Advertisement

ಕಳ್ಳಗಿವಿ ಮೇಲೆ ರಾಜ್ಯ, ಕೇಂದ್ರ ಗುದ್ದಾಟ ಶುರು 

07:58 AM Sep 20, 2017 | |

ಬೆಂಗಳೂರು: ರಾಜ್ಯದಲ್ಲಿ ಮತ್ತೆ ದೂರವಾಣಿ ಕದ್ದಾಲಿಕೆ ರಾಜಕೀಯ ಆರಂಭವಾಗಿದೆ. ರಾಜ್ಯ ಸರ್ಕಾರವೇ ಪ್ರತಿಪಕ್ಷ ನಾಯಕರ ದೂರವಾಣಿಗಳ ಕದ್ದಾಲಿಕೆ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ರಾಮಲಿಂಗಾರೆಡ್ಡಿ, ಕೇಂದ್ರದಲ್ಲಿನ ಬಿಜೆಪಿ ಸರ್ಕಾರವೇ ಕಳ್ಳಗಿವಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. 

Advertisement

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ  ರ್‌.ಅಶೋಕ್‌, ಸಿಬಿಐ ಅಥವಾ ನ್ಯಾಯಾಂಗ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ. ಸೋಮವಾರವಷ್ಟೇ ಬೀದರ್‌ನಲ್ಲಿ ಮಾತನಾಡಿದ್ದ ಬಿಜೆಪಿ ನಾಯಕ ಆರ್‌ ಅಶೋಕ್‌, ರಾಜ್ಯ ಸರ್ಕಾರ ಪ್ರತಿಪಕ್ಷಗಳ 162 ಮುಖಂಡರ ದೂರವಾಣಿ ಕದ್ದಾಲಿಕೆ ಮಾಡಿಸುತ್ತಿದೆ ಎಂದು ಆಪಾದಿಸಿ ದ್ದರು. ಇದಕ್ಕೆ ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಮಲಿಂಗಾ ರೆಡ್ಡಿ, ದೂರವಾಣಿ ಕದ್ದಾಲಿಕೆ ಮಾಡುತ್ತಿರುವುದು ಕೇಂದ್ರ ಸರ್ಕಾರವೇ ಹೊರತು, ರಾಜ್ಯ ಸರ್ಕಾರವಲ್ಲ. ನಾವು ಯಾವತ್ತೂ ಆ ಕೆಲಸ ಮಾಡಿಲ್ಲ. ಆದರೆ ಇದು ರಾಜ್ಯದ ಬಿಜೆಪಿ ನಾಯಕರಿಗೆ ಗೊತ್ತಿಲ್ಲ ಎಂದು ತಿರುಗೇಟು ನೀಡಿದರು. 

ಇನ್ನೊಂದೆಡೆ ಗೃಹ ಸಚಿವ ರಾಮಲಿಂಗಾರೆಡ್ಡಿ ಕೂಡ ಬಿಜೆಪಿ ವಿರುದ್ಧ ಕಿಡಿ ಕಾರಿದ್ದು, ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರದ ಸಚಿವರು ಮತ್ತು ಕಾಂಗ್ರೆಸ್‌ ಮುಖಂಡರು ಸೇರಿ 35 ಜನರ ಫೋನ್‌ ಕದ್ದಾಲಿಕೆ ಮಾಡುತ್ತಿದೆ. ಐಟಿ, ಇಡಿ, ಸಿಬಿಐ, ರಿಸರ್ವ್‌ ಬ್ಯಾಂಕ್‌ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಸಿಬಿಐ ಅಥವಾ ನ್ಯಾಯಾಂಗ ತನಿಖೆಯಾಗಲಿ: ಇತ್ತ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಹೇಳಿಕೆಗೆ ತಿರುಗೇಟು ನೀಡಿದ ಆರ್‌.ಅಶೋಕ್‌, ರಾಜ್ಯ ಸರ್ಕಾರ ಹಿಂದೆ ಪ್ರತಿಪಕ್ಷಗಳ 52 ಮುಖಂಡರ ದೂರವಾಣಿ ಕದ್ದಾಲಿಕೆ ಮಾಡುತ್ತಿತ್ತು. ಈಗ ಅವರ ಗನ್‌ಮ್ಯಾನ್‌, ಆಪ್ತ ಸಹಾಯಕರು ಸೇರಿದಂತೆ 162 ಮಂದಿಯ ದೂರವಾಣಿ ಕದ್ದಾಲಿಕೆ ಮಾಡುತ್ತಿದೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಕೇಂದ್ರ ಸರ್ಕಾರದ ಮೇಲೆ ವಿನಾ ಆರೋಪ ಮಾಡುವ ಬದಲು ಈ ಕುರಿತು ಸಿಬಿಐ ತನಿಖೆಗೆ ಆದೇಶಿಸಲಿ. ಆಗ ಯಾರು ಕದ್ದಾಲಿಕೆ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಇಲ್ಲವಾದಲ್ಲಿ ನ್ಯಾಯಾಂಗ ತನಿಖೆಯನ್ನಾದರೂ ಮಾಡಿಸಲಿ ಎಂದು ಒತ್ತಾಯಿಸಿದರು.

ರಾಜ್ಯಪಾಲರಿಗೆ ದೂರು ಕೊಟ್ಟಿದ್ದ ಬಿಜೆಪಿ: ಕಾಂಗ್ರೆಸ್‌ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷ ಮುಖಂಡರ ದೂರ ವಾಣಿ ಕದ್ದಾಲಿಕೆ ಮಾಡುತ್ತಿದ್ದಾರೆ ಎಂಬ ಬಿಜೆಪಿ ಆರೋಪ ಇದೇನೂ ಹೊಸತಲ್ಲ. ಈ ಸರ್ಕಾರ ಗೃಹ ಸಚಿವರ ರಾಜ ಕೀಯ ಸಲಹೆಗಾರ ಕೆಂಪಯ್ಯ ಮತ್ತು
ಐಪಿಎಸ್‌ ಅಧಿಕಾರಿ ಎಂ.ಎನ್‌.ರೆಡ್ಡಿ ನೇತೃತ್ವದ ತಂಡ ವನ್ನು ಬಳಸಿಕೊಂಡು ಪ್ರತಿಪಕ್ಷ ಮುಖಂಡರ ದೂರವಾಣಿ ಕದ್ದಾಲಿಕೆ ಮಾಡುತ್ತಿದೆ ಎಂದು ಬಿಜೆಪಿ ಆಗಸ್ಟ್‌ 22ರಂದೇ ರಾಜ್ಯಪಾಲರಿಗೆ ದೂರು ನೀಡಿತ್ತು. ಕೆಂಪಯ್ಯ ಮತ್ತು ಎಂ.ಎನ್‌.ರೆಡ್ಡಿ ಅವರನ್ನೊಳಗೊಂಡ ತಂಡ ಕಾರ್ಯತಂತ್ರವೊದನ್ನು ರೂಪಿಸಿ ಮುಖ್ಯಮಂತ್ರಿಗಳ ರಾಜಕೀಯ ವಿರೋಧಿಗಳ ದೂರವಾಣಿ ಸಂಖ್ಯೆಗಳನ್ನು ನಿರ್ವಹಣೆ ಮಾಡುತ್ತಾ, ಕದ್ದಾಲಿಕೆ ಮಾಡುತ್ತಿದೆ. ಇಂತಹ ಕಾನೂನು ಬಾಹಿರ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದ್ದರೂ ಅದಕ್ಕೆ ವ್ಯತಿರಿಕ್ತವಾಗಿ ರಾಜ್ಯ ಸರ್ಕಾರ ಪ್ರತಿಪಕ್ಷ ಮುಖಂಡರ ದೂರವಾಣಿ ಕದ್ದಾಲಿಕೆ ಮಾಡಿಸಿ ರಾಜಕೀಯ ಲಾಭ ಪಡೆದುಕೊಳ್ಳುತ್ತಿದೆ ಎಂದು ಆರೋಪಿಸಿತ್ತು. 

ರಾಮಕೃಷ್ಣ ಹೆಗಡೆ ಅಧಿಕಾರ ಕಸಿದುಕೊಂಡಿತ್ತು
ದೂರವಾಣಿ ಕದ್ದಾಲಿಕೆ ಆರೋಪ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರಿಂದ ಅಧಿಕಾರ ಕಸಿದುಕೊಂಡಿತ್ತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (1988) ಸುಬ್ರಮಣಿಯನ್‌ ಸ್ವಾಮಿ ಪತ್ರವೊಂದನ್ನು ಬಿಡುಗಡೆ ಮಾಡಿ, ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥರೊಬ್ಬರು ದೂರ ಸಂಪರ್ಕ ಇಲಾಖೆಗೆ ಕರ್ನಾಟಕದ ಹೆಸರಾಂತ ರಾಜಕಾರಣಿಗಳು ಹಾಗೂ ಉದ್ಯಮಿಗಳ ದೂರವಾಣಿ ಕರೆಗಳನ್ನು ಕ¨ªಾಲಿಸುವಂತೆ ಸೂಚಿಸಿದ್ದರು ಎಂದು ಆರೋಪಿಸಿದ್ದರು. ಇದು ಬಹು ಚರ್ಚಿತ ಹಗರಣವಾಗಿ ತಿರುವು ಪಡೆದು ರಾಮಕೃಷ್ಣ ಹೆಗಡೆ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಿತ್ತು. 

Advertisement

ದೂರವಾಣಿ ಕದ್ದಾಲಿಕೆ ಹೇಗೆ?
ರಾಜ್ಯದಲ್ಲಿ ಸಿಐಡಿ ಮತ್ತು ಗುಪ್ತಚರ ಇಲಾಖೆಗೆ ದೂರವಾಣಿ ಕದ್ದಾಲಿಕೆಗೆ ಅವಕಾಶವಿದೆ. ಅಪರೂಪದ ಪ್ರಕರಣಗಳಲ್ಲಿ ತನಿಖಾಧಿಕಾರಿಗಳಿಗೂ ಈ ಅಧಿಕಾರ ನೀಡಲಾಗುತ್ತದೆ. ಆದರೆ, ಅದಕ್ಕೆ ಗೃಹ ಇಲಾಖೆ ಕಾರ್ಯದರ್ಶಿಯವರಿಂದ ಅನುಮತಿ ಪಡೆಯಬೇಕು. ಇದಾದ ಬಳಿಕ ಯಾವ ಕಂಪನಿಯ ದೂರವಾಣಿ ಕದ್ದಾಲಿಸಲಾಗುತ್ತದೋ ಅವರ ಅನುಮತಿ ಪಡೆಯಬೇಕು. ಈ ಅನುಮತಿ ಸಿಕ್ಕಿದ ಮೇಲೆ ಸಂಬಂಧಿಸಿದ ಅಧಿಕಾರಿಯ ಕಂಪ್ಯೂಟರ್‌ಗೆ ಯಾರ ದೂರವಾಣಿ ಸಂಖ್ಯೆಯ ಕರೆಗಳನ್ನು  ದ್ದಾಲಿಸಲಾಗುತ್ತದೆಯೋ ಆ ಸಂಖ್ಯೆಯ ಸಮಾನಾಂತರ ಸಂಪರ್ಕ ಕಲ್ಪಿಸಲಾಗುತ್ತದೆ. ಆಗ ನಿರ್ದಿಷ್ಟ ಸಂಖ್ಯೆಯ ಒಳಬರುವ ಮತ್ತು ಹೊರಹೋಗುವ ಕರೆಗಳು ಆ ಕಂಪ್ಯೂಟರ್‌ನಲ್ಲಿ ದಾಖಲಾಗುತ್ತದೆ. ಇದು ಅಧಿಕೃತ ದೂರವಾಣಿ ಕದ್ದಾಲಿಕೆಯಾದರೆ, ಅನಧಿಕೃತವಾಗಿ ದೂರವಾಣಿ ಕದ್ದಾಲಿಸಲು ಹ್ಯಾಕರ್‌ಗಳ ಮೊರೆ ಹೋಗಲಾಗುತ್ತದೆ. ಕದ್ದಾಲಿಕೆ ಪ್ರಕ್ರಿಯೆ ತಾಂತ್ರಿಕವಾಗಿ ಅಷ್ಟೇನು ಕ್ಲಿಷ್ಟವಲ್ಲದ ಕಾರಣ ಸಾಕಷ್ಟು ಹ್ಯಾಕರ್‌ಗಳು ಈ ಕೆಲಸದಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ.  

Advertisement

Udayavani is now on Telegram. Click here to join our channel and stay updated with the latest news.

Next