Advertisement
ವರಿಷ್ಠರ ಸೂಚನೆ ಬಗ್ಗೆ ಪಕ್ಷದ ವೇದಿಕೆಯಲ್ಲೂ ಚರ್ಚೆಯಾಗಿದ್ದು, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್.ಅಶೋಕ, ಕೋಟ ಶ್ರೀನಿವಾಸ ಪೂಜಾರಿ, ನಾಲ್ವರು ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಸಹಿತ ಎಲ್ಲ ಮುಂಚೂಣಿ ನಾಯಕರಿಗೂ ರಾಜ್ಯ ಪ್ರವಾಸ ನಡೆಸಿ ಚುನಾವಣೆ ಹೊಸ್ತಿಲಲ್ಲಿ ಸರಕಾರದ ವೈಫಲ್ಯವನ್ನು ಬಿಚ್ಚಿಡುವಂತೆ ನಿರ್ದೇಶಿಸಲಾಗಿದೆ.ಈ ಹಿನ್ನೆಲೆಯಲ್ಲಿ ಪ್ರತ್ಯೇಕ ತಂಡವಾಗಿ ಬಿಜೆಪಿ ನಾಯಕರು ಸಂಕ್ರಾಂತಿ ಮರುದಿನವೇ ಪ್ರವಾಸ ಪ್ರಾರಂಭಿಸಲಿದ್ದಾರೆ. ಯಾರ್ಯಾರು ಯಾವ ಜಿಲ್ಲೆಗೆ ಭೇಟಿ ನೀಡಬೇಕೆಂಬ ಬಗ್ಗೆ ರಾಜ್ಯ ಕಚೇರಿಯಿಂದ ಪಟ್ಟಿ ಮಾಡಲಾಗುತ್ತಿದ್ದು, ಬರ, ಅನುದಾನ ಕೊರತೆ, ಗ್ಯಾರಂಟಿ ವೈಫಲ್ಯ, ಕಾನೂನು-ಸುವ್ಯವಸ್ಥೆ ಇತ್ಯಾದಿ ಆಡಳಿತ್ಮಾಕ ವಿಚಾರಗಳನ್ನು ಜನರಿಗೆ ತಲುಪಿಸಲು ಬಿಜೆಪಿ ನಿರ್ಧರಿಸಿದೆ.
ಕೇಂದ್ರ ಸರಕಾರದ ವಿಕಸಿತ ಭಾರತ ಕಾರ್ಯಕ್ರಮಕ್ಕೆ ರಾಜ್ಯ ಸರಕಾರದಿಂದ ಅಸಹಕಾರ ಲಭಿಸುತ್ತಿರುವುದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ರಾಜ್ಯ ಪ್ರವಾಸ ಸಂದರ್ಭದಲ್ಲಿ ಪ್ರತಿದಿನ ಸಾಯಂಕಾಲ ವಿಕಸಿತ ಭಾರತ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಹೀಗಾಗಿ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಧಿಕಾರಗಳನ್ನು ನಿಯೋಜಿಸುವುದು ಸರಕಾರಕ್ಕೆ ಅನಿವಾರ್ಯವಾಗಿದೆ. ಈ ಸಂಬಂಧ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ರಾಜ್ಯ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಆಕ್ಷೇಪ ಸಲ್ಲಿಸಿದ್ದಾರೆ. ರಾಜ್ಯ ಸರಕಾರದ ಈ ನೀತಿಗೆ ತಿರುಗೇಟು ನೀಡಲು ಎಲ್ಲ ಜಿಲ್ಲೆಗಳಿಗೆ ಕೇಂದ್ರ ಸಚಿವರು, ವಿಪಕ್ಷ ನಾಯಕರು ಹಾಗೂ ಸಂಸದರು ಭೇಟಿ ನೀಡಬೇಕು. ಆಗ ಶಿಷ್ಟಾಚಾರ ಪಾಲನೆಗೆ ಅಧಿಕಾರಿಗಳ ನಿಯೋಜನೆ ಅನಿವಾರ್ಯವಾಗಲಿದೆ ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದ ಈ ಯೋಜನೆಗಾಗಿ ಬಿಜೆಪಿ-ಕಾಂಗ್ರೆಸ್ ಮಧ್ಯೆ “ಜಗಳ್ಬಂದಿ’ ನಡೆಯುವುದು ದಟ್ಟವಾಗಿದೆ.