ಹೊಸದಿಲ್ಲಿ : ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದ ಅಪ್ರಾಪ್ತ ವಯಸ್ಕಳ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಇಲ್ಲಿನ ನ್ಯಾಯಾಲಯವು ದೆಹಲಿ ಪೊಲೀಸರಿಂದ ಸ್ಥಿತಿ ವರದಿ ಕೇಳಿದೆ. ತನಿಖೆಯ ಮೇಲ್ವಿಚಾರಣೆ ಮತ್ತು ನ್ಯಾಯಾಲಯದ ಮುಂದೆ ಆಪಾದಿತ ಸಂತ್ರಸ್ತರ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ಕೋರಿ ಪ್ರತಿಭಟನಾ ನಿರತ ಕುಸ್ತಿಪಟುಗಳು ಸಲ್ಲಿಸಿದ ಮನವಿಯ ಮೇರೆಗೆ ನ್ಯಾಯಾಧೀಶರು ಪೊಲೀಸರಿಗೆ ನೋಟಿಸ್ ನೀಡಿದ್ದರು.
ಪ್ರಕರಣದ ಮುಂದಿನ ವರದಿಯನ್ನು ಮೇ 12 ರೊಳಗೆ ಸಲ್ಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ.”ಅಪ್ರಾಪ್ತ ಮಹಿಳಾ ಕುಸ್ತಿಪಟುವಿನ ಹೇಳಿಕೆಯನ್ನು ಸಿಆರ್‌ಪಿಸಿ ಸೆಕ್ಷನ್ 164 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗಿದೆ. ಶೀಘ್ರದಲ್ಲೇ, ಉಳಿದ ಆರು ಮಹಿಳಾ ಕುಸ್ತಿಪಟುಗಳ ಹೇಳಿಕೆಗಳನ್ನು ಸಹ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗುವುದು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 164 ಮ್ಯಾಜಿಸ್ಟ್ರೇಟ್ ಮುಂದೆ ತಪ್ಪೊಪ್ಪಿಗೆ ಮತ್ತು ಹೇಳಿಕೆಯನ್ನು ದಾಖಲಿಸುವುದರೊಂದಿಗೆ ವ್ಯವಹರಿಸುತ್ತದೆ.
ಕಳೆದ ತಿಂಗಳು ದೆಹಲಿ ಪೊಲೀಸರು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎರಡು ಎಫ್ ಐಆರ್ ದಾಖಲಿಸಿದ್ದರು.
ಭಾರತದ ಕುಸ್ತಿ ಫೆಡರೇಶನ್ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಲವಾರು ಕುಸ್ತಿಪಟುಗಳು ಎ 23 ರಿಂದ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ. ಅವರಿಗೆ ಬೆಂಬಲ ಸೂಚಿಸಿ ರೈತರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.