ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರ ಪೂರ್ವಸಿದ್ಧತೆ ಇಲ್ಲದ ಗ್ಯಾರಂಟಿ ಹೆಸರಿನಲ್ಲಿ ರಾಜ್ಯವನ್ನು ದಿವಾಳಿ ಮಾಡಿದ್ದು, ಆರ್ಥಿಕ ವಿಚಾರದಲ್ಲಿ ಹತಾಶರಾಗಿ ಈಗ ಚೊಂಬು ತೋರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಕಳೆದ ಹತ್ತು ವರ್ಷಗಳ ಎನ್ ಡಿಎ ಆಡಳಿತದಲ್ಲಿ ಸಾಕಷ್ಟು ಬದ ಲಾವಣೆ ಆಗಿದೆ. ವಿಪತ್ತು ನಿರ್ವಹಣೆ ಮಾನದಂಡ ಬದಲಾಗಿದೆ ಎಂದರು.
ಕಾಂಗ್ರೆಸ್‌ನವರು ಕೇವಲ ಆರೋಪ ಮಾಡುವ ಬದಲು ಯುಪಿಎ ಅವಧಿ ಹಾಗೂ ಎನ್‌ಡಿಎ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಅನುದಾನ ಹಾಗೂ ತೆರಿಗೆ ಪಾಲಿನ ಹಣ ಬಂದಿದೆ ಎಂದು ಹೋಲಿಸಿ ನೋಡಲಿ. 2004-2014ರ ಯುಪಿಎ ಅವಧಿಯಲ್ಲಿ 81,795 ಕೋಟಿ ರೂ. ತೆರಿಗೆ ಪಾಲಿನ ಹಣ ಬಂದಿದೆ. 2014-2024 ರ ಎನ್‌ಡಿಎ ಅವಧಿಯಲ್ಲಿ 2.82 ಲಕ್ಷ ಕೋಟಿ ರೂ. ರಾಜ್ಯಕ್ಕೆ ಬಂದಿದೆ.
ಯುಪಿಎ ಸರಕಾರದ ಅವಧಿಯಲ್ಲಿ 4 ಪೈಸೆ ರಾಜ್ಯಕ್ಕೆ ಬರುತ್ತಿತ್ತು. ಈಗ 13 ರೂ. ಸಿಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ 2004-14ರ ಯುಪಿಎ ಅವಧಿಯಲ್ಲಿ ಕೇಂದ್ರದ ಅನುದಾನ 60,799 ಕೋ.ರೂ. ಬಂದಿದೆ. 2014-24ರ ವರೆಗಿನ ನರೇಂದ್ರ ಮೋದಿ ಅವಧಿಯಲ್ಲಿ 23, 393 ಕೋ. ರೂ. ಅನುದಾನ ಬಂದಿದೆ.
ರಾಜ್ಯಕ್ಕೆ ಕೇಂದ್ರ ಅಭಿವೃದ್ದಿ ಕಾರ್ಯ ಕೈಗೊಳ್ಳಲು ಕರ್ನಾಟಕಕ್ಕೆ 6,012 ಕೋ. ರೂ. ಬಡ್ಡಿರಹಿತ ಸಾಲ ನೀಡಿದ್ದು, 50 ವರ್ಷಗಳ ಬಳಿಕ ಸಾಲ ಮರಳಿಸಲು ಅವಕಾಶ ಕಲ್ಪಿಸಲಾಗಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಎಲ್ಲ ರಾಜ್ಯ ಸರಕಾರಗಳಿಗೆ ಶೇ.27 ತೆರಿಗೆ ಪಾಲು ಬರುತ್ತಿತ್ತು. ಅದನ್ನು ಯುಪಿಎ ಅವಧಿಯಲ್ಲಿ ಶೇ.37 ಕ್ಕೆ ಹೆಚ್ಚಿಸಬೇಕೆಂದು ಎಲ್ಲ ರಾಜ್ಯಗಳು ಒತ್ತಾಯಿಸಿದ್ದರೂ ಕಾಂಗ್ರೆಸ್ ಸರಕಾರ ಹೆಚ್ಚಿಸಿರಲಿಲ್ಲ. ನರೇಂದ್ರ ಮೋದಿ ಸರಕಾರ ಅದನ್ನು ಶೇ.40ಕ್ಕೆ ಏರಿಸಿದೆ ಎಂದು ಹೇಳಿದರು.
ಪೂರ್ವ ಸಿದ್ದತೆ ಇಲ್ಲದ ಗ್ಯಾರಂಟಿಗಾಗಿ ದಿವಾಳಿ ರಾಜ್ಯ ಸರಕಾರ ದಿವಾಳಿ ಆಗಿದೆ. ಗ್ಯಾರಂಟಿೆಗಳಿಗೆ 54 ಸಾವಿರ ಕೋ. ರೂ. ವೆಚ್ಚ ಆಗುತ್ತದೆ. ತನ್ನ ವೈಫಲ್ಯವನ್ನು ಮರೆಮಾಚಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು.
ಜನರಿಗೆ ಚೊಂಬು ಕೊಟ್ಟ ರಾಜ್ಯ ಸರಕಾರ
ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ಯೋಜನೆ ಜತೆಗೆ ರಾಜ್ಯ ಸರಕಾರವೂ ರೈತರಿಗೆ 4 ಸಾವಿರ ರೂ. ನೀಡುತ್ತಿತ್ತು. ರಾಜ್ಯ ಸರಕಾರ ಅದನ್ನು ಕಡಿತ ಮಾಡಿ, ರೈತರಿಗೆ ಚೊಂಬು ಕೊಟ್ಟಿದೆ ಎಂದು ಬೊಮ್ಮಾಯಿ ಆರೋಪಿಸಿದರು. ನಮ್ಮ
ಸರಕಾರದ ಅವಧಿಯಲ್ಲಿ ರೈತ ವಿದ್ಯಾನಿಧಿ ಯೋಜನೆ ಅಡಿಯಲ್ಲಿ 13 ಲಕ್ಷ ರೂ. ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೊಡಲಾಗಿತ್ತು, ಅದನ್ನು ನಿಲ್ಲಿಸಿದ್ದಾರೆ. ದಲಿತ ಸಮುದಾಯಕ್ಕೆ ಮೀಸಲಿಟ್ಟಿದ್ದ ಎಸ್‌ಸಿಪಿ-ಟಿಎಸ್‌ಪಿಯ 11,380 ಕೋ. ರೂ. ಎಸ್ಸಿಎಸ್ಟಿ ಅನುದಾನವನ್ನ ಗ್ಯಾರಂಟಿಗೆ ಬಳಸಿಕೊಂಡಿದ್ದಾರೆ. ಇದೆಲ್ಲ ಮಾಡಿ ರಾಜ್ಯದ ಜನತೆಗೆ ಚೊಂಬು ಕೊಟ್ಟಿದ್ದು ರಾಜ್ಯ ಸರಕಾರ ಎಂದರು.