Advertisement

BJP: ಬಿಜೆಪಿಗೆ ಮತ್ತೆ ರಾಜ್ಯ ಸಂಘಟನಾ ಕಾರ್ಯದರ್ಶಿ ನೇಮಕ?

12:46 PM Sep 15, 2024 | Team Udayavani |

ಬೆಂಗಳೂರು: ಪಕ್ಷದಲ್ಲಿ ಬಣ ರಾಜಕಾರಣ ಮಡುಗಟ್ಟುತ್ತಿರುವ ಹಿನ್ನೆಲೆಯಲ್ಲಿ ನಾಯಕರಿಗೆ ಮೂಗುದಾರ ಹಾಕಿ ಸಂಘಟನೆಯನ್ನು ಹಿಡಿತಕ್ಕೆ ತರುವುದಕ್ಕಾಗಿ ರಾಜ್ಯ ಬಿಜೆಪಿಗೆ ಮತ್ತೆ ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನು ನಿಯೋಜನೆ ಮಾಡುವುದಕ್ಕೆ ಆರ್‌ಎಸ್‌ ಎಸ್‌ ಮುಖಂಡರು ಚಿಂತನೆ ನಡೆಸಿದ್ದಾರೆ.

Advertisement

ಈ ಮೂಲಕ ಹೊಯ್ದಾಟವನ್ನು ನಿಯಂತ್ರಣಕ್ಕೆ ತರುವುದಕ್ಕೆ ಸಂಘ ನಿರ್ಧರಿಸಿದೆ. ಒಂದು ವರ್ಷದ ಹಿಂದಷ್ಟೆ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಜಿ.ವಿ. ರಾಜೇಶ್‌ ಅವರನ್ನು ಸಂಘ ಪರಿವಾರ “ನಿಗೂಢ’ ಎಂಬಂತೆ ವಾಪಸ್‌ ಕರೆಸಿಕೊಂಡು ಸಾಮರಸ್ಯದ ಜವಾಬ್ದಾರಿ ನೀಡಿತ್ತು. ಸಂಘದ ಎಲ್ಲ ವಿಭಾಗದಲ್ಲಿ ಮಾಡಿದ ಬದಲಾವಣೆಯ ಜತೆಯಲ್ಲಿ ರಾಜೇಶ್‌ ಕೂಡಾ ಬಿಜೆಪಿಯಿಂದ ನಿರ್ಗಮಿಸಿದ್ದರು. ಅವರನ್ನು ನಿಯೋಜಿಸಿದಷ್ಟೇ ವೇಗವಾಗಿ ವಾಪಸ್‌ ಕರೆಸಿ ಕೊಂಡಿ ದ್ದೇಕೆ? ಎಂಬುದು ಬಿಜೆಪಿಯಲ್ಲಿ ಬಗೆಹರಿಯದ ರಹಸ್ಯವಾಗಿಯೇ ಉಳಿದಿದೆ.

ಇದರ ಜತೆಗೆ ಪಕ್ಷದ ಸಂಘಟನಾತ್ಮಕ ನೆಲೆಯಲ್ಲಿ ಆಯಕಟ್ಟಿನದು ಎಂದು ಪರಿ ಗಣಿಸಲ್ಪಟ್ಟ ವಿಭಾಗೀಯ ಕಾರ್ಯದರ್ಶಿ ಹುದ್ದೆಯನ್ನೂ ಖಾಲಿ ಬಿಡಲಾಗಿದ್ದು, ಈಗ ಆ ಎಲ್ಲ ಸ್ಥಾನ ಗಳನ್ನು ಭರ್ತಿ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ.

ಮುನ್ಸೂಚನೆ ಕೊಟ್ಟ ಸಂಘ: ಬಿಜೆಪಿ ಉನ್ನತ ಮೂಲಗಳ ಪ್ರಕಾರ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆರ್‌ಎಸ್‌ಎಸ್‌ ಪ್ರಚಾರಕರನ್ನು ಸದ್ಯಕ್ಕೆ ನಿಯೋಜನೆ ಮಾಡುವುದು ಬೇಡ ಎಂಬ ನಿಲುವನ್ನು ಸಂಘದ ಹಿರಿಯರು ಈ ಹಿಂದೆ ತೆಗೆದುಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಈ ಹುದ್ದೆಯನ್ನು ಇಷ್ಟು ದಿನಗಳ ಕಾಲ ಖಾಲಿ ಇಟ್ಟಿರಲಿಲ್ಲ. ಆದರೆ, ಪಕ್ಷದ ನಾಯಕರ ಮಧ್ಯೆ ಸೃಷ್ಟಿಯಾಗಿರುವ ಭಿನ್ನಮತ ದಿನೇ ದಿನೆ ಹೆಚ್ಚುತ್ತಿರುವುದರಿಂದ ದಿನನಿತ್ಯದ ಕಾರ್ಯ ಚಟುವಟಿಕೆ ಮೇಲೆ ನಿಗಾ ಇಡುವುದಕ್ಕೆ ಒಬ್ಬ ಹಿರಿಯರ ಅಗತ್ಯವಿದೆ ಎಂಬ ನಿಲುವಿಗೆ ಸಂಘದ ಹಿರಿಯರು ಬಂದಿದ್ದಾರೆ. ಜತೆಗೆ ಸಂಘಟನಾತ್ಮಕ ಚಟುವಟಿಕೆಯೂ ಬಿಜೆಪಿಯಲ್ಲಿ ಕುಸಿತ ಕಾಣುತ್ತಿದೆ ಎಂದು ಆತಂಕಗೊಂಡಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ 2 ದಿನಗಳ ಹಿಂದೆ ನಡೆದ ಸಭೆಯಲ್ಲಿ ಸಂಘದ ಹಿರಿಯರು ಬೇಸರವನ್ನೂ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

“ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಇಲ್ಲದೆ ಹೋದರೂ ಪಕ್ಷ ಮುಂದೆ ಬರುತ್ತದೆ ಎಂಬ ಅತಿಯಾದ ವಿಶ್ವಾಸವನ್ನು ನಾಯಕರು ಮೈಗೂಡಿಸಿಕೊಂಡಿದ್ದಾರೆ. ಇಂತಹ ಪ್ರವೃತ್ತಿ ಯಿಂದಲೇ ಪಕ್ಷ ಹಾಗೂ ಸಂಘಟನೆಯ ಮಧ್ಯೆ ಬಿರುಕು ಕಾಣಿಸಿಕೊಂಡಿದೆ. ಇದಕ್ಕೆ ಇಲ್ಲಿಯೇ ಬ್ರೇಕ್‌ ಹಾಕೋಣ’ ಎಂದು ಹೇಳುವ ಮೂಲಕ ಮತ್ತೆ ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನು ನಿಯೋಜನೆ ಮಾಡುವ ಮುನ್ಸೂಚನೆ ನೀಡಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

Advertisement

ಅಧ್ಯಕ್ಷರಿಗೆ ಬೇಡವಾಗಿತ್ತೇ ಸಂಘಟನಾ ಕಾರ್ಯದರ್ಶಿ?: ಸಂಘದ ಅಲಿಖೀತ ನಿಯಮದ ಪ್ರಕಾರ ಅವಧಿ ಮುಕ್ತಾಯಕ್ಕೆ ಮುನ್ನ ರಾಜ್ಯಾಧ್ಯಕ್ಷರ ಬದಲಾವಣೆ ಅಸಾಧ್ಯ. ಆದರೆ, ಯತ್ನಾಳ್‌ ಸೇರಿದಂತೆ ಹಿರಿಯರು ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ 2 ಬಣದ ಮಧ್ಯೆ ಸಮತೋಲನ ತರುವುದಕ್ಕಾಗಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಭರ್ತಿ ಮಾಡುವುದಕ್ಕೆ ಸಂಘ ಮುಂದಾಗಿದೆ. ಸಂಘಟನಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಯಾರನ್ನೂ ನೇಮಕ ಮಾಡಬಾರದೆಂಬ ನಿಲುವನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಹೊಂದಿದ್ದಾರೆ. ಒಂದು ಮನೆಯಲ್ಲಿ 2 ಅಧಿಕಾರ ಕೇಂದ್ರಗಳಿದ್ದರೆ ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲ ಸೃಷ್ಟಿಯಾಗುತ್ತದೆ. ರಾಜ್ಯಾಧ್ಯಕ್ಷರ ಯಶಸ್ಸಿನಲ್ಲಿ ಸಂಘಟನಾ ಕಾರ್ಯದರ್ಶಿ “ದಾಯಭಾಗ’ ಬೇಡುತ್ತಾನೆಂಬ ಕಾರಣಕ್ಕೆ ಈ ಹುದ್ದೆ ಭರ್ತಿ ಮಾಡುವುದು ಬೇಡ ಎಂಬ ನಿಲುವು ಅವರದ್ದಾಗಿತ್ತು ಎನ್ನಲಾಗಿದೆ.

  ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.