Advertisement

ರಾಜ್ಯಗಳ ಗಡಿ ವಿವಾದ ಮತ್ತು…ಮಹಾಜನ್‌ ವರದಿ

01:31 AM Jan 19, 2021 | Team Udayavani |

ರಾಜ್ಯಗಳ ಗಡಿಗಳು ವಿವಾದದ  ಸ್ವರೂಪ ಪಡೆದುಕೊಂಡಾಗ  ನೆನಪಾಗುವುದು ಮಹಾಜನ್‌ ವರದಿ. ವಿಶೇಷವಾಗಿ ಮಹಾರಾಷ್ಟ್ರ ಮತ್ತು  ಕರ್ನಾಟಕ ರಾಜ್ಯಗಳ “ಬೆಳಗಾವಿ ವಿವಾದ’ ಸದಾ ಸುದ್ದಿಯಲ್ಲಿರುತ್ತದೆ. ಉಭಯ ರಾಜ್ಯಗಳಿಗೂ ಮಹಾಜನ್‌ ವರದಿಗೂ ಒಂದು ನಂಟು. ಹಾಗಾದರೆ  ಏನಿದು ಮಹಾಜನ್‌ ವರದಿ? ವರದಿ ಹೇಳಿದ್ದೇನು? ಇಲ್ಲಿದೆ ಮಾಹಿತಿ…

Advertisement

ಗಡಿ ವಿಚಾರ ವಿವಾದವಾಗಿದ್ದು ಹೇಗೆ? :

ರಾಜರ ಆಡಳಿತದ ಕಾಲದಲ್ಲಿ ಹಂಚಿ ಹೋಗಿದ್ದ ಭಾರತ ಏಕ ರಾಷ್ಟ್ರವಾಗಿದ್ದು ಸ್ವಾತಂತ್ರ್ಯಬಂದ ಮೇಲೆ. ಭಾಷಾವಾರು ಆಧಾರದಲ್ಲಿ ರಾಜ್ಯಗಳನ್ನು ರಚಿಸಲಾಯಿತು. ಈಗಿರುವ ಬಹುತೇಕ ರಾಜ್ಯಗಳು ಭಾಷಾವಾರು ಆಧಾರದಲ್ಲೇ ಹುಟ್ಟಿಕೊಂಡವುಗಳು. ಇದರನ್ವಯ ನೆರೆಹೊರೆಯ ರಾಜ್ಯಗಳಲ್ಲಿ ಹಂಚಿ ಹೋಗಿದ್ದ ಕನ್ನಡ ಮಾತಾಡುವ ಪ್ರದೇಶಗಳನ್ನೆಲ್ಲ ಕರ್ನಾಟಕ್ಕೆ ಸೇರಿಸಲಾಯಿತು. ಆದರೆ ತಮ್ಮ ನಾಡಿನ ಭಾಗವಾಗಿದ್ದ ಕೆಲವು ಪ್ರದೇಶಗಳನ್ನು ಕರ್ನಾಟಕಕ್ಕೆ ಬಿಟ್ಟುಕೊಡಲು ಇತರ ರಾಜ್ಯಗಳೂ ಸಿದ್ಧವಿರಲಿಲ್ಲ. ಹೀಗಾಗಿ ಕರ್ನಾಟದ ಕೆಲವು ಪ್ರದೇಶಗಳು ನೆರೆಯ ರಾಜ್ಯಗಳಲ್ಲೇ ಇರಬೇಕಾಯಿತು. ಇದೂ ಅಲ್ಲದೇ   ಬೆಳಗಾವಿ, ಬೀದರ್‌, ಕಾರವಾರ ಜಿಲ್ಲೆಗಳ ಕೆಲವು ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ  ಸೇರಿಸಬೇಕೆಂದುಆ ರಾಜ್ಯ ಕೂಗೆಬ್ಬಿಸಿತು. ಇಂದೂ ಮುಂದುವರಿದಿದೆ.

ಮಹಾಜನ್‌ ನೇತೃತ್ವದಲ್ಲಿ ಸಮಿತಿ ರಚನೆ :

ದೇಶದ ಅಭಿವೃದ್ಧಿಗೆ ಒಕ್ಕೂಟ ವ್ಯವಸ್ಥೆ ಪಾತ್ರ ಮಹತ್ವದ್ದು. ಹೀಗಾಗಿ ದೇಶದ ಹಿತದೃಷ್ಟಿಯಿಂದ ಕೇಂದ್ರ ಸರಕಾರ  ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ನಿವೃತ್ತರಾಗಿದ್ದ ಮೆಹರ್‌ ಚಂದ್‌ ಮಹಾಜನ್‌ ಅವರ ನೇತೃತ್ವದಲ್ಲಿ  ಗಡಿ ವಿವಾದ ಕೊನೆಗೊಳಿಸಲು ಒಂದು ಸಮಿತಿ ರಚಿಸಿತು. 1966ರಲ್ಲಿ  ಮಹಾಜನ್‌ ನೇತೃತ್ವದ ಸಮಿತಿ ಅಸ್ತಿತ್ವಕ್ಕೆ ಬಂತು.  ಕರ್ನಾಟಕ – ಮಹಾರಾಷ್ಟ್ರ – ಕೇರಳ ನಡುವಿನ ಗಡಿ ವಿವಾದ ಬಗೆಹರಿಸಲು ಆಯೋಗ 1967ರಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಿತು. ಮೆಹರ್‌ ಚಂದ್‌ ಮಹಾಜನ್‌ ಅವರು  ಮೂಲತಃ ಪಂಜಾಬ್‌ನವರು.

Advertisement

ಸಮಿತಿಗೆ ಮಹಾರಾಷ್ಟ್ರದವರೇ ಕಾರಣ :

ರಾಜ್ಯಗಳ ವ್ಯಾಜ್ಯಗಳನ್ನು ಇತ್ಯರ್ಥ ಮಾಡಲು ಸಮಿತಿ ಗಳನ್ನು ರಚಿಸುವಂತೆ ಅಮರಣಾಂತ ಉಪವಾಸ ಸತ್ಯಾಗ್ರಹದ ಮೂಲಕ ಒತ್ತಾಯ ಹೇರಿದ್ದು ಮಹಾ ರಾಷ್ಟ್ರದ ನಾಯಕರಾದ ಸೇನಾಪತಿ ಬಾಪಟ್‌ ಅವರು. ಮಹಾಜನ್‌ ಸಮಿತಿಯಲ್ಲಿ ಇಬ್ಬರು ಕನ್ನಡಿಗರು, ಇಬ್ಬರು ಮರಾಠಿಗರು ಇದ್ದು ಸಮಿತಿ ಸಮತೋಲನದಿಂದ ಕೂಡಿತ್ತು. ಈ ಸಮಿತಿಯವರು ಗಡಿಭಾಗದ ಎಲ್ಲ ಊರುಗಳನ್ನು ಭೇಟಿ ಮಾಡಿ ಅಲ್ಲಿನ ಸಂಘ ಸಂಸ್ಥೆಗಳ, ಜನಸಾಮಾನ್ಯರ ಅಭಿಪ್ರಾಯವನ್ನು ಸಂಗ್ರಹಿಸಿದರು. ಒಟ್ಟು 2,240 ಮನವಿಗಳನ್ನು ಸ್ವೀಕರಿಸಿಕೊಂಡ ಮಹಾಜನ್‌ ಸಮಿತಿ ವರದಿಯನ್ನು ಸರಕಾರಕ್ಕೆ ಸಲ್ಲಿಸಿತು.

ಮತ್ತೆ ಏನಾಯಿತು? :

ಕರ್ನಾಟಕಕ್ಕೆ ಮಹಾರಾಷ್ಟ್ರ 247 ಹಳ್ಳಿಗಳನ್ನು ಕೊಡಬೇಕು ಎಂದು ವರದಿ ಹೇಳಿತ್ತು. ಕರ್ನಾಟಕ ಅಂತೂ ಈ ವರದಿಯನ್ನು ಒಪ್ಪಿಕೊಂಡಾಗಿತ್ತು. ಆದರೆ ಕೇರಳ ಮಾತ್ರ ಕಾಸರಗೋಡು ಜಿಲ್ಲೆಯನ್ನು ಕರ್ನಾಟಕಕ್ಕೆ ನೀಡದೇ ಈ ವರದಿಯನ್ನು ತಿರಸ್ಕರಿಸಿತು. ಮಹಾರಾಷ್ಟ್ರದಲ್ಲಿ ಈ ಸಮಿತಿ ನೇಮಕವಾದಾಗ ಮುಖ್ಯಮಂತ್ರಿಗಳಾಗಿದ್ದ ಶ್ರೀ ವಿ.ಪಿ.ನಾಯಕ್‌ ಅವರು ಮಹಾಜನ್‌ ವರದಿ ಹೇಗೇ ಇದ್ದರೂ ಅದನ್ನು ಒಪ್ಪಿಕೊಳ್ಳುವುದಾಗಿ ಬಹಿರಂಗ ಹೇಳಿಕೆಯನ್ನೂ ಕೊಟ್ಟಿದ್ದರು. ಆದರೆ ವರದಿ ಸಲ್ಲಿಕೆಯಾದ ಅನಂತರ ಮಹಾರಾಷ್ಟ್ರ ತಿರಸ್ಕರಿಸಿತು. ಆಯೋಗದ ಶಿಫಾರಸಿನಂತೆ ಬೆಳಗಾವಿ ನಗರ ತನಗೆ ಸಿಗುವುದಿಲ್ಲ ಎಂದು ತಿಳಿದಾಗ ಮಹಾರಾಷ್ಟ್ರ ವರದಿಯನ್ನು ಒಪ್ಪಿಕೊಳ್ಳಲಿಲ್ಲ. ಬಳಿಕ ಗಡಿ ವಿವಾದ ತೀವ್ರವಾಗಿ ಆರಂಭವಾಯಿತು. ಮಹಾರಾಷ್ಟ್ರ ಸುಪ್ರೀಂ ಕೋರ್ಟ್‌ ಮೊರೆ ಹೋಯಿತು. ಪ್ರಕರಣ  ಇಂದೂ ಮುಂದುವರಿದಿದೆ ವಿವಾದವಾಗಿ.

ಮಹಾಜನ್‌ ವರದಿಯಿಂದ ಕರ್ನಾಟಕಕ್ಕೆ ;

ಲಾಭ :

  1. ದಕ್ಷಿಣ ಸೊಲ್ಲಾಪುರದ 65 ಹಳ್ಳಿಗಳು
  2. ಸಂಪೂರ್ಣ ಅಕ್ಕಲಕೋಟೆ ತಾಲೂಕು
  3. ಜತ್ತ ತಾಲೂಕಿನ 44 ಹಳ್ಳಿಗಳು
  4. ಗಡಹಿಂಗ್ಲಜ ತಾಲೂಕಿನ 15 ಹಳ್ಳಿಗಳು
  5. ಕೇರಳದ ಚಂದ್ರಗಿರಿ ನದಿಯ ಉತ್ತರಭಾಗ (ಕಾಸರಗೋಡು ಸಹಿತ)

 

ನಷ್ಟ :

  1. ಬೆಳಗಾವಿ ತಾಲೂಕಿನ 62 ಹಳ್ಳಿಗಳು
  2. ಖಾನಾಪುರ ತಾಲೂಕಿನ 152 ಹಳ್ಳಿ
  3. ಚಿಕ್ಕೋಡಿಯ ನಿಪ್ಪಾಣಿ ಸೇರಿದಂತೆ 41 ಹಳ್ಳಿಗಳು
  4. ಹುಕ್ಕೇರಿ ತಾಲೂಕಿನ 9 ಹಳ್ಳಿಗಳು
  5. ಇತಿಹಾಸ ಪ್ರಸಿದ್ಧ ನಂದಗಡ
  6. ರಕ್ಕಸಕೊಪ್ಪ ಜಲಾಶಯ
Advertisement

Udayavani is now on Telegram. Click here to join our channel and stay updated with the latest news.

Next