ್ಯಯನಗಳ ಪ್ರಕಾರ, ಸ್ಟಾಟಿನ್‌ ಸೇವನೆಯಿಂದ ಕಿಣ್ವಗಳ ಉತ್ಪಾದನೆ ಹೆಚ್ಚುತ್ತದೆ ಮತ್ತು ಉರಿಯೂತ ಉಂಟಾಗಬಹುದು. ಆದರೆ ತೀವ್ರ ತರಹದ ಯಕೃತ್‌ ಹಾನಿ ವಿರಳ. ಸ್ಟಾಟಿನ್‌ ಚಿಕಿತ್ಸೆ ಪಡೆಯುತ್ತಿರುವವರು ನಿಯಮಿತವಾಗಿ ಯಕೃತ್‌ ಕಾರ್ಯಚಟುವಟಿಕೆಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಕಿಣ್ವಗಳ ಪ್ರಮಾಣದಲ್ಲಿ ತೀವ್ರ ಹೆಚ್ಚಳ ಕಂಡುಬಂದರೆ ಅಥವಾ ವ್ಯಕ್ತಿಗೆ ಯಕೃತ್‌ ಕಾಯಿಲೆಗಳ ಹಿನ್ನೆಲೆ ಇದ್ದರೆ ಪರ್ಯಾಯ ಚಿಕಿತ್ಸಾ ವಿಧಾನಗಳನ್ನು ಶಿಫಾರಸು ಮಾಡಬೇಕು.

ಸ್ಟಾಟಿನ್‌ ತೆಗೆದುಕೊಳ್ಳುತ್ತಿರುವಾಗ ಯಾವ ತಪ್ಪುಗಳನ್ನು ಮಾಡಬಾರದು?

ಮಾಡಬಾರದ ಕೆಲವು ಸಾಮಾನ್ಯ ತಪ್ಪುಗಳು ಎಂದರೆ,

  1. ವೈದ್ಯಕೀಯ ಸಲಹೆ ಪಡೆಯದೆ ಇರುವುದು: ನಿಮ್ಮ ಕೊಲೆಸ್ಟರಾಲ್‌ ಮಟ್ಟವನ್ನು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು ಮತ್ತು ಸ್ಟಾಟಿನ್‌ಗಳನ್ನು ವೈದ್ಯರು ಶಿಫಾರಸು ಮಾಡಿರುವಂತೆಯೇ ಚಾಚೂತಪ್ಪದೆ ತೆಗೆದುಕೊಳ್ಳಬೇಕು.
  2. ದ್ರಾಕ್ಷಿ ಹಣ್ಣಿನ ಸೇವನೆಯನ್ನು ಕಡಿಮೆ ಮಾಡಿ: ದ್ರಾಕ್ಷಿ ಹಣ್ಣಿನ ಮತ್ತು ದ್ರಾಕ್ಷಿ ಹಣ್ಣಿನ ಜ್ಯೂಸ್‌ಗಳು ಸ್ಟಾಟಿನ್‌ ಅಡ್ಡ ಪರಿಣಾಮಗಳನ್ನು ಹೆಚ್ಚಿಸಬಹುದಾಗಿದೆ. ಹೀಗಾಗಿ ಇವುಗಳ ಸೇವನೆ ಕಡಿಮೆ ಮಾಡಬೇಕು.
  3. ಮದ್ಯಪಾನ ವರ್ಜಿಸಿ: ಅತಿಯಾದ ಮದ್ಯಪಾನವು ಸ್ಟಾಟಿನ್‌ ಅಡ್ಡ ಪರಿಣಾಮಗಳ ತೀವ್ರತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ವೈದ್ಯರೊಂದಿಗೆ ಚರ್ಚಿಸಿ ಎಷ್ಟಕ್ಕೆ ಮಿತಿಗೊಳಿಸಬೇಕು ಎಂಬ ಬಗ್ಗೆ ತಿಳಿದುಕೊಳ್ಳಬೇಕು.
  4. ಆರೋಗ್ಯಪೂರ್ಣ ಆಹಾರಕ್ರಮ: ಸ್ಟಾಟಿನ್‌ ಚಿಕಿತ್ಸೆ ಪಡೆಯುತ್ತಿರುವ ಸಮಯದಲ್ಲಿ ಪೌಷ್ಟಿಕಾಂಶಯುಕ್ತ ಸಮಗ್ರ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಜತೆಗೆ ಮೀನು, ಫ್ಲಾಕ್ಸ್‌ಬೀಜಗಳು, ಬೀಜಗಳು ಮತ್ತು ಆಲಿವ್‌ ಎಣ್ಣೆಯಂತಹ ಆರೋಗ್ಯಪೂರ್ಣ ಕೊಬ್ಬನ್ನು ಸೇರಿಸಿಕೊಳ್ಳಬೇಕು.
  5. ನಿಯಮಿತವಾಗಿ ವ್ಯಾಯಾಮ: ದೈಹಿಕವಾಗಿ ಚಟುವಟಿಕೆಯಿಂದ ಇರಿ, ದಿನಕ್ಕೆ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿ. ಇದು ಔಷಧದ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

ಡಾ| ಟಾಮ್‌ ದೇವಸ್ಯ,

ಯೂನಿಟ್‌ ಹೆಡ್‌,

ಕಾರ್ಡಿಯಾಲಜಿ ವಿಭಾಗ

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕಾರ್ಡಿಯಾಲಜಿ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next