Advertisement

ಜಪ್ತಿಯಲ್ಲಿ ರಾಜ್ಯದ 2ನೇ ತೆಂಗು ಸಂಸ್ಕರಣ ಘಟಕ

10:10 AM Jan 07, 2020 | mahesh |

ಕುಂದಾಪುರ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಬಳಿಕ ರಾಜ್ಯದ 2ನೇ ತೆಂಗು ಸಂಸ್ಕರಣ ಘಟಕ ಕುಂದಾಪುರದ ಜಪ್ತಿಯಲ್ಲಿ ಶೀಘ್ರ ಆರಂಭವಾಗಲಿದ್ದು, ನೀರಾ ಮಾದರಿಯ “ಕಲ್ಪರಸ’ ಎನ್ನುವ ಉತ್ಪನ್ನ ತಯಾರಿಸಿ ಮಾರುಕಟ್ಟೆಗೆ ತರುವ ಪ್ರಯತ್ನ ನಡೆಯುತ್ತಿದೆ.

Advertisement

ಉಡುಪಿ ಜಿಲ್ಲೆಯ 54 ತೆಂಗು ಬೆಳೆಗಾರರ ಸೊಸೈಟಿಗಳ 4,820 ಸದಸ್ಯರನ್ನು ಒಳಗೊಂಡ ಉಡುಪಿ ಕಲ್ಪರಸ ತೆಂಗು ಮತ್ತು ಸರ್ವ ಸಂಬಾರ ಉತ್ಪಾದಕರ ಕಂಪೆನಿ (ಉಕಸ) ಆರಂಭಿಸುವ ಯೋಜನೆಯನ್ನು ಉಡುಪಿಯ ಭಾರತೀಯ ಕಿಸಾನ್‌ ಸಂಘ ಹಾಕಿಕೊಂಡಿದೆ. ಇದರಡಿ ಘಟಕ ಕಾರ್ಯಾಚರಿಸಲಿದೆ. ಈ ಪ್ರಯತ್ನ ಅವಿ ಭಜಿತ ದ. ಕನ್ನಡ ಜಿಲ್ಲೆಗೆ ಪ್ರಥಮ.

ಏನಿದು “ಕಲ್ಪರಸ’?
ಕಾಸರಗೋಡಿನ ಸಿಪಿಸಿಆರ್‌ಐ ಮಾರ್ಗದರ್ಶನದಲ್ಲಿ ತೆಂಗಿನ ಮರದ ಕೊಂಬನ್ನು ಟ್ಯಾಪಿಂಗ್‌ ಮಾಡಿ ನೀರಾದಂಥ ರಸ ತೆಗೆಯಲಾಗುತ್ತದೆ. ಅದನ್ನು ಸಂಸ್ಕರಣ ಘಟಕದಲ್ಲಿ 60 ಡಿಗ್ರಿ ಸೆ. ಉಷ್ಣತೆಯಲ್ಲಿ ಪ್ಯಾಶ್ಚರೀಕರಿಸಿ, ಹುಳಿ ಯಂಶ ತೆಗೆದು, ತಂಪು ಪಾನೀಯವಾಗಿ ಮಾರು ಕಟ್ಟೆಗೆ ಬಿಡಲಾಗುತ್ತದೆ.

ಕಲ್ಪರಸದ ಪ್ರಯೋಜನ
ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ, ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಗ್ಲೆಸೆಮಿಕ್‌ ಇಂಡೆಕ್ಸ್‌ ಕಡಿಮೆ ಇದ್ದು, ಮಧುಮೇಹಿಗಳಿಗೆ ಉತ್ತಮ ಪಾನೀಯ. ಕೊಲೆಸ್ಟರಾಲ್‌ ನಿಯಂತ್ರಕ, ಮೂಳೆ ಆರೋಗ್ಯ ವೃದ್ಧಿಸುತ್ತದೆ. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಮಲಬದ್ಧತೆ ನಿವಾರಣೆಗೆ ಸಹಕಾರಿ.

8 ಮರ – 2.40 ಲಕ್ಷ ರೂ. ಆದಾಯ
ಜಿಲ್ಲೆಯ ತೆಂಗು ಬೆಳೆಗಾರರ ಸೊಸೈಟಿಗಳಲ್ಲಿ ನೋಂದಾಯಿಸಿದ 4,820 ಬೆಳೆಗಾರರಿದ್ದು, 3.88 ಲಕ್ಷ ತೆಂಗಿನ ಮರಗಳಿವೆ. ಆರಂಭದಲ್ಲಿ ಓರ್ವ ಬೆಳೆಗಾರನ ತಲಾ 8 ಮರಗಳಿಂದ ದಿನಕ್ಕೆ ತಲಾ 1.5ರಿಂದ 2 ಲೀ. ವರೆಗೆ ರಸ ತೆಗೆಯುವ ಯೋಜನೆಯಿದೆ. ಒಬ್ಬ ರೈತನಿಗೆ ವಾರ್ಷಿಕ 2.40 ಲಕ್ಷ ರೂ. ಆದಾಯ ಸಿಗಲಿದೆ.

Advertisement

4,820 ಉಡುಪಿ ಜಿಲ್ಲೆಯ ತೆಂಗು ಬೆಳೆಗಾರರಿಗೆ ಅನುಕೂಲ
10   15 ದಿನಗಳ ಕಾಲ ನಿರಂತರ ಟ್ಯಾಪಿಂಗ್‌
8 ತೆಂಗಿನಮರ ಒಬ್ಬ ರೈತನಿಂದ ಪಡೆದು ಟ್ಯಾಪಿಂಗ್‌
1.5 2 ಲೀ. ನೀರಾ ತೆಗೆಯುವ ಯೋಜನೆ

“ಹಸುರು ಕಾಲರ್‌’ ಉದ್ಯೋಗ
ವೈಟ್‌ ಕಾಲರ್‌ ಉದ್ಯೋಗದಂತೆ ಕಲ್ಪರಸ ಉತ್ಪಾದನೆಯಿಂದ ಜಿಲ್ಲೆಯಲ್ಲಿ 2,500ಕ್ಕೂ ಹೆಚ್ಚು ಮಂದಿಗೆ ಕಲ್ಪರಸ ತಂತ್ರಜ್ಞರ ಹೆಸರಿನಲ್ಲಿ “ಹಸುರು ಕಾಲರ್‌’ ಉದ್ಯೋಗ ಸೃಷ್ಟಿಸಲಿದೆ.

ಬೆಳೆಗಾರರಿಗೆ ಪ್ರಯೋಜನಗಳು
 ಮಂಗಗಳ ಉಪಟಳಕ್ಕೆ ಸ್ವಲ್ಪ ಮಟ್ಟಿನ ಪರಿಹಾರ ಸಾಧ್ಯ.
 ಹೈನುಗಾರಿಕೆ ರೀತಿಯಲ್ಲಿ ನಿರಂತರ ಆದಾಯ.
 ರೈತರಿಗೆ ಕಲ್ಪರಸ ಮಾರಾಟ ಹೊಣೆ ಇಲ್ಲ.
 ಕಲ್ಪರಸ ತೆಗೆದರೆ ಇಳುವರಿ ಶೇ. 50ಕ್ಕಿಂತ ಹೆಚ್ಚಳ.
 ತೆಂಗಿನಕಾಯಿ ಬೆಲೆಯಲ್ಲಿ ಸ್ಥಿರತೆ ಸಾಧ್ಯ.

ಸಂಸ್ಕರಣ ಘಟಕ ಆರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಅಬಕಾರಿ ಪರವಾನಿಗೆ ಸಿಗಬೇಕಿದೆ. ಸದ್ಯ ತಾತ್ಕಾಲಿಕ ಪರವಾನಿಗೆಯೊಂದಿಗೆ ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಆರಂಭವಾಗಲಿದೆ.
– ಸತ್ಯನಾರಾಯಣ ಉಡುಪ ಜಪ್ತಿ, ಪ್ರ. ಕಾರ್ಯದರ್ಶಿ,ಭಾರತೀಯ ಕಿಸಾನ್‌ ಸಂಘ ಉಡುಪಿ

 ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next