Advertisement
ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಹಾಗೂ ಟಿ.ಎ. ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಈಗ ಕೇಂದ್ರ ಸರ್ಕಾರ 16ನೇ ಆಯೋಗ ರಚಿಸಲು ಮುಂದಾಗಿದ್ದು, “ಟರ್ಮ್ ಆಫ್ ರೆಫರೆನ್ಸ್’ (ಉಲ್ಲೇಖದ ನಿಯಮಗಳು) ಕಳಿಸಿಕೊಡಲು ಕೇಂದ್ರ ಸರ್ಕಾರ ಮನವಿ ಮಾಡಿದೆ. ಅವುಗಳನ್ನು ರೂಪಿಸಲಾಗುತ್ತಿದ್ದು, ರಾಜ್ಯದ ಹಿತಕ್ಕೆ ಅನುಗುಣವಾಗಿ ಆ ನಿಯಮಗಳನ್ನು ರೂಪಿಸಲಾಗುವುದು. ಆಯೋಗ ರಚನೆಗೊಂಡು ರಾಜ್ಯಕ್ಕೆ ಬಂದಾಗ ಅದರ ಮುಂದೆ ನಮ್ಮ ನಿಲುವು ಸ್ಪಷ್ಟಪಡಿಸಿ ಸಮರ್ಥ ವಾದ ಮಂಡಿಸಿ ರಾಜ್ಯಕ್ಕೆ ನ್ಯಾಯ ಪಡೆದುಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗು ವುದು ಎಂದರು.
ಸಂಪನ್ಮೂಲ ಕ್ರೋಢೀಕರಣಕ್ಕೆ ಆದ್ಯತೆ ನೀಡುವುದರ ಜೊತೆಗೆ ತೆರಿಗೆ ಸೋರಿಕೆ ತಡೆಗಟ್ಟಲು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಸದಸ್ಯ ಎಂ. ನಾಗರಾಜು ಅವರ ಪ್ರಶ್ನೆಗೆ ಮುಖ್ಯಮಂತ್ರಿಯವರು ಇದೇ ವೇಳೆ ಉತ್ತರ ನೀಡಿದರು.
Related Articles
ಸದಸ್ಯರ ಪ್ರಶ್ನೆಗೆ ಉತ್ತರಿಸುವಾಗ ಮುಖ್ಯಮಂತ್ರಿಯವರು 15ನೇ ಹಣಕಾಸು ಆಯೋಗ ಮಧ್ಯಾಂತರ ವರದಿಯಲ್ಲಿ ಶಿಫಾರಸು ಮಾಡಿದ್ದ 5,495 ಕೋಟಿ ರೂ. ವಿಶೇಷ ಅನುದಾನವನ್ನು ನಮ್ಮ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ತಡೆದರು ಎಂದು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಕೇಶವ ಪ್ರಸಾದ್, ತೇಜಸ್ವಿನಿ ಗೌಡ, ಆ ಅನುದಾನ ರಾಜ್ಯಕ್ಕೆ ಯಾಕೆ ಸಿಕ್ಕಿಲ್ಲ ಎಂಬ ಬಗ್ಗೆ ಮುಖ್ಯಮಂತ್ರಿಯವರು ಕಾರಣ ಹೇಳಬೇಕು ಎಂದರು. ನಾನು ನಿರ್ಮಲಾ ಸೀತಾರಾಮನ್ ಅವರ ಮೇಲೆ ಆರೋಪ ಮಾಡಿಲ್ಲ. ವಾಸ್ತವ ಸಂಗತಿ ಹೇಳಿದ್ದೇನೆ ಎಂದು ಸಿಎಂ ಸಮರ್ಥನೆ ನೀಡಿದರು. ಇದೇ ದಮ್-ತಾಕತ್ತು ಕೇಂದ್ರ ಸರಕಾರದ ಮುಂದೆ ತೋರಿಸಿ, ಇಲ್ಲಿ ಯಾಕೆ ಚೀರಾಟ ಮಾಡುತ್ತಿದ್ದೀರಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಸದಸ್ಯರಿಗೆ ತಿರುಗೇಟು ನೀಡಿದರು.
Advertisement
“ಪ್ರಾರಂಭದಲ್ಲೇ ಅನುಮಾನ-ಸಂಶಯ ಬೇಡ’ಬೆಂಗಳೂರು: ನಾಡಿನ ಆಶೋತ್ತರಗಳು ಮತ್ತು ನಿರೀಕ್ಷೆಗಳು ಹುಸಿಯಾಗದಂತೆ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಎರಡನೇ ಅವಧಿಗೆ ಸಿಎಂ ಆಗಿ ಮೊದಲ ಬಾರಿಗೆ ವಿಧಾನಪರಿಷತ್ತಿಗೆ ಬಂದ ಮುಖ್ಯಮಂತ್ರಿಯವರನ್ನು ಸಭಾಪತಿ ಹಾಗೂ ವಿಪಕ್ಷಗಳ ಸದಸ್ಯರು ಅಭಿನಂದನೆ ಸಲ್ಲಿಸಿದರು. ಇದಕ್ಕೆ ಕೃತಜ್ಞತೆ ಸಲ್ಲಿಸಿದ ಸಿದ್ದರಾಮಯ್ಯನವರು, ವಿಪಕ್ಷಗಳ ಅನಿಸಿಕೆ ಹಾಗೂ ಜನರ ನಿರೀಕ್ಷೆಗಳು ಹುಸಿಯಾಗದಂತೆ ನೋಡಿಕೊಳ್ಳುತ್ತೇವೆ. ಸರಕಾರ ಬಂದ ಪ್ರಾರಂಭದಲ್ಲೇ ಅನುಮಾನ-ಸಂಶಯಗಳನ್ನು ಇಟ್ಟುಕೊಳ್ಳುವ ಆವಶ್ಯಕತೆ ಇಲ್ಲ ಎಂದರು. ಜನರ ಆಶೀರ್ವಾದ, ಶಾಸಕರು ಮತ್ತು ಪಕ್ಷದ ಹೈಕಮಾಂಡ್‌ನ ಬೆಂಬಲದಿಂದ ನಾನು ಸಿಎಂ ಆಗುವ ಅವಕಾಶ ಸಿಕ್ಕಿದೆ. ಪಕ್ಷಾತೀತವಾಗಿ ಸದನಕ್ಕೆ ನನ್ನನ್ನು ಸ್ವಾಗತಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಆಡಳಿತ ಹಾಗೂ ವಿಪಕ್ಷ ರಥದ ಎರಡು ಚಕ್ರಗಳು ಇದ್ದಂತೆ. ಎರಡೂ ಚಕ್ರಗಳು ಚಲಿಸಿದಾಗ ಮಾತ್ರ ಆಡಳಿತದ ರಥ ಮುಂದೆ ಸಾಗುತ್ತದೆ. ಆಡಳಿತ ನಡೆಸುವಾಗ ತಪ್ಪುಗಳು ಆಗುವುದಿಲ್ಲ ಎಂದು ಹೇಳುವುದಿಲ್ಲ. ಆದರೆ, ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದಿಲ್ಲ. ವಿಪಕ್ಷಗಳು ಸರಕಾರದ ತಪ್ಪುಗಳನ್ನು ತೋರಿಸಬೇಕು. ಆದರೆ, ರಾಜಕೀಯಕ್ಕಾಗಿ ವಿರೋಧ ಮಾಡುವುದು, ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಹೇಳಿದರು. ಸಭಾಪತಿ ಬಸವರಾಜ ಹೊರಟ್ಟಿ, ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ, ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಕಾಂಗ್ರೆಸ್ ಸದಸ್ಯ ಎಂ. ನಾಗರಾಜು ಮುಖ್ಯಮಂತ್ರಿಯವರ ಕುರಿತು ಅಭಿನಂದನ ಮಾತುಗಳನ್ನಾಡಿದರು. ಸರಕಾರಿ ನೌಕರರ ವೇತನಕ್ಕೆ ಕ್ರಮ: ಸಿಎಂ
ಬೆಂಗಳೂರು: ರಾಜ್ಯ ಸರಕಾರಿ ನೌಕರರಿಗೆ ಈಗಾಗಲೇ ಶೇ. 17ರಷ್ಟು ಮಧ್ಯಾಂತರ ಪರಿಹಾರ ಕೊಡಲಾಗಿದೆ. ಈ ಮಧ್ಯೆ 7ನೇ ವೇತನ ಆಯೋಗ 6 ತಿಂಗಳು ಕಾಲಾವಕಾಶ ಕೇಳಿದೆ. ಆಯೋಗದ ಅಂತಿಮ ವರದಿ ಆಧರಿಸಿ ಸರಕಾರಿ ನೌಕರರ ವೇತನ-ಭತ್ತೆ ಪರಿಷ್ಕರಣೆಗೆ ಸರಕಾರದ ಆರ್ಥಿಕ ಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗು ವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಪ್ರಶ್ನೋತ್ತರ ಕಲಾಪದ ವೇಳೆ ಈ ಮಾಹಿತಿ ನೀಡಿದ ಸಿಎಂ, ಕೇಂದ್ರ ಸರಕಾರದ ನಿಯಮಗಳು ಮತ್ತು ವೇತನ ಆಯೋಗಗಳ ಶಿಫಾರಸುಗಳು ರಾಜ್ಯ ಸರಕಾರಿ ನೌಕರರಿಗೆ ಅನ್ವಯಿಸುವುದಿಲ್ಲ. ಕೇಂದ್ರ ಸರಕಾರದ ಹುದ್ದೆಗಳ ಸ್ವರೂಪ, ಸೇವಾ ನಿಬಂಧನೆಗಳು ಮತ್ತು ರಾಜ್ಯ ಸರಕಾರ ಹುದ್ದೆಗಳ ಸ್ವರೂಪ, ಸೇವಾ ನಿಬಂಧನೆಗಳು ಪರಸ್ಪರ ಭಿನ್ನವಾಗಿ ಇರುತ್ತವೆ. ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಸರಕಾರಿ ನೌಕರರ ಸರಿಸಮಾನ ವೇತನಕ್ಕೆ ಪರಿಗಣಿಸಲು ಆಗುವುದಿಲ್ಲ ಎಂದು ಮುಖ್ಯ ಮಂತ್ರಿಯವರು ಹೇಳಿದರು.