ಬೆಂಗಳೂರು: ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಬಂದೂಕು ಹಾಗೂ ಲಾಠಿಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪ್ರತಿಭಟನೆಯ ಹಕ್ಕನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಮಂಗಳೂರಿನಲ್ಲಿ ರಾಜ್ಯ ಸರ್ಕಾರವೇ ಪ್ರಾಯೋಜಿಸಿದ ಭಯೋತ್ಪಾದನೆ ಇದಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಇಬ್ಬರು ಅಮಾಯಕರು ಪೋಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಅನೇಕ ಜನರು ಗಾಯಗೊಂಡಿದ್ದಾರೆ. ದೇಶ ಹೊತ್ತಿ ಉರಿಯುತ್ತಿದೆ. ಪ್ರಧಾನಿ ಮೋದಿ, ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಗೆ ತಂದಿದ್ದಾರೆ ಎಂದರು.
ಗೋಲಿಬಾರ್‌ನಲ್ಲಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವಷ್ಟೂ ಮಾನವೀಯತೆ ಈ ಸರ್ಕಾರಕ್ಕೆ ಇಲ್ಲ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ನಾಗರಿಕರ ನೋಂದಣಿ ಹಾಗೂ ರಾಷ್ಟ್ರೀಯ ಪೌರತ್ವ ಕಾಯಿದೆ ಜಾರಿ ನೆಪದಲ್ಲಿ ಧರ್ಮ ಧರ್ಮಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಿದ್ದಾರೆ.ದೆಹಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಶಕ್ತಿ ಕುಂದಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಸಹಾಯಕ ಹೆಣಗಳ ಮೇಲೆ ಅಧಿಕಾರ ನಡೆಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದು ನಡೆಯುವುದಿಲ್ಲ ಎಂದು ಎಚ್ಚರಿಸಿದರು.
ಮಂಗಳೂರಿನಲ್ಲಿ ರಾಜ್ಯ ಸರ್ಕಾರವೇ ಪ್ರಾಯೋಜಿಸಿರುವ ಭಯೋತ್ಪಾದನೆ ಇದಾಗಿದೆ. ಪೋಲೀಸರೇ “ಯಾಕೆ ಯಾರು ಸತ್ತಿಲ್ಲ’ ಎಂದು ಮಾತನಾಡುತ್ತಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ತಮ್ಮ ಮನಸಿಗೆ ಬಂದಂತೆ ಕಾನೂನು ತಿದ್ದುಪಡಿ ಮಾಡುತ್ತಿದ್ದಾರೆ. ಯಾವ ಕಾರಣಕ್ಕೆ ಈ ಕಾಯಿದೆ ಜಾರಿಗೆ ತರುತ್ತಿದ್ದಾರೆ ಎಂದು ಜನರಿಗೆ ಸ್ಪಷ್ಟ ಮಾಹಿತಿ ನೀಡದೆ ಒಂದು ಸಮುದಾಯವನ್ನು ಹೊರಗಿಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಷ್ಟ್ರೀಯ ಪೌರತ್ವ ನೋಂದಣಿ ಅಭಿಯಾನ ಆರಂಭ ಮಾಡುತ್ತಿರುವುದು ಈ ಕಿಚ್ಚು ಹೆಚ್ಚಾಗಲು ಕಾರಣವಾಗಿದೆ. ನಮ್ಮ ರಾಷ್ಟ್ರೀಯತೆ ಇವರಿಗೆ ಸಾಬೀತು ಮಾಡಬೇಕಿಲ್ಲ. ನಮ್ಮ ಪೂರ್ವಜರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಆಸ್ಸಾಂನಲ್ಲಿ ಎನ್‌ಆರ್‌ಸಿ ಹೇಗೆ ನಡೆಯಿತು ಎಂದು ಎಲ್ಲರಿಗೂ ಗೊತ್ತಿದೆ. ರಾಷ್ಟ್ರೀಯ ಪೌರತ್ವ ನೋಂದಣಿ ಮಾಡಲು ಸಾಧ್ಯವಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಬಿಜೆಪಿಯವರು ನಕಲಿ ದೇಶದ ಭಕ್ತರು. ಈ ದೇಶದ ಎಲ್ಲ ಧರ್ಮಿಯರಿಗೆ ಬದುಕುವ ಹಕ್ಕಿದೆ. ಬಿಜೆಪಿಯವರು ಬದುಕುವ ಹಕ್ಕನ್ನೆ ಕಿತ್ತುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಜನರಲ್ಲಿ ಭಯ ಹುಟ್ಟಿಸಲು ಪೌರತ್ವ ಕಾಯ್ದೆ ತಿದ್ದುಪಡಿ ಮಾಡಿದ್ದಾರೆ. ಈಗಲಾದರೂ ಪೌರತ್ವ ಕಾಯ್ದೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಕಾಲಚಕ್ರದ ತಿರುಗುತ್ತದೆ ಇವರ ಆಡಳಿತ ಬಹಳ ದಿನ ನಡೆಯುವುದಿಲ್ಲ. ಸಾರ್ವಜನಿಕರು ಶಾಂತಿ ಯುತವಾಗಿ ಪ್ರತಿಭಟನೆ ನಡೆಸಲಿ. ಮಂಗಳೂರಿನಲ್ಲಿ ಕಾಂಗ್ರೆಸ್ ನಾಯಕರನ್ನು ಬಂಧಿಸುವ ಮೂಲಕ ಪ್ರತಿಪಕ್ಷವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಸಾವಿಗೀಡಾದವರ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟವರನ್ನು ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳೂರಿಗೆ ಹೋಗಲು ವಿಶೇಷ ವಿಮಾನವನ್ನು ರದ್ದು ಪಡಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಹೋಗುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು ಶನಿವಾರ ಮಂಗಳೂರಿಗೆ ತೆರಳಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳುವುದಾಗಿ ತಿಳಿಸಿದರು.