Advertisement
ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ 923 ಚದರ ಅಡಿ ವಿಸ್ತೀರ್ಣದಲ್ಲಿ ವೃತ್ತಾಕಾರದಲ್ಲಿ ನಿರ್ಮಾಣವಾದ ಕೃಷಿ ಮ್ಯೂಸಿಯಂ ಆ.3ರಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಂದ ಉದ್ಘಾಟನೆಗೊಳ್ಳಲಿದೆ. ಸಮಗ್ರ ಕೃಷಿ ಪರಿಕಲ್ಪನೆಯಡಿ ಸೂಕ್ತ ಮಾದರಿ ಅಳವಡಿಸಿಕೊಂಡು ರೈತರಿಗೆ, ಶಾಲಾ ಮಕ್ಕಳಿಗೆ, ಪ್ರವಾಸಿಗರಿಗೆ, ಕೃಷಿ ಆಸಕ್ತರಿಗೆ ಕೃಷಿಯ ಸಂಪೂರ್ಣ ಮಾಹಿತಿ ಇಲ್ಲಿ ಸಿಗಲಿದೆ.
ಮ್ಯೂಸಿಯಂನಲ್ಲಿ ಕೃಷಿ ಕುರಿತ ಸಮಗ್ರ ಮಾಹಿತಿಯನ್ನು 5 ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ವಿಭಾಗದಲ್ಲಿ ಅನಾದಿಕಾಲದಿಂದ ಇಂದಿನವರೆಗೆ ರಾಜ್ಯದಲ್ಲಿ ಅನುಸರಿಸುತ್ತಿದ್ದ ಕೃಷಿ ಪದ್ಧತಿಗಳನ್ನು ಸುಂದರವಾದ ಟ್ಯಾಬ್ಲೋ ಆಕೃತಿಗಳ ಮೂಲಕ ಪ್ರಸ್ತುತಪಡಿಸಲಾಗಿದೆ. ಜತೆಗೆ ಕೃಷಿ ಇತಿಹಾಸ, ಅಭಿವೃದ್ಧಿ, ಕೃಷಿ ವಿವಿ ಸ್ಥಾಪನೆ ಹಾಗೂ ಬೆಳೆದು ಬಂದಿರುವ ಹಾದಿ ಕುರಿತು ಭಿತ್ತಿ ಚಿತ್ರಗಳ ಮೂಲಕ ಸಂಪೂರ್ಣ ಮಾಹಿತಿ ನೀಡಲಿದೆ. ಕೃಷಿ ತಳಿ-ಯಂತ್ರಜ್ಞಾನ
ಮಣ್ಣಿನ ರಚನೆ, ಬೆಳೆಗಳ ಪದ್ಧತಿ, ಬೆಳೆ ರೋಗ, ಸಾವಯವ ಕೃಷಿ, ಬೀಜ ಬಿತ್ತನೆ ಯಾಂತ್ರೀಕರಣ, ಜೈವಿಕ ತಾಂತ್ರಿಕತೆ, ಜೈವಿಕ ತಂತ್ರಜ್ಞಾನ, ಆನುವಂಶೀಯ ಮತ್ತು ಸಸ್ಯ ತಳಿಯ ಅಭಿವೃದ್ಧಿ ಹಾಗೂ ರೇಷ್ಮೆ, ಜೇನು ಕೃಷಿ ಕುರಿತ ಮಾಹಿತಿ ಲಭ್ಯವಾಗಲಿದೆ. ಜತೆಗೆ ಸಾಂಪ್ರದಾಯಿಕ ಹಾಗೂ ಆಧುನಿಕ ಕೃಷಿಗೆ ಬಳಸಲ್ಪಡುವ ಯಂತ್ರಗಳು ವಸ್ತು ಸಂಗ್ರಹಾಲಯದಲ್ಲಿವೆ.
Related Articles
ಹೈನುಗಾರಿಕೆ ಹಾಗೂ ಕೃಷಿ ಉತ್ಪನ್ನಗಳು ಯಾವ ರೀತಿ ಮಾರುಕಟ್ಟೆ ತಲುಪುತ್ತದೆ ಎನ್ನುವ ಮಾಹಿತಿ ಇಲ್ಲಿದೆ. ಕೃಷಿ, ಅರಣ್ಯ, ಆಧುನಿಕ ಕೃಷಿ ಮಾರುಕಟ್ಟೆ, ವಿಸ್ತರಣೆ ತಂತ್ರಜ್ಞಾನ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಮುಂತಾದವುಗಳ ಕಲಾಕೃತಿಗಳಿವೆ. ಜತೆಗೆ ವಿವಿಧ ಪಕ್ಷಿಗಳ ಧ್ವನಿಯನ್ನೂ ಇಲ್ಲಿ ಕೇಳಬಹುದಾಗಿದೆ.
Advertisement
ಆಕರ್ಷಕ ಪ್ರಾಂಗಣಮ್ಯೂಸಿಯಂ ಪ್ರಾಂಗಣವು ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದು, ಇಲ್ಲಿ ಸಾಂಪ್ರದಾಯಿಕ ಹಾಗೂ ಯಾಂತ್ರಿಕ ಕೃಷಿಯನ್ನು ಬಿಂಬಿಸುವ ಟ್ಯಾಬ್ಲೋಗಳಿವೆ. ಪ್ರಾಂಗಣದಲ್ಲಿ ಕೃಷಿ ಬಗ್ಗೆ ಮಾಹಿತಿ ನೀಡಿದ ಬಳಿಕ ಮ್ಯೂಸಿಯಂ ವೀಕ್ಷಣೆಗೆ ಅವಕಾಶ ನೀಡಲಾಗುವುದು. ಏಕಕಾಲಕ್ಕೆ 700ಕ್ಕೂ ಅಧಿಕ ಮಂದಿ ಮ್ಯೂಸಿಯಂ ಅನ್ನು ವೀಕ್ಷಿಸಬಹುದು. ಉಚಿತ ಪ್ರವೇಶ
ಪ್ರಸ್ತುತ ಉಚಿತ ಪ್ರವೇಶ ಕಲ್ಪಿಸಿದ್ದು, ಕಚೇರಿ ದಿನಗಳಲ್ಲಿ ಬೆಳಗ್ಗೆ 9ರಿಂದ 4ರ ವರೆಗೆ ಹಾಗೂ ಶನಿವಾರ 9ರಿಂದ 12.30ರ ವರೆಗೆ ಸಾರ್ವಜನಿಕರು ಭೇಟಿ ನೀಡಬಹುದು. ಮ್ಯೂಸಿಯಂ ಸಮೀಪ ಸಿರಿಧಾನ್ಯ ಉತ್ಪನ್ನಗಳ ಮಾರಾಟ ಕೇಂದ್ರವೂ ಇದೆ. ಆಧುನಿಕ ಕೃಷಿ ಯಂತ್ರ, ಬೀಜ ಹಾಗೂ ಸಸಿಗಳ ಮಾರಾಟ ವ್ಯವಸ್ಥೆಯೂ ಇದೆ. ಮುಂಬರುವ ದಿನದಲ್ಲಿ ಕೃಷಿ ಮ್ಯೂಸಿಯಂ ಒಂದು ಪ್ರವಾಸಿ ತಾಣವಾಗಿ ಪರಿವರ್ತನೆಯಾಗಲಿದೆ. ಇದು ಯುವಜನರನ್ನು ಕೃಷಿಯತ್ತ ಸೆಳೆಯುವಲ್ಲಿ ಯಶಸ್ವಿಯಾಗಲಿದೆ. ಶಾಲಾ ಮಕ್ಕಳು ಮ್ಯೂಸಿಯಂಗೆ ಭೇಟಿ ನೀಡುವ ಮೂಲಕ ಕೃಷಿ ಸಂಬಂಧಿಸಿದ ಮಾಹಿತಿ ಸಿಗಲಿದೆ.
-ಡಾ| ಎಸ್.ವಿ. ಸುರೇಶ್, ಕುಲಪತಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು. ತೃಪ್ತಿ ಕುಮ್ರಗೋಡು