Advertisement

JDS ಮೈತ್ರಿ ಕುರಿತು ರಾಜ್ಯ ಮಟ್ಟದ ಚರ್ಚೆ ಜನವರಿಯಲ್ಲಿ: ನಳಿನ್ ಕುಮಾರ್ ಕಟೀಲ್

06:40 PM Nov 03, 2023 | Team Udayavani |

ಹುಬ್ಬಳ್ಳಿ: ಎನ್ ಡಿ ಎ ಜತೆ ಜೆಡಿಎಸ್ ಮೈತ್ರಿ ಕುರಿತು ದೆಹಲಿ ಮಟ್ಟದಲ್ಲಿ ಚರ್ಚೆಯಾಗಿದ್ದು ರಾಜ್ಯ ಮಟ್ಟದಲ್ಲಿನ ಚರ್ಚೆ ಜನವರಿಯಲ್ಲಿ ನಡೆಯಲಿದೆ ಎಂದು ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರ ಮಟ್ಟದಲ್ಲಿ ಜೆಡಿಎಸ್ ಜತೆಗೆ ಮೈತ್ರಿ ವಿಚಾರ ಚರ್ಚೆಯಾಗಿದೆ ರಾಜ್ಯ ಮಟ್ಟದಲ್ಲಿ ಏನೆಲ್ಲಾ ವಿಷಯಗಳು ಚರ್ಚೆಯಾಗಬೇಕು ಎಂಬುದರ ಬಗ್ಗೆ ಜನವರಿಯಲ್ಲಿ ಸ್ಪಷ್ಟ ಚಿತ್ರಣ ಮೂಡಲಿದೆ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕರನ್ನಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಮಾಡಲಾಗುತ್ತಿದೆ ಎಂಬ ಸುದ್ದಿ ಹಬ್ಬಿರುವ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕನ ಆಯ್ಕೆಯನ್ನು ಪಕ್ಷದ ವರಿಷ್ಠರು ಸೂಕ್ತ ಸಮಯದಲ್ಲಿ ನಿರ್ಣಯ ಕೈಗೊಳ್ಳಲಿದ್ದಾರೆ ವಿಧಾನಸಭೆ ಚುನಾವಣೆ ಮುಗಿದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಆಯ್ಕೆ ಮುಖ್ಯವೇ ವಿನಃ, ವಿರೋಧಪಕ್ಷದ ನಾಯಕ ತತ್ ಕ್ಷಣಕ್ಕೆ ನಡೆಯಬೇಕೆಂದೇನಿಲ್ಲ ವಿಧಾನಸಭೆಯಲ್ಲಿರುವ ಬಿಜೆಪಿಯ 66 ಶಾಸಕರು ವಿರೋಧ ಪಕ್ಷದ ನಾಯಕನಾಗಿಯೇ ಕಾರ್ಯ ನಿರ್ವಹಿಸಿದ್ದಾರೆ ಎಂದರು.

ರಾಜ್ಯದಲ್ಲಿ ಬರದ ಛಾಯೆ ಹಾಗೂ ವಿದ್ಯುತ್ ಕ್ಷಾಮ ತಲೆದೂರಿದು ರಾಜ್ಯ ಸರ್ಕಾರ ಆಂತರಿಕ ಕಚ್ಚಾಟಕ್ಕೆ ಸಿಲುಕಿ ಜನರ ಸಮಸ್ಯೆಯನ್ನು ಬರದ ಸಂಕಷ್ಟ ಎರಡನ್ನು ಮರೆತಿದೆ. ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕರು ಸಚಿವರು ಕೇಂದ್ರದ ಮೇಲೆ ಗೂಬೆಕೂರಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ತತ್ ಕ್ಷಣಕ್ಕೆ ಬರ ಅಧ್ಯಯನ ತಂಡ ಕಳಿಸಿಕೊಟ್ಟಿದೆ. ರಾಜ್ಯ ಸರಕಾರ ಬರದಿಂದ ಏನೆಲ್ಲಾ ಹಾನಿಯಾಗಿದೆ ಎಷ್ಟು ವೆಚ್ಚ ತಗಲಲ್ಲಿದೆ ಎಂಬುದರ ಪ್ರಸ್ತಾವನೆಯನ್ನೇ ಇದುವರೆಗೂ ಕೇಂದ್ರಕ್ಕೆ ಸಲ್ಲಿಸಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸದಿದ್ದರೆ ಸಂಸದರು ಏನು ಮಾಡಲು ಸಾಧ್ಯವಿದೆ ಪ್ರಸ್ತಾವನೆ ನೀಡಿದರೆ ಕೇಂದ್ರದ ಮನವೊಲಿಕೆ ಕಾರ್ಯವನ್ನು ಸಂಸದರಾಗಿ ನಾವು ಮಾಡಬಹುದಾಗಿದೆ. ರಾಜ್ಯ ಸರ್ಕಾರ ಕೇಂದ್ರದ ಕಡೆ ಕೈ ತೋರಿಸುವ ಬದಲು ತನ್ನಲ್ಲಿರುವ ಅನುದಾನವನ್ನು ಬರ ಪರಿಹಾರಕ್ಕೆಂದು ಮೊದಲು ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.

Advertisement

ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಬರ ಅಧ್ಯಯನಕ್ಕೆ ತೆರಳಲ್ಲಿದ್ದು, ಪರಿಶೀಲಿಸಿದ ನಂತರ ಸಮಗ್ರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಯೋಜಿಸಲಾಗಿದೆ ಎಂದರು.

ರಾಜ್ಯದಲ್ಲಿ ವಿದ್ಯುತ್ ಕ್ಷಾಮದಿಂದಾಗಿ ರೈತರ ಕೃಷಿ ಪಂಪ್ ಸೆಟ್ ಗಳಿಗೂ ಸಮರ್ಪಕ ವಿದ್ಯುತ್ ದೊರೆಯುತ್ತಿಲ್ಲ ವಿದ್ಯುತ್ ಉತ್ಪಾದನೆ ನಿಟ್ಟಿನಲ್ಲಿ ಇಲ್ಲವೇ ಖರೀದಿಗೆ ರಾಜ್ಯ ಸರ್ಕಾರ ಗಂಭೀರ ಯತ್ನ ತೋರುತ್ತಿಲ್ಲ. ರಾಜ್ಯಕ್ಕೆ ಕೇಂದ್ರದಿಂದ ಸಮರ್ಪಕ ಹಾಗೂ ಗುಣಮಟ್ಟದ ಕಲ್ಲಿದ್ದಲು ಬರುತ್ತಿಲ್ಲ ಎಂಬ ಕಾಂಗ್ರೆಸ್ ನವರ ಆರೋಪ ತಳ್ಳಿ ಹಾಕಿದ ಅವರು ಮೊದಲು ರಾಜ್ಯ ಸರ್ಕಾರ ಕೇಂದ್ರಕ್ಕೆ ನೀಡಬೇಕಾದ ಕಲ್ಲಿದ್ದಲು ಬಾಕಿ ಪಾವತಿಸಲಿ. ಒಂದು ವೇಳೆ ಕೇಂದ್ರ ಸರ್ಕಾರ ಕಲ್ಲಿದ್ದಲು ಪೂರೈಕೆ ಸ್ಥಗಿತಗೊಳಿಸಿದ್ದರೆ ಇಡೀ ರಾಜ್ಯ ಕಗ್ಗತ್ತಲಿನಲ್ಲಿ ಇರಬೇಕಾಗಿತ್ತು ಎಂದರು.

ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇಷ್ಟು ಬೇಗ ಜನ ವಿರೋಧಿ ಸರ್ಕಾರ ಆಗುತ್ತದೆ ಎಂದು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ ಬರದ ಛಾಯೆಯಿಂದ ಸುಮಾರು 250 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಸಚಿವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರೂ ಐಟಿ ದಾಳಿಯಾದರೂ, ತಮಿಳುನಾಡಿಗೆ ಕಾವೇರಿ ನೀರು ಹರಿಸಿದರೂ ಯಾವುದರ ಬಗ್ಗೆಯೂ ರಾಜ್ಯ ಸರ್ಕಾರದಿಂದ ಸ್ಪಷ್ಟ ಹೇಳಿಕೆ ಇಲ್ಲವಾಗಿದೆ. ಆಂತರಿಕ ಕಚ್ಚಾಟದಲ್ಲಿ ತೊಡಗಿರುವ ಕಾಂಗ್ರೆಸ್ ಸರಕಾರ ತಾನಾಗಿಯೇ ಪತನಗೊಳ್ಳಲಿದ್ದು, ಬಿಜೆಪಿ ಆ ಯತ್ನ ಮಾಡುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next