Advertisement

Congress ಸರ್ಕಾರದಿಂದ ರಾಜ್ಯ ಬರ್ಬಾದ್‌ ; ಬಿಜೆಪಿ ಟೀಕೆ

06:26 PM Jul 02, 2024 | Team Udayavani |

ಬೆಂಗಳೂರು:  ಇಂಧನ ಇಲಾಖೆಯು ಆರ್ಥಿಕ ಮುಗ್ಗಟ್ಟು ಕುರಿತು ಬರೆದ ಪತ್ರ ಉಲ್ಲೇಖಿಸಿ ಮಂಗಳವಾರ ರಾಜ್ಯ ಬಿಜೆಪಿ  ಘಟಕ ತನ್ನ ‘ಎಕ್ಸ್’ಖಾತೆಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ದ ಕಿಡಿಕಾರಿದೆ.

Advertisement

‘ಕರ್ನಾಟಕವನ್ನು ಎಲ್ಲಾ ವಲಯಗಳಲ್ಲೂ ಬರ್ಬಾದ್‌ ಮಾಡುವುದೇ ಕಾಂಗ್ರೆಸ್ ಸರ್ಕಾರದ ಅಸಲಿ ಕರ್ನಾಟಕ ಮಾಡೆಲ್, ಈಗಾಗಲೇ ಸುಭಿಕ್ಷವಾಗಿದ್ದ ಕರ್ನಾಟಕವನ್ನು ಒಂದು ವರ್ಷದಲ್ಲಿ ಹಾಳು ಮಾಡಿದ್ದು, ಇದರ ಸಂಪೂರ್ಣ ಶ್ರೇಯ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ವಾಗ್ದಾಳಿ ನಡೆಸಿದೆ.

ಜೊತೆಗೆ ‘ದೈನಂದಿನ ಖರ್ಚಿಗೂ ಹಣವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿ, ಹೆಚ್ಚಿನ ಸಾಲ ಪಡೆಯಲು ಅನುಮತಿ ನೀಡಿ, ಇಲ್ಲವೇ ಸರ್ಕಾರದಿಂದ ಬರಬೇಕಿರುವ ಬಾಕಿ ಪಾವತಿಸಿ ಎಂದು ಪತ್ರ ಬರೆದಿರುವುದು, ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಎಷ್ಟರ ಮಟ್ಟಿಗೆ ಹದಗೆಡಿಸಿದೆ ಎಂಬುದರ ಸ್ಪಷ್ಟ ನಿದರ್ಶನವಾಗಿದೆ. ಸಿಎಂ ಸಿದ್ದರಾಮಯ್ಯ ಅವರೇ, ಕರ್ನಾಟಕ ಬರ್ಬಾದ್‌ ಆಗಿದೆ ಎಂಬುದು ನಿಮ್ಮ ಇಂಧನ ಇಲಾಖೆ ಬರೆದ ಪತ್ರದಿಂದಲೇ ಕೊನೆಗೂ ಋಜುವಾತಾಗಿದೆ. ಸಿದ್ದರಾಮಯ್ಯ, ಕರ್ನಾಟಕ ಕಂಡ ಅತ್ಯಂತ ದುರ್ಬಲ ಸಿಎಂ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿಯ ಅಗತ್ಯವಿದೆಯೇ ಎಂದು ಬಿಜೆಪಿ ಘಟಕ ಕಿಡಿಕಾರಿದೆ.


ಬಾಕಿ ಪಾವತಿಸಿ ಎಂದು ಪತ್ರ

ವಿದ್ಯುತ್​ ಸರಬರಾಜು ಕಂಪನಿಗಳು ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ವಿದ್ಯುತ್​ ಖರೀದಿ ಶುಲ್ಕವನ್ನು ಪಾವತಿಸಲು ಹಾಗೂ ಕಂಪನಿಯ ಇತರೆ ವೆಚ್ಚಗಳನ್ನು ಭರಿಸಲು ಕಷ್ಟಕರವಾಗಿದ್ದು, ಬಾಕಿ ಪಾವತಿಸಿ ಎಂದು ಸರ್ಕಾರಕ್ಕೆ ಪತ್ರ ಬರೆದಿದೆ.

Advertisement

ಡೆಂಘೀ ನಿಯಂತ್ರಣದಲ್ಲಿ ಸರ್ಕಾರ ವಿಫಲ
ರಾಜ್ಯದಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದರೂ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಅದರ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಟೀಕಿಸಿದೆ.

“ಡೆಂಘೀಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಎಚ್ಚರವಹಿಸಬೇಕಿದ್ದ ಆರೋಗ್ಯ ಇಲಾಖೆ ಸಿದ್ದರಾಮಯ್ಯರನ್ನೂ ಮೀರಿಸುವಂತೆ ನಿದ್ದೆಗೆ ಶರಣಾಗಿದ್ದೇ ಡೆಂಘೀ ರಾಜ್ಯದೆಲ್ಲೆಡೆ ಹಬ್ಬಲು ಪ್ರಮುಖ ಕಾರಣ. ಜವಾಬ್ದಾರಿಯುಳ್ಳ ಮಗನಿದ್ದರೆ ಮನೆ ಚೆನ್ನಾಗಿರುತ್ತದೆ ಎಂಬ ಮಾತಿದೆ, ಆದರೆ ವಿಪರ್ಯಾಸವೆಂದರೆ ಕರ್ನಾಟಕದ ಘನತೆವೆತ್ತ ಸರ್ಕಾರದಲ್ಲಿ ಬಹುತೇಕ ಸಚಿವರೆಲ್ಲರೂ ಬೇಜವಾಬ್ದಾರಿಗಳು, ಅದರಲ್ಲಿಯೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೊಣೆ ಹೊತ್ತ ಸಚಿವ ದಿನೇಶ್‌ ಗುಂಡೂರಾವ್‌ ಅದ್ಯಾವ ದೇಶದಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎಂಬುದು ತಿಳಿಯದು” ಎಂದು ಎಕ್ಸ್‌ ಖಾತೆಯಲ್ಲಿ ವ್ಯಂಗ್ಯವಾಡಿದೆ.

ಕಾಂಗ್ರೆಸ್‌ ಸರ್ಕಾರ ಕರ್ನಾಟಕಕ್ಕೆ ವಕ್ಕರಿಸಿದ ದಿನದಿಂದ ಇಲ್ಲಿಯವರೆಗೂ ಕಲುಷಿತ ನೀರು ಸೇವಿಸಿ ಅಸುನೀಗಿದ ಹಾಗೂ ಅಸ್ವಸ್ಥಗೊಂಡವರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಕನ್ನಡಿಗರಿಗೆ ಶುದ್ಧ ಕುಡಿಯುವ ನೀರನ್ನೂ ನೀಡಲಾಗದ ಅಯೋಗ್ಯ ಸರ್ಕಾರ ಎಂಬ ಕುಖ್ಯಾತಿ ಕಾಂಗ್ರೆಸ್‌ನದ್ದು ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next