ಚಿಕ್ಕಬಳ್ಳಾಪುರ: ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಗ್ರಾಮದಲ್ಲಿ ಶುಕ್ರವಾರ ರಾಜ್ಯದ ಮೊಟ್ಟ ಮೊದಲ ಗ್ರಾಮ ನ್ಯಾಯಾಲಯವನ್ನು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಕೆ.ಅಮರನಾರಾಯಣ ಉದ್ಘಾಟಿಸಿದರು.
ಕಕ್ಷಿದಾರರಿಗೆ ಮನೆ ಬಾಗಿಲಲ್ಲೇ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಾಗೂ ಜನರ ಹಂತದಲ್ಲೇ ಸಂಪೂರ್ಣ ನ್ಯಾಯದಾನ ಮಾಡುವ ಉದ್ದೇಶದಿಂದ 2008 ರಲ್ಲಿ ಗ್ರಾಮ ನ್ಯಾಯಾಲಯ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಈ ಕಾಯ್ದೆಯ ಅನ್ವಯ ನಾಗರಿಕರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ತನ್ನ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದರ ಗುರಿಯಾಗಿದೆಯೆಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಕೆ.ಅಮರನಾರಾಯಣ ತಿಳಿಸಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಎಸ್.ನಟರಾಜ್, ರೂಪ, ಭಾನುಮತಿ, ಮಾಲಾ, ಹೆಚ್.ದೇವರಾಜ್, ಲೋಕೇಶ್ ಸೇರಿದಂತೆ ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಮ ನ್ಯಾಯಾಲಯ ವಿಶೇಷ
ಗ್ರಾಮ ನ್ಯಾಯಾಲಯಕ್ಕೆ ನ್ಯಾಯಾಧಿಕಾರಿ- ಸಿವಿಲ್ ನ್ಯಾಯಧೀಶರನ್ನು ಗ್ರಾಮ ನ್ಯಾಯಾಲಯಕ್ಕೆ ನ್ಯಾಯಾಧಿಕಾರಿಯಾಗಿ ನೇಮಕ ಮಾಡಲಾಗುತ್ತದೆ. ಈ ನ್ಯಾಯಾಲಯಕ್ಕೆ ನೇಮಕಗೊಳ್ಳುವ ನ್ಯಾಯಾಧೀಶರನ್ನು ನ್ಯಾಯಾಧಿಕಾರಿ ಎಂದು ಕರೆಯಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಗ್ರಾಮ ನ್ಯಾಯಾಲಯದ ನ್ಯಾಯಾಧಿಕಾರಿಗಳು ಪ್ರಕರಣದ ಸ್ಥಳದಲ್ಲಿಯೇ ಇತ್ಯರ್ಥಗೊಳಿಸುವ ಅಧಿಕಾರವನ್ನು ಹೊಂದಿರುತ್ತಾರೆ.
ಯಾವ ಪ್ರಕರಣಗಳ ವಿಚಾರಣೆ ?
ಗ್ರಾಮ ನ್ಯಾಯಾಲಯದಡಿ 50 ಸಾವಿರ ರೂ ಗಳಿಗೆ ಒಳಪಟ್ಟ ಸಿವಿಲ್ ಪ್ರಕರಣಗಳು, ರೂ 20 ಸಾವಿರ ರೂ, ಗಳಿಗೆ ಒಳಪಟ್ಟ ಕಳ್ಳತನ ಪ್ರಕರಣಗಳು, 2 ವರ್ಷಗಳ ಕಾಲ ಜೈಲುವಾಸ ಪ್ರಕರಣಗಳು, ಕೌಟುಂಬಿಕ ಕಲಹ ಪ್ರಕರಣಗಳನ್ನು ವಿಚಾರಣೆ ಮಾಡಲಾಗುತ್ತದೆ.