Advertisement

ಮತದಾನ ಜಾಗೃತಿಗೆ ರಾಜ್ಯಾದ್ಯಂತ ಬೈಕ್‌ ಪ್ರವಾಸ

01:00 AM Mar 22, 2019 | Harsha Rao |

ಉಡುಪಿ: ಮತದಾನ ಜಾಗೃತಿಗಾಗಿ ಬೆಂಗಳೂರು ನಿವಾಸಿ ಮೂಲತಃ ತುಮಕೂರಿನವರಾದ ಬಸವರಾಜ ಎಸ್‌. ಕಲ್ಲುಸಕ್ಕರೆ ಅವರು ರಾಜ್ಯಾದ್ಯಂತ ಬೈಕ್‌ ಸಂಚಾರ ಕೈಗೊಂಡು ಜನಜಾಗೃತಿ ರೂಪಿಸುತ್ತಿದ್ದಾರೆ. 

Advertisement

ಫೆ. 24ರಂದು ಬೆಂಗಳೂರಿನಿಂದ ಹೊರಟಿರುವ ಬಸವರಾಜ ಬುಧವಾರ ರಾತ್ರಿ ಉಡುಪಿಗೆ ಆಗಮಿಸಿ ಗುರುವಾರ ಮಲ್ಪೆ, ಕಾಪು, ಮಣಿಪಾಲ, ಉಡುಪಿ ಮೊದಲಾದೆಡೆ ಸಂಚರಿಸಿದರು. ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಭೇಟಿ ಮಾಡಿದ ಬಸವರಾಜ್‌ ಅವರು ತಮ್ಮ ಕಾರ್ಯೋದ್ದೇಶಗಳನ್ನು ವಿವರಿಸಿದರು.

4 ಸಾವಿರ ಕಿ.ಮೀ. ಪ್ರಯಾಣ
ಇದುವರೆಗೆ 22 ಜಿಲ್ಲೆಗಳಿಗೆ ಬಸವರಾಜ್‌ ಅವರು ಭೇಟಿ ಕೊಟ್ಟಿದ್ದು ಸುಮಾರು 4,000 ಕಿ.ಮೀ. ಪ್ರಯಾಣ ಮಾಡಿದ್ದಾರೆ. ತಿಂಗಳಾಂತ್ಯದೊಳಗೆ ಉಳಿದ ಜಿಲ್ಲೆಗಳಿಗೆ ಭೇಟಿ ನೀಡಿ ಬೆಂಗಳೂರಿಗೆ ವಾಪಸಾಗುವರು. 

ಮತದಾನ ಜಾಗೃತಿಯ 10,000 ಕರಪತ್ರಗಳನ್ನು ತಮ್ಮ ಖರ್ಚಿನಿಂದ ಮುದ್ರಿ ಸಿದ್ದು ಈಗಾಗಲೇ 6,000 ಕರಪತ್ರಗಳನ್ನು ಜನರಿಗೆ ವಿತರಿಸಿದ್ದಾರೆ. ಗ್ರಾ.ಪಂ. ಕಚೇರಿ, ಕಾಲೇಜುಗಳು, ಬಸ್‌- ರೈಲು ನಿಲ್ದಾಣ ಹೀಗೆ ಜನಸಂದಣಿ ಇರುವೆಡೆ ಜನರಿಗೆ ಮತದಾನ ಮಾಡಲು ತಿಳಿಸುತ್ತಿದ್ದಾರೆ. ರಾಜ್ಯ ಚುನಾವಣಾ ಆಯೋಗದ ಅನುಮತಿ ಪಡೆದುಕೊಂಡಿರುವ ಬಸವರಾಜರಿಗೆ ಹೋದ ಕಡೆ ಉಳಿದುಕೊಳ್ಳಲು ಪ್ರವಾಸಿ ಮಂದಿರದ ವ್ಯವಸ್ಥೆಯನ್ನು ಮಾಡಿ ಕೊಡುತ್ತಾರೆ. ಉಳಿದ ಖರ್ಚನ್ನು ಬಸವರಾಜರೇ ನಿರ್ವಹಿಸುತ್ತಿದ್ದಾರೆ. 

ರಾಜೀನಾಮೆ ಕೊಟ್ಟು ಬೈಕ್‌ ಏರಿದ್ರು!
ಖಾಸಗಿ ಆಸ್ಪತ್ರೆಯಲ್ಲಿ ಪ್ರಯೋಗಾಲಯ ತಂತ್ರಜ್ಞರಾಗಿರುವ 43 ವರ್ಷದ ಬಸವರಾಜ್‌ ಅವರು ರಜೆ ಸಿಗದ ಕಾರಣ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮತದಾನ ಜಾಗೃತಿಯ ಬೈಕ್‌ ಸಂಚಾರವನ್ನು ಕೈಗೊಂಡರು. ಇದು ಮುಗಿದ ಬಳಿಕ ಬೇರೆಲ್ಲಾದರೂ ಕೆಲಸಕ್ಕೆ ಸೇರುವ ಇರಾದೆ ಬಸವರಾಜರಿಗೆ ಇದೆ. ಗುರುವಾರ ರಾತ್ರಿ ಮಂಗಳೂರಿಗೆ ತೆರಳುವ ಬಸವರಾಜ್‌ ಶುಕ್ರವಾರ ದ.ಕ. ಜಿಲ್ಲೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರವಾಸವನ್ನು ಮುಂದುವರಿಸಲಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next