ಬೆಳಗಾವಿ: ರಾಜ್ಯದಲ್ಲಿ ನಕಲಿ ಕಾರ್ಮಿಕರ ಕಾರ್ಡು ಮಾಡುವ ಜಾಲ ತಡೆಯಲು ವ್ಯವಸ್ಥಿತ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಅಧ್ಯಯನ ಸಂಸ್ಥೆಯಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ನಿಜವಾದ ಕಾರ್ಮಿಕರ ಬಗ್ಗೆ ಪರಿಶೀಲನೆ ನಡೆಸಿ ಬೇರೆ ರೀತಿಯಲ್ಲಿ ಕಾರ್ಮಿಕ ಕಾರ್ಡ್ ನೀಡುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ಕಾರ್ಮಿಕ ಕಾರ್ಡ್ ಗಳ ದುರುಪಯೋಗ ಆಗುವುದರಿಂದ ಅರ್ಹ ಕಾರ್ಮಿಕರಿಗೆ ಮೋಸ ಮಾಡಿದಂತೆ ಆಗುತ್ತದೆ. ಆದ್ದರಿಂದ ಕಾರ್ಮಿಕರ ಹಿತಾಸಕ್ತಿ ರಕ್ಷಣೆಗೆ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುವದು ಎಂದು ಅವರು ಹೇಳಿದರು.
ಕಾರ್ಮಿಕರಿಗೆ ಬಲ ತುಂಬುವ ನಿಟ್ಟಿನಲ್ಲಿ ಕಾರ್ಮಿಕರಿಗೆ ಭದ್ರತೆ ನೀಡುವ ಕೆಲಸ ಆಗಬೇಕಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಪರಿಹಾರ ಧನದ ರೂಪದಲ್ಲಿ ಕಾರ್ಮಿಕರಿಗೆ 5000 ರೂಪಾಯಿ ಘೋಷಣೆ ಮಾಡಿದಾಗ ಹಾವೇರಿ ಜಿಲ್ಲೆ ಒಂದರಲ್ಲಿ 30 ಸಾವಿರ ಕಾರ್ಮಿಕರು ಕಾರ್ಮಿಕ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಅದೇ ರೀತಿ ರಾಜ್ಯದ ಅನೇಕ ಕಡೆಗಳಲ್ಲಿ ನಕಲಿ ಕಾರ್ಮಿಕರು ಹುಟ್ಟಿಕೊಳ್ಳಲು ಆರಂಭಿಸಿದ್ದಾರೆ ಎಂದು ಸಚಿವರು ಹೇಳಿದರು.
ಕಾರ್ಡ್ ನವೀಕರಿಸದಿದ್ದರೂ ಪರಿಹಾರ ಧನ ನೀಡುತ್ತೇವೆ. ಆದರೆ ಪರಿಹಾರ ಧನ ಘೋಷಣೆ ಮಾಡಿದ ಬಳಿಕ ಕಾರ್ಮಿಕ ಕಾರ್ಡ್ ಮಾಡಿಸಿದವರಿಗೆ ಪರಿಹಾರ ದೊರೆಯುವದಿಲ್ಲ. ಕಾರ್ಮಿಕರ ಕಾರ್ಡ್ ನಿಜವಾದ ಕಾರ್ಮಿಕರಿಗೆ ಸಿಗಬೇಕು ಎಂಬುದೆ ಕಾರ್ಮಿಕ ಇಲಾಖೆಯ ಮೂಲ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು.
ಕಬ್ಬಿನ ಬಿಲ್ ಬಾಕಿ: ರಾಜ್ಯದಲ್ಲಿ ಈ ಬಾರಿ 10,900 ಕೋಟಿ ರೂಪಾಯಿ ಬೆಲೆಯ ಕಬ್ಬು ಬೆಳೆಯಲಾಗಿದ್ದು 10,760 ಕೋಟಿ ರೂ.ಗಳನ್ನು ರೈತರಿಗೆ ಪಾವತಿಸಲಾಗಿದೆ. ಈಗ ಕೇವಲ ಒಂದು ಪ್ರತಿಶತ ಮಾತ್ರ ಕಬ್ಬಿನ ಹಣ ಪಾವತಿಸುವುದು ಉಳಿದಿದೆ ಎಂದು ಮಾಹಿತಿ ನೀಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಇರುವ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಈ ಭಾಗದ ಹವಾಮಾನಕ್ಕೆ ಸಂಬಂಧಿಸಿದಂತೆ ಹೊಸ ಹೊಸ ತಳಿಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಸಕ್ಕರೆ ಉತ್ಪಾದನೆಯಲ್ಲಿ ಸಿಂಹಪಾಲು ಬೆಳಗಾವಿ ಜಿಲ್ಲೆ ಹೊಂದಿದೆ ಹಾಗಾಗಿ ಸಂಶೋಧನೆಗಾಗಿ ಜಾಡಶಾಹಾಪೂರದಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆಗಾಗಿ ಸ್ಥಳ ಪರಿಶೀಲನೆ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.