ಹುಬ್ಬಳ್ಳಿ: ಮಗುವಿಗೆ ಲಿಂಗ ತಾರತಮ್ಯ ಮಾಡದೆ ಪಾಲಕರು ಶಿಕ್ಷಣ ಕೊಡಿಸಿದಾಗ ಸಮಾಜದಲ್ಲೂ ಸಮಾನತೆ ಬರಲು ಸಾಧ್ಯವೆಂದು ಬೆಂಗಳೂರಿನ ನಿಮ್ಹಾನ್ಸ್ ನಿರ್ದೇಶಕಿ ಡಾ| ಪ್ರತಿಮಾ ಮೂರ್ತಿ ಹೇಳಿದರು.
ಭಾರತೀಯ ವೈದ್ಯಕೀಯ ಸಂಸ್ಥೆ(ಐಎಂಎ)ಯ ರಾಜ್ಯ ಮಹಿಳಾ ವೈದ್ಯರ ಘಟಕ (ಡಬ್ಕುಡಿಡಬ್ಕು) ಹುಬ್ಬಳ್ಳಿಯು-ಐಎಂಎ ಕೆಎಸ್‌ಬಿ ವತಿಯಿಂದ ನಗರದ ಗೋಕುಲ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ರವಿವಾರ ಹಮ್ಮಿಕೊಂಡಿದ್ದ 4ನೇ ರಾಜ್ಯಮಟ್ಟದ ಮಹಿಳಾ ವೈದ್ಯರ ಸಮ್ಮೇಳನ “ಕನಕ-2022′ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಮೇಲು-ಕೀಳು ಎಂದು ಕಾಣದೆ ಅವರಿಗೆ ನ್ಯಾಯಸಮ್ಮತವಾಗಿ ಕಂಡು ಸಮಾನತೆಯ ಪಾಠ ಕಲಿಸಿ. ಲೈಂಗಿಕ ದೌರ್ಜನ್ಯ ಹಾಗೂ ವರದಕ್ಷಿಣೆ ಕಿರುಕುಳಕ್ಕೆ ಒಳಗಾಗುವ ಮಹಿಳೆಯು ಇದರ ವಿರುದ್ಧ ಧ್ವನಿ ಎತ್ತಬೇಕು. ಅಂಥವರ ಮೇಲೆ ದೂರು ಸಲ್ಲಿಸಬೇಕು. ಹೆಣ್ಣು ಭ್ರೂಣಹತ್ಯೆ, ಮಹಿಳೆಯರ ಮೇಲಿನ ಅತ್ಯಾಚಾರ ಕುರಿತು ಸಮಾಜದಲ್ಲಿನ ಎಲ್ಲರೂ ಖಂಡಿಸಬೇಕು ಎಂದರು.
ದೂರದರ್ಶನ ಚಂದನ ಟಿವಿಯ ಸಹಾಯಕ ನಿರ್ದೇಶಕಿ ಡಾ| ನಿರ್ಮಲಾ ಯಲಿಗಾರ ಮಾತನಾಡಿ, ಜಾಗತೀಕರಣ, ಆಧುನೀಕರಣದಿಂದಾಗಿ ಅನಾರೋಗ್ಯ ಜಾಸ್ತಿಯಾಗುತ್ತಿದೆ. ಆದರೂ ಇಂದು ಮಹಿಳೆ ಕುಟುಂಬ ನಿರ್ವಹಣೆ, ಆರೋಗ್ಯ ಸಮಸ್ಯೆ ಸೇರಿದಂತೆ ಹಲವು ಒತ್ತಡಗಳನ್ನು ಎದುರಿಸಿ ಸಮರ್ಥವಾಗಿ ಮುನ್ನುಗ್ಗುತ್ತಿದ್ದಾಳೆ. ಕೋವಿಡ್ ಸಂದರ್ಭದಲ್ಲಿ ವೈದ್ಯರ ಕಾರ್ಯ ಶ್ಲಾಘನೀಯ. ಅಂತಹ ಭಯಾನಕ ಸನ್ನಿವೇಶವನ್ನು ಭಾರತೀಯ ವೈದ್ಯ ಕ್ಷೇತ್ರ ಸಮರ್ಥವಾಗಿ ಎದುರಿಸಿದೆ ಎಂದು ಹೇಳಿದರು.
ಐಎಂಎ ಡಬ್ಕುಡಿಡಬ್ಕು ರಾಷ್ಟ್ರೀಯ ಗೌರವ ಕಾರ್ಯದರ್ಶಿ ಕವಿತಾ ರವಿ, ಐಎಂಎ ಕೆಎಸ್‌ಬಿ ಅಧ್ಯಕ್ಷ ಡಾ| ಸುರೇಶ ಕುಡ್ವಾ, ಐಎಂಎ ಡಬ್ಕುಡಿಡಬ್ಕು ಕೆಎಸ್‌ಬಿ ಅಧ್ಯಕ್ಷೆ ಡಾ| ಗೀತಾ ದೊಪ್ಪ, ಐಎಂಎ ದಕ್ಷಿಣ ವಲಯ ಜಂಟಿ ಕಾರ್ಯದರ್ಶಿ ಡಾ| ಅನುರಾಧಾ ಪರಮೇಶ ಮಾತನಾಡಿದರು. ಐಎಂಎ ಕೆಎಸ್‌ಬಿ ಹಿರಿಯ ಉಪಾಧ್ಯಕ್ಷ ಡಾ| ಎಸ್.ವೈ. ಮುಲ್ಕಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ| ಶಿವಕುಮಾರ ಲಕ್ಕೋಳ, ಡಾ| ಜಿ.ಕೆ. ಭಟ್, ಸಮ್ಮೇಳನ ಆಯೋಜನಾ ಕಾರ್ಯದರ್ಶಿ ಡಾ| ಶಶಿಕಲಾ ಹೊಸಮನಿ, ಐಎಂಎ (ಡಬ್ಕುಡಿಡಬ್ಕು ಹುಬ್ಬಳ್ಳಿ ಅಧ್ಯಕ್ಷೆ ಡಾ| ಸಂಗೀತಾ ಅಂಟರತಾನಿ, ಡಾ| ಮಂಜುನಾಥ ನೇಕಾರ, ಡಾ| ಕಾಂಚನಾ ಯು.ಟಿ. ಮೊದಲಾದವರಿದ್ದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಹಾಗೂ ಘೋಷಣೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು.
ಸಮ್ಮೇಳನ ಸಂಯೋಜನಾ ಅಧ್ಯಕ್ಷೆ ಡಾ| ಜಯಶ್ರೀ ಬಳಿಗಾರ ಸ್ವಾಗತಿಸಿದರು. ಡಾ| ಅರ್ಚನಾ ನಿರೂಪಿಸಿದರು. ಡಾ| ಭಾರತಿ ಭಾವಿಕಟ್ಟಿ ವಂದಿಸಿದರು.