Advertisement

ಗುರಿಯಲ್ಲ, ಜೀವನಪಥವೇ ಖುಷಿಕರ: ಕೃಪಾಕರ,ಸೇನಾನಿ

09:21 PM Aug 30, 2019 | Sriram |

ಉಡುಪಿ: ಗುರಿಯನ್ನು ಸಾಗುವ ಜೀವನಪಥವೇ ಖುಷಿಕರ ಎಂದು ವನ್ಯಜೀವಿ ತಜ್ಞರಾದ ಕೃಪಾಕರ ಮತ್ತು ಸೇನಾನಿ ಅಭಿಪ್ರಾಯಪಟ್ಟರು. ಅವರು ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ಅರಣ್ಯ ಇಲಾಖೆ ಮತ್ತು ಉಡುಪಿ ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ ವನ್ಯಜೀವಿ ಪತ್ರಿಕೋದ್ಯಮ ಮತ್ತು ಅರಣ್ಯ ಸಂರಕ್ಷಣೆ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

Advertisement

ಪತ್ರಕರ್ತರಾದವರು ತಜ್ಞರಾಗಿ ಬರೆದಾಗ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ತಪ್ಪು ಬರೆದರೆ ತಪ್ಪು ಮಾಹಿತಿ ರವಾನೆಯಾಗುತ್ತದೆ ಎಂದು ಕಿವಿಮಾತು ನುಡಿದರು.
ವಿಷಯ ತಜ್ಞತೆಯ ವರದಿಗಾರರು ಒಂದು ಸ್ಟೋರಿ ಬರೆಯಲು ವರ್ಷ ತೆಗೆದುಕೊಳ್ಳುವುದಿದೆ. ಬಿಬಿಸಿ ವರದಿಗಾರನೊಬ್ಬ ಮೈಸೂರಿನ ಅರಣ್ಯ ಪ್ರದೇಶದಲ್ಲಿ ಒಂದು ತಿಂಗಳು ಬೆಳಗ್ಗೆ 4.30ಕ್ಕೆ ಹೊರಗೆ ಹೋದವ ರಾತ್ರಿ 9 ಗಂಟೆಗೆ ಬರುತ್ತಿದ್ದ. ಈತ ಹತ್ತು ಪುಟಗಳ ಸ್ಟೋರಿಗೆ ಎರಡು ವರ್ಷ ತೆಗೆದುಕೊಂಡಿದ್ದ. ಇವರೊಂದಿಗೆ ಇರುವ ಛಾಯಾಚಿತ್ರಗ್ರಾಹಕನೂ ಇವನೊಂದಿಗೇ ಇರುತ್ತಿದ್ದ. ಇಂತಹ ಪತ್ರಿಕೋದ್ಯಮ ಇಲ್ಲಿ ಕಂಡುಬರುತ್ತದೆಯೆ ಎಂದು ಪ್ರಶ್ನಿಸಿದರು.

ಒಂದು ಬೃಹತ್‌ ಹಿರಿಯ ಮರದ ಹಿಂದೆ ದೊಡ್ಡ ಇತಿಹಾಸವಿರುತ್ತದೆ. ಮಾನವರೂ ವಿಶ್ವದ ಒಂದು ಜೀವ ಜಾಲಗಳಲ್ಲಿ ಒಂದು ಜೀವಿ. ಪರಿಸರಕ್ಕೆ ಹಾನಿ ಮಾಡಿದರೆ ಅದಕ್ಕೇನೂ ಆಗುವುದಿಲ್ಲ. ಅದು ನಿಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಭೂಮಿಗೆ ಏನಾಗಬೇಕಾಗಿದೆ? ಲಕ್ಷಾಂತರ ಜೀವಿಗಳು ಬಂದು ಹೋಗುತ್ತಿವೆ. ಕೇರಳದಲ್ಲಿ ಆದ ಅನಾಹುತದಿಂದ ಪರಿಸರಕ್ಕೆ ಏನೋ ಎಡವಟ್ಟು ಆಗುತ್ತಿದೆ ಎಂದು ಅರಿವಾಗುತ್ತಿದೆ. ನಾವು ಭೂಮಿಯ ಒಂದು ಜೀವಿ ಎಂದು ತಿಳಿವಳಿಕೆ ಬಂದರೆ ಸಾಕು ಎಂದರು.

ಆನೆಗಳಲ್ಲಿಯೂ ಗಂಡು, ಹೆಣ್ಣಿನ ನೈಸರ್ಗಿಕ ಭಿನ್ನ ವರ್ತನೆ
ಗಂಡು ಆನೆ ಮರಿ ಪುಂಡಾಟಿಕೆ ಮಾಡುತ್ತಲೇ ಇರುತ್ತದೆ. ಹೆಣ್ಣು ಆನೆ ಮರಿ ಎರಡು ವರ್ಷವಾಗುತ್ತಲೇ ತಾಯಿಯ ಚಿಕ್ಕ ಮರಿಗಳನ್ನು ಸಾಕಲು ಬೇಕಾದ ಸಹಾಯ ಮಾಡುತ್ತಿರುತ್ತದೆ. ಹೆಣ್ಣು ಆನೆಗಳಲ್ಲಿ ಅಜ್ಜಿ, ಮಗಳು, ಮೊಮ್ಮಗಳು ಇರುವ 60ರಿಂದ 100 ಆನೆಗಳ ಸಮೂಹ ಇರುತ್ತದೆ. ಗಂಡು ಆನೆ ಮರಿ ತಾಯಿಯಿಂದ ಬೇರೆಯಾಗಿ ಪುಂಡಾಟಿಕೆ ಮಾಡಿಕೊಂಡು ಒಂಟಿಯಾಗಿರುವ ದೊಡ್ಡ ಗಂಡು ಆನೆಯತ್ತ ಹೋಗುವಾಗ ಅದು ಸ್ವೀಕರಿಸುವುದಿಲ್ಲ. ಅಲ್ಲಿ ಚಮಚಾಗಿರಿ ಮಾಡಿ ಹತ್ತಿರ ಆಗುತ್ತದೆ. ಇವೆಲ್ಲ ಸಮೂಹಗಳಿಗೆ ವರ್ಷದ ಸಂಚಾರದಲ್ಲಿ ಎಲ್ಲಿ ಆಹಾರ ಸಿಗುತ್ತದೆ, ಎಲ್ಲಿ ಯಾವಾಗ ನದಿ ದಾಟಲು ಕಷ್ಟವಾಗುತ್ತದೆ ಎಂಬಿತ್ಯಾದಿ ಜ್ಞಾನಗಳು ಸಂತತಿಯಿಂದ ಸಂತತಿಗೆ ವರ್ಗಾವಣೆಯಾಗಿರುತ್ತದೆ. 1985ರಿಂದ 95ರವರೆಗೆ ದೊಡ್ಡ ಪ್ರಮಾಣದಲ್ಲಿ ದಂತದ ಆಸೆಗಾಗಿ ಗಂಡು ಆನೆಗಳನ್ನು ಕೊಲ್ಲಲಾಯಿತು. ಇದರಿಂದಾಗಿ ಹತ್ತು ವರ್ಷಗಳ ಗಂಡು ಆನೆಗಳ ಅನುಭವ ನಷ್ಟವಾಯಿತು. ಚಿಕ್ಕ ಆನೆಗಳಿಗೆ ಎಲ್ಲಿ ಹೋಗಬೇಕು? ಎಲ್ಲಿ ಆಹಾರ ಸಿಗುತ್ತದೆ? ಎಲ್ಲಿ ಹೋದರೆ ಅಪಾಯವಿರುತ್ತದೆ ಎಂಬ ಜ್ಞಾನ ಸಿಗದೆ ಪರದಾಡುವಂತಾಯಿತು ಎಂದು ಸೇನಾನಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next