Advertisement

ಕಸ್ತೂರಿರಂಗನ್ ವರದಿ ಜಾರಿಗೆ ತಂದ್ರೆ ಕರ್ನಾಟಕದಲ್ಲಿ ರಕ್ತಕ್ರಾಂತಿ ಆಗಲಿದೆ: ಆರಗ ಜ್ಞಾನೇಂದ್ರ

03:36 PM Aug 01, 2023 | Kavyashree |

ತೀರ್ಥಹಳ್ಳಿ : ಬಿ.ಎಸ್. ಯಡಿಯೂರಪ್ಪನವರ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕಸ್ತೂರಿ ರಂಗನ್ ವರದಿ ಜಾರಿಯನ್ನು ಒಪ್ಪುವುದಿಲ್ಲ ಎಂದು ಹೇಳಿತ್ತು. ಈಗ ಹೈಕೋರ್ಟ್ ನಾ ಗ್ರೀನ್ ಬೆಂಚ್ ಗೆ ಹೋಗಿ ಇಲ್ಲಿನ ಜನರ ಕುತ್ತಿಗೆಗೆ ಹಗ್ಗ ಹಾಕುವ ಕೆಲಸ ನಡೆಯುತ್ತಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

Advertisement

ಆ.1ರ ಮಂಗಳವಾರ ತಾಲೂಕು ಕಚೇರಿ ಎದುರು ಕಸ್ತೂರಿ ರಂಗನ್ ವರದಿ ಜಾರಿಯ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿ, ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ಈ ಸಮಸ್ಯೆ ಇತ್ತು. ಗ್ರಾಮಸಭೆ ನಡೆಸಿ ರಿಪೋರ್ಟ್ ನೀಡಬೇಕೆಂದು ಹೇಳಿತ್ತು. ಆದರೆ ಸಿದ್ದರಾಮಯ್ಯನವರ ಸರ್ಕಾರ ಈ ಕೆಲಸ ಮಾಡಿರಲಿಲ್ಲ. ಜಿಲ್ಲಾ ಮಟ್ಟದ ಸಭೆ ನಡೆಸಿ ವರದಿ ನೀಡಿದ್ರು. ಗ್ರಾಮಸಭೆ ನಡೆಸಿ ಸರಿಯಾದ ರೀತಿಯಲ್ಲಿ ವರದಿ ನೀಡಿದ್ದರೆ ಈ ರೀತಿ ಸಮಸ್ಯೆ ಬರುತ್ತಿರಲಿಲ್ಲ ಎಂದರು.

ಕೇಂದ್ರ ಪರಿಸರ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆದಿದ್ದರು. ಆ ಸಭೆಗೆ ನಾನು ಹೋಗಿದ್ದೆ. ನಾವು ಹೋಗಿದ್ದಾಗ ತಮಿಳುನಾಡು, ಕೇರಳ, ಮಹಾರಾಷ್ಟ್ರ ಮಂತ್ರಿಗಳು ಬಂದು ವಿರೋಧ ಮಾಡಿದ್ದರು. ಕರ್ನಾಟಕ ಪರ ನಾನೇ ಮಾತನಾಡಿದ್ದೆ. ಒಂದು ವೇಳೆ ವರದಿ ಜಾರಿಗೆ ತಂದ್ರೆ ಕರ್ನಾಟಕದಲ್ಲಿ ರಕ್ತ ಕ್ರಾಂತಿ ಆಗಲಿದೆ. ದಯವಿಟ್ಟು ಹುಡುಗಾಟ ಮಾಡಬೇಡಿ ನಮ್ಮ ಬದುಕು ಅಲ್ಲಿದೆ. ಜಾರಿಗೆ ತರಲು ಹೊರಟಿದ್ದು ಯಾರು? ಜನರನ್ನ ಅಥವಾ ಅರಣ್ಯ ಅಧಿಕಾರಿಗಳನ್ನು ಕೇಳಿದ್ದಾನಾ? ಊರಿಗೆ ಬಂದು ಪ್ರವಾಸ ಮಾಡಿದ್ದಾನ? ಎಂದು ಪ್ರಶ್ನೆ ಮಾಡಿದ್ದಕ್ಕೆ ಪರಿಸರ ಸಚಿವರು ಸದ್ಯಕ್ಕೆ ಬೇಡ ಎಂದಿದ್ದರು ಎಂದರು.

ಪಶ್ಚಿಮ ಘಟ್ಟ ಉಳಿಸುವ ದೃಷ್ಟಿಯಿಂದ ಕಸ್ತೂರಿ ರಂಗನ್ ವರದಿ ಜಾರಿಗೆ ಕೊಡ್ತೀವಿ ಎಂದು ಈಶ್ವರ್ ಖಂಡ್ರೆ ಹೇಳುತ್ತಾರೆ. ದಯವಿಟ್ಟು ಅಧ್ಯಯನ ಮಾಡಿ. ನಿಮ್ಮ ಸರ್ಕಾರಕ್ಕೆ ಮಲೆನಾಡಿನಲ್ಲಿ ಗೆಲುವನ್ನು ಕೊಟ್ಟಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿ ಮಾಡಿದರೆ ಲೋಕಸಭೆ ಚುನಾವಣೆಯಲ್ಲಿ ನಿಮ್ಮನ್ನು ಊರಿಗೂ ಜನರು ಸೇರಿಸುವುದಿಲ್ಲ ಎಂದರು.

ಇದು ಹೋರಾಟದ ಮೊದಲ ಹೆಜ್ಜೆ. ಮುಂದೆಯೂ ಕಸ್ತೂರಿ ರಂಗನ್ ವರದಿ ಜಾರಿ ಮಾಡಲು ಹೊರಟರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ಈ ಸಂದರ್ಭದಲ್ಲಿ ಸಾಲೇಕೊಪ್ಪ ರಾಮಚಂದ್ರ, ಆರ್ ಮದನ್, ಬೇಗುವಳ್ಳಿ ಸತೀಶ್, ನವೀನ್ ಹೆದ್ದೂರು, ರಕ್ಷಿತ್ ಮೇಗರವಳ್ಳಿ, ಗೀತಾ ಸದಾನಂದ ಶೆಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next